ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದಾರೆ. ಕಳೆದ ೨೫ ವರ್ಷಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿನಿಮಾ ತಾರೆಯರಿಗೆ ಅವಕಾಶ ನೀಡುತ್ತಿದ್ದ ಕಾಂಗ್ರೆಸ್, ಈ ಬಾರಿ ಉದ್ಯಮಿ ಸ್ಟಾರ್ ಚಂದ್ರು ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗ ನಡೆಸಿದೆ.
ಚುನಾವಣೆಯಲ್ಲಿ ಜೆಡಿಎಸ್‌ನೊಳಗೆ ಒಗ್ಗಟ್ಟು ಪ್ರದರ್ಶಿಸಿದ ಮಾದರಿಯಲ್ಲೇ ಕಾಂಗ್ರೆಸ್ಸಿಗರು ಅವಿರತರ ಶ್ರಮ ವಹಿಸಿ ಹೋರಾಟ ನೀಡಿದ್ದಾರೆ. ಎರಡೂ ಪಕ್ಷಗಳ ಮುಖಂಡರು-ಕಾರ್ಯಕರ್ತರು ಗೆಲುವಿನ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಅವರದ್ದೇ ಆದ ಲೆಕ್ಕಾಚಾರಗಳೊಂದಿಗೆ ವಿಶ್ಲೇಷಣೆ ಮಾಡಿಕೊಂಡು ಜಯ ನಮ್ಮದೇ ಎಂದು ಎದೆತಟ್ಟಿಕೊಂಡು ಹೇಳುತ್ತಿದ್ದಾರೆ.ಮೇಲ್ನೋಟಕ್ಕೆ ಕುಮಾರಸ್ವಾಮಿ ಗೆಲುವು:
ಎಚ್.ಡಿ.ಕುಮಾರಸ್ವಾಮಿ ಯುವಕರು, ಮಹಿಳೆಯರಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಪರಿಚಿತರಾಗಿದ್ದಾರೆ. ಅವರನ್ನು ಹೊಸದಾಗಿ ಜಿಲ್ಲೆಯ ಜನರಿಗೆ ಪರಿಚಯಿಸಬೇಕಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿರುವ ಸಾಲ ಮನ್ನಾ, ರೈತರ ಆತ್ಮಹತ್ಯೆಗೆ ಸ್ಪಂದಿಸಿದ ರೀತಿ, ಋಣಮುಕ್ತ ಕಾಯ್ದೆ ಜಾರಿಗೆ ನಡೆಸಿದ ಪ್ರಯತ್ನ ಇದರ ಬಗ್ಗೆ ಜಿಲ್ಲೆಯ ಜನರು ಅಭಿಮಾನ ಹೊಂದಿದ್ದಾರೆ. ಅವರ ನಾಮಬಲವೊಂದೇ ಗೆಲುವಿಗೆ ಸಾಕು. ಅಲ್ಲದೇ, ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದ ಸಮಯದಲ್ಲಿ ಜೆಡಿಎಸ್‌ನವರು ಮಾಡಿಕೊಂಡ ಎಡವಟ್ಟುಗಳನ್ನು ಈ ಚುನಾವಣೆಯಲ್ಲಿ ಮಾಡಿಕೊಳ್ಳಲಿಲ್ಲ. ಮತದಾನದ ಪ್ರಮಾಣವೂ ಹೆಚ್ಚಾಗಿ ನಡೆದಿರುವುದರಿಂದ ಎಚ್.ಡಿ.ಕುಮಾರಸ್ವಾಮಿ ಗೆಲುವು ಬಹುತೇಕ ನಿಶ್ಚಿತ ಎನ್ನುವುದು ಜೆಡಿಎಸ್ ಪರವಿರುವವರ ಮಾತಾಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಅಷ್ಟು ಸುಲಭವಾಗೇನೂ ಇಲ್ಲ. ಕಾಂಗ್ರೆಸ್ ನಾಯಕರೂ ಎಲ್ಲಿಯೂ ಭಿನ್ನಾಭಿಪ್ರಾಯ, ಅಪಸ್ವರಗಳಿಗೆ ಕಾರಣವಾಗದಂತೆ ಚುನಾವಣೆ ನಡೆಸಿದ್ದಾರೆ. ಮಹಿಳಾ ಮತದಾರರು ಹಾಗೂ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ ಹಾಗೂ ಇತರೆ ಹಿಂದುಳಿದ ಜಾತಿಯವರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಒಕ್ಕಲಿಗ ಮತದಾರರಲ್ಲಿ ಶೇ.೭೦ರಷ್ಟು ಮತಗಳು ಜೆಡಿಎಸ್ ಕೈಹಿಡಿದು, ಶೇ.೩೦ರಷ್ಟು ಕಾಂಗ್ರೆಸ್ ಪರ ಚಲಾವಣೆಗೊಂಡಿದ್ದರೂ ಸಾಕು. ಹಿಂದುಳಿದ ವರ್ಗ ಮತ್ತು ಇತರೆ ಜಾತಿಯವರ ಮತಗಳು ಹೆಚ್ಚು ಕಾಂಗ್ರೆಸ್ ಕಡೆ ಚಲಾವಣೆಗೊಂಡಿರುವ ಸಾಧ್ಯತೆಗಳಿರುವುದರಿಂದ ಸ್ಟಾರ್ ಚಂದ್ರು ಗೆಲುವು ಸಾಧ್ಯವಾಲಿದೆ ಎನ್ನುವುದು ಕಾಂಗ್ರೆಸ್ಸಿಗರ ಮಾತಾಗಿದೆ.
ಗುಪ್ತಗಾಮಿನಿಯಂತಿರುವ ಮತಗಳು!:
ಹಿಂದುಳಿದ ಮತ್ತು ಇತರೆ ಹಿಂದುಳಿದ ಜಾತಿಯ ಮತಗಳು ಒಮ್ಮೊಮ್ಮೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಉಂಟು. ಆದರೆ, ಒಕ್ಕಲಿಗರು ಸಂಪೂರ್ಣವಾಗಿ ಒಗ್ಗಟ್ಟು ಪ್ರದರ್ಶಿಸಿದಾಗ ಇತರೆ ಹಿಂದುಳಿದ ಜಾತಿಯವರ ಮತಗಳು ಗೌಣವಾಗಿದ್ದ ಚುನಾವಣೆಗಳೂ ಇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬಹುತೇಕ ಒಕ್ಕಲಿಗ ಮತಗಳು ಹರಿದುಹೋಗುವ ಕಡೆಗೆ ಹಿಂದುಳಿದ ಜಾತಿಯ ಮತಗಳು ಹಿಂಬಾಲಿಸಿರುವ ನಿದರ್ಶನಗಳೂ ಇವೆ.
ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಮೈತ್ರಿ ಅಭ್ಯರ್ಥಿ ನಡುವೆ ಬಿರುಸಿನ ಕದನ ಏರ್ಪಟ್ಟಿದೆ. ಗೆಲುವು ಯಾರಿಗೆ ಎನ್ನುವುದನ್ನು ನಿಖರವಾಗಿ ಹೇಳಲಾಗುತ್ತಿಲ್ಲ. ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಗೆಲ್ಲಬಹುದು. ಎರಡೂ ಪಕ್ಷಗಳು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಮತಬೇಟೆಯಲ್ಲಿ ತೊಡಗಿದ್ದರಿಂದ ಫಲಿತಾಂಶ ಸಾಕಷ್ಟು ಕುತೂಹಲವನ್ನು ಕಾಯ್ದುಕೊಂಡಿದೆ.