ತಿಪಟೂರು: ನಗರದ ಗಾಂಧಿನಗರದ ಬಳಿ ಕೋಟ್ಯಾಂತರ ರು. ಖರ್ಚು ಮಾಡಿ ರೈಲ್ವೆ ಇಲಾಖೆ ನೂತನವಾಗಿ ನಿರ್ಮಿಸಿರುವ ಅಂಡರ್‌ಪಾಸ್ ಕೆಳಭಾಗದಲ್ಲಿ ಮಳೆ ನೀರು ವಿಪರೀತವಾಗಿ ಶೇಖರಣೆಯಾಗಿ ವಾಹನ ಸವಾರ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಅಂಡರ್‌ಪಾಸ್ ಮೂಲಕ ಕೆರೆಗೋಡಿ-ರಂಗಾಪುರ, ದಸರೀಘಟ್ಟಕ್ಕೆ ಜನರು, ವಾಹನಗಳು ಓಡಾಡುತ್ತವೆ. ಕೊಬ್ಬರಿ ಮಾರುಕಟ್ಟೆ ಗಾಂಧಿನಗರ, ಬಸವೇಶ್ವರ ನಗರ ಭಾಗದ ಬಡಾವಣೆಗಳ ಜನರು ಸಹ ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಮಳೆ ನೀರು, ಕೆಸರು ತುಂಬಿರುವುದರಿಂದ ತೊಂದರೆಯಾಗಿದೆ. ಅಂಡರ್‌ಪಾಸ್ ನಿರ್ಮಿಸುವಾಗ ಚರಂಡಿ ವ್ಯವಸ್ಥೆ ಮಾಡಿದ್ದರೂ ಮಣ್ಣು ತುಂಬಿಕೊಂಡು ಚರಂಡಿ ಕಟ್ಟಿಕೊಂಡಿದೆ. ನಿಗದಿತ ಸಮಯಕ್ಕೆ ಮಣ್ಣು ತೆಗೆದು ಸ್ವಚ್ಚತೆ ಮಾಡದ ಕಾರಣ ಮಣ್ಣಿನ ಮೇಲೆ ದ್ವಿಚಕ್ರ ವಾಹನಗಳು, ಆಟೋಗಳು ಆಯತಪ್ಪಿ ಬಿದ್ದು ಎದ್ದು ಕೈಕಾಲು ಮುರಿದುಕೊಳ್ಳುವ ಸನ್ನಿವೇಶ ಉಂಟಾಗಿದೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಯನ್ನು ಸ್ವಚ್ಚತೆ ಮಾಡಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.