ವಿಚಾರಣಾಧೀನ ಕೈದಿ ಜೈಲಲ್ಲೇ ಆತ್ಮಹತ್ಯೆ

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಜಿಲ್ಲೆಯ ಸವಣೂರು ತಾಲೂಕು ಹತ್ತಿಮತ್ತೂರ ಗ್ರಾಮದಲ್ಲಿ 2018ರ ಜೂನ್ ತಿಂಗಳಲ್ಲಿ ಅನೈತಿಕ ಸಂಬಂಧದ ವಿಚಾರಕ್ಕೆ ಇಬ್ಬರನ್ನು ಬರ್ಬರವಾಗಿ ಕೊಲೆಗೈದು ಜೈಲು ಸೇರಿದ್ದ. ಈ ಪ್ರಕರಣದ ವಿಚಾರಣೆ ಇನ್ನೂ ನಡೆದಿತ್ತು.

ಹಾವೇರಿ: ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಕಾರಾಗೃಹದ ಸ್ಟೋರ್ ರೂಂನಲ್ಲಿ ನೇಣಿಗೆ ಶರಣಾಗಿರುವ ಘಟನೆ ಸಮೀಪದ ಕೆರೆಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ನಡೆದಿದೆ. ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ಕೋಟೆಪ್ಪ ಅಂಬಿಗೇರ(43) ಎಂಬಾತ ನೇಣಿಗೆ ಶರಣಾಗಿರುವ ಕೈದಿ. ಈತ ಜಿಲ್ಲೆಯ ಸವಣೂರು ತಾಲೂಕು ಹತ್ತಿಮತ್ತೂರ ಗ್ರಾಮದಲ್ಲಿ 2018ರ ಜೂನ್ ತಿಂಗಳಲ್ಲಿ ಅನೈತಿಕ ಸಂಬಂಧದ ವಿಚಾರಕ್ಕೆ ಇಬ್ಬರನ್ನು ಬರ್ಬರವಾಗಿ ಕೊಲೆಗೈದು ಜೈಲು ಸೇರಿದ್ದ. ಈ ಪ್ರಕರಣದ ವಿಚಾರಣೆ ಇನ್ನೂ ನಡೆದಿತ್ತು.ಕಾರಾಗೃಹದ ಅಡುಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೋಟೆಪ್ಪ ಭಾನುವಾರ ಬೆಳಗ್ಗೆ ಸ್ಟೋರ್ ರೂಂನಲ್ಲಿ ಸಾಮಗ್ರಿ ತರಲು ಹೋಗುತ್ತೇನೆಂದು ಹೋಗಿ ನೇಣಿಗೆ ಶರಣಾಗಿದ್ದಾನೆ. ಈತ ಹೃದಯ ಸಂಬಂಧಿ ಹಾಗೂ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ನಾಲ್ಕೈದು ಬಾರಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಜೈಲರ್ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನ್ಯಾಯಾಂಗ ತನಿಖೆ ನಡೆದಿದೆ. ಕೋಟೆಪ್ಪ ಅಂಬಿಗೇರ ಮೃತದೇಹ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ಕುಟುಂಬಸ್ಥರು ಆಗಮಿಸಿ ಕಣ್ಣೀರಿಡುತ್ತಿದ್ದಾರೆ. ಜತೆಗೆ ಈತನ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಅಂತರ ಜಿಲ್ಲಾ ಮನೆ ಕಳ್ಳನ ಬಂಧನ

ರಾಣಿಬೆನ್ನೂರು: ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ವಿನೋಬ ನಗರದ ನಿವಾಸಿ ರಾಜ ಉರ್ಫ್‌ ಫುಕರಾಜ್ ಬಂಧಿತ ಆರೋಪಿ.ಆರೋಪಿಯು ಕಳೆದ ಜ. 7ರಂದು ನಗರದಲ್ಲಿ ಮನೆ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಈ ಹಿನ್ನೆಲೆ ಆರೋಪಿಯ ಪತ್ತೆಗಾಗಿ ಎಸ್‌ಪಿ ಅಂಶುಕುಮಾರ, ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ, ರಾಣಿಬೆನ್ನೂರು ಉಪ ವಿಭಾಗದ ಪ್ರಭಾರ ಡಿಎಸ್‌ಪಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡವು ದಾವಣಗೆರೆ ನಿಟವಳ್ಳಿ ಬಳಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿತು. ಆರೋಪಿಯು ವಿಚಾರಣೆ ವೇಳೆ ನಗರದಲ್ಲಿ ತಾನು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ದಾವಣಗೆರೆಯ ಒಂದು ಸ್ಥಳದಲ್ಲಿ ಮುಚ್ಚಿ ಇಟ್ಟಿರುವುದಾಗಿ ಮತ್ತು ತನ್ನ ಖರ್ಚಿಗೆ ಕೆಲವೊಂದು ಸಣ್ಣಪುಟ್ಟ ಆಭರಣಗಳನ್ನು ದಾರಿಹೋಕರಿಗೆ ಮಾರಿರುವುದಾಗಿ ಬಾಯಿ ಬಿಟ್ಟಿದ್ದಾನೆ.ಬಂಧಿತನಿAದ 31.600 ಗ್ರಾಂ ಮಿಲಿ ತೂಕದ ಒಂದು ಜೊತೆ ಬಂಗಾರದ ಕರಿಮಣಿ ಬಳೆ, 30 ಗ್ರಾಂ ಒಂದು ಜೊತೆ ಬಂಗಾರದ ಬಳೆ, 31.70 ಗ್ರಾಂ ಒಂದು ಬಂಗಾರದ ಮುತ್ತಿನ ಸರ, 7.400 ಗ್ರಾಂ ಒಂದು ಬಂಗಾರದ ಬ್ರಾಸ್ ಲೈಟ್ 9.800 ಗ್ರಾಂ ಒಂದು ಬಂಗಾರದ ಬಳೆ ಸೇರಿದಂತೆ ₹7,47,116.00 ಮೌಲ್ಯದ 109.87 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಣಿಬೆನ್ನೂರು ಉಪ ವಿಭಾಗದ ಪ್ರಭಾರ ಡಿಎಸ್‌ಪಿ ಎಂ.ಎಸ್. ಪಾಟೀಲ, ಸಿಪಿಐ ಡಾ.ಶಂಕರ, ಪಿಎಸ್‌ಐಗಳಾದ ಗಡ್ಡೆಪ್ಪ ಎಚ್.ಎನ್. ದೊಡ್ಡಮನಿ, ಹಾವೇರಿ ಬೆರಳು ಮುದ್ರೆ ಘಟಕದ ಬಿ.ಎಚ್. ಕಿತ್ತೂರ ಪಿ.ಐ., ಎಂ.ಕೆ. ಬಣಕಾರ, ಎಚ್.ಸಿ. ಗಿರೀಶ ಕಡೇಮನಿ, ಕಿರಣ ಕುಮಾರ ಕೆ. ಶಿವರಾಜ ಎಂ. ಯತ್ತಿನಹಳ್ಳಿ ಮತ್ತು ಠಾಣೆಯ ಸಿಬ್ಬಂದಿಗಳಾದ ಸಿ.ಡಿ. ಸಣ್ಣಮನಿ, ವಿಠಲ್ ಡಿ.ಬಿ., ಎಂ.ಜಿ. ಮೇಲಗೇರಿ, ರಮೇಶ ಕುಸಗೂರ, ಮಂಜುನಾಥ ಏರೇಸಿಮಿ, ಆರ್.ಎಂ. ವಿನಾಯಕ, ಎಲ್.ಬಿ. ಕರಿಗಾರ. ವೈ.ಬಿ. ಓಲೇಕಾರ. ಕೆ.ಎನ್. ಲಮಾಣಿ, ಎಸ್.ಎಂ. ಪಾಳಂಕರ, ಪಿ.ಕೆ. ಸನದಿ, ಚಾಲಕರಾದ ಶ್ರೀಕಾಂತ್, ಮಂಜುನಾಥ, ತಾಂತ್ರಿಕ ವಿಭಾಗದ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ತನಿಖಾ ತಂಡದ ಕಾರ್ಯಕ್ಕೆ ಎಸ್‌ಪಿ ಅಂಶುಕುಮಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share this article