ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ತೆರಾಲು ಗ್ರಾಮದ ಬೊಳ್ಳೇರ ಎಂ. ಚಿಣ್ಣಪ್ಪ ಅವರ ಕೊಟ್ಟಿಗೆಗೆ ಗುರುವಾರ ಮುಂಜಾನೆ ಆರು ಗಂಟೆ ವೇಳೆಗೆ ಹಸು ಅರಚುವ ಶಬ್ಧ ಕೇಳಿ ನೋಡಿದಾಗ ಕರುವನ್ನು ಹುಲಿ ಎಳೆದೊಯ್ದಿರುವುದು ಕಂಡು ಬಂದಿದೆ.
ನಂತರ ಪರಿಶೀಲನೆ ನಡೆಸಿದಾಗ ಸಮೀಪದ ಕಾಫಿ ತೋಟದ ಹಳ್ಳದಲ್ಲಿ ಕರುವನ್ನು ಕೊಂದು ಭಾಗಶ: ತಿಂದಿರುವುದು ಪತ್ತೆಯಾಗಿದೆ.ಸುದ್ದಿ ತಿಳಿದೊಡನೆ ಸ್ಥಳಕ್ಕೆ ರಾಜ್ಯ ವನ್ಯಜೀವಿ ಸಂಘದ ಸದಸ್ಯ ಸಂಕೇತ್ ಪೂವಯ್ಯ, ಕಾರ್ಯಾಚರಣೆ ತಂಡ ಭೇಟಿ ನೀಡಿ ಕಾರ್ಯಾಚರಣೆಯ ಸ್ಥಳವನ್ನು ಬದಲಾಯಿಸಿ ಹುಲಿ ದಾಳಿ ನಡೆಸಿರುವ ಸ್ಥಳದಲ್ಲಿ ಅಟ್ಟಣಿಗೆಯನ್ನು ನಿರ್ಮಿಸಿ ಸುತ್ತಮುತ್ತ ಕ್ಯಾಮರಾ ಅಳವಡಿಸಲು ಸಂಕೇತ್ ಪೂವಯ್ಯ ಅವರು ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಹಲವು ಕ್ಯಾಮರಗಳನ್ನು ಅಳವಡಿಸಿದ್ದು 14 ಅಡಿಯ ಅಟ್ಟಣಿಗೆಯನ್ನು ನಿರ್ಮಿಸಿ ಹುಲಿಯನ್ನು ಅರವಳಿಕೆ ನೀಡುವ ಗುಂಡು ಹಾರಿಸಿ ಸೆರೆ ಹಿಡಿಯಲು ಅಥವಾ ಚಲನವಲನ ಗುರುತಿಸಲು ಕ್ರಮ ಕೈಗೊಂಡಿದ್ದಾರೆ.ಈ ಸಂದರ್ಭ ಮಾಜಿ ತಾ. ಪಂ. ಸದಸ್ಯ ಬೊಳ್ಳೇರ ಪೊನ್ನಪ್ಪ, ಸೋಮಯ್ಯ, ರಾಣಾ ಕಾರ್ಯಪ್ಪ, ವಿನಿಲ್, ಅನೂಪ್, ಕಾರ್ಯಪ್ಪ, ಬೊಟ್ಟಂಗಡ ಮಹೇಶ್, ಚಂಗಣಮಾಡ ಜೀವನ್, ಕಾರ್ಯಾಚರಣೆ ತಂಡದ ಸಿಬ್ಬಂದಿ ಹಾಜರಿದ್ದರು.