ಮಂಡ್ಯ:
ತಾಲೂಕಿನ ಬೂದನೂರು, ಇಂಡುವಾಳು ಸೇರಿದಂತೆ ಹಲವೆಡೆ ನಿರ್ಮಿಸಿರುವ ಅಂಡರ್‌ಪಾಸ್‌ಗಳಲ್ಲಿ ಗ್ರಾಮದ ಹಲವರು ಮನೆಯ ಬಳಿ ಜಾಗವಿಲ್ಲವೆಂಬ ಕಾರಣಕ್ಕೆ ಕಾರುಗಳು, ಗೂಡ್ಸ್ ಟೆಂಪೋ, ಮಿನಿ ಕ್ಯಾಂಟರ್‌ಗಳನ್ನು ಅಲ್ಲಿ ನಿಲ್ಲಿಸುತ್ತಿದ್ದಾರೆ. ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಅಪಘಾತ ಸಂಭವಿಸುವುದಕ್ಕೆ ಎಡೆಮಾಡಿಕೊಟ್ಟಿದೆ.
ಅಂಡರ್ ಪಾಸ್‌ಗಳನ್ನು ಹೆದ್ದಾರಿಯ ಸರ್ವೀಸ್ ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆಯ ಗ್ರಾಮಗಳಿಗೆ ತೆರಳುವ ವಾಹನಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಅಲ್ಲಿ ಯಾವುದೇ ವಾಹನಗಳನ್ನೂ ನಿಲ್ಲಿಸುವಂತಿಲ್ಲ. ಇಂತಹದೊಂದು ಸಾಮಾನ್ಯ ಜ್ಞಾನವಿಲ್ಲದವರು ನಿಯಮಬಾಹಿರವಾಗಿ ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಒಂದು ಕಡೆ ರಸ್ತೆಯಿಂದ ಮತ್ತೊಂದು ಕಡೆಯ ರಸ್ತೆಗೆ ಹೋಗುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಈ ಅಂಡರ್‌ಪಾಸ್‌ಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಅರಿವಿಲ್ಲದೆ ಎಷ್ಟೋ ವಾಹನಗಳು ಅಂಡರ್‌ಪಾಸ್ ಒಳಗೆ ನುಗ್ಗಿಬಂದಿವೆ. ತಕ್ಷಣವೇ ವಾಹನಗಳನ್ನು ನೋಡಿ ಗಾಬರಿಯಿಂದ ಬ್ರೇಕ್‌ಹಾಕಿ ನಿಲ್ಲಿಸಿರುವ ನಿದರ್ಶನಗಳೂ ಸಾಕಷ್ಟಿವೆ. ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ವಾಹನಗಳು ಸುಗಮವಾಗಿ ಸಂಚರಿಸುವುದಕ್ಕೂ ಸಾಧ್ಯವಾಗುತ್ತಿಲ್ಲೆಂಬ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ರಾತ್ರಿ ಸಮಯದಲ್ಲೂ ಖಾಸಗಿ ವಾಹನಗಳು ಅಲ್ಲೇ ನಿಲ್ಲುತ್ತಿರುವುದೂ ಅಪಘಾತಗಳು ಸಂಭವಿಸುವುದಕ್ಕೆ ಎಡೆಮಾಡಿಕೊಟ್ಟಿವೆ. ನೆರಳಿದೆ ಎಂಬ ಕಾರಣಕ್ಕೋ, ಅಂಡರ್‌ಪಾಸ್ ವಿಶಾಲವಾಗಿದೆ ಎಂಬ ಕಾರಣಕ್ಕೋ ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳನ್ನು ತಂದು ನಿಲ್ಲಿಸಿ ಹೋಗುತ್ತಿದ್ದಾರೆ. ವಾಹನಗಳನ್ನು ನಿಲ್ಲಿಸುವುದರಿಂದ ಸ್ಥಳದಲ್ಲಿ ಉಂಟಾಗಬಹುದಾದ ಅವ್ಯವಸ್ಥೆ, ವಾಹನಗಳ ಸಂಚಾರಕ್ಕೆ ಅಡಚಣೆ, ಅಪಘಾತಗಳು ಸಂಭವಿಸಬಹುದೆಂಬ ಆತಂಕದ ಅರಿವಿಲ್ಲದೆ ನಿಲ್ಲಿಸುತ್ತಿದ್ದಾರೆ. ಈಗಲಾದರೂ ಪೊಲೀಸರು ಅಪಘಾತ-ಅನಾಹುತಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ಖಾಸಗಿ ವಾಹನಗಳನ್ನು ಅಂಡರ್‌ಪಾಸ್‌ನಿಂದ ಖಾಲಿ ಮಾಡಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.