ಇಂದು ಎಂಎಲ್‌ಸಿ ಎಲೆಕ್ಷನ್‌: ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರ

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರು ಸೇರಿದಂತೆ ನೆರೆಯ 5 ಜಿಲ್ಲೆಗಳಲ್ಲಿ ಸೋಮವಾರ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ಸೋಮವಾರ ನಡೆಯಲಿದೆ.

ಚಿಕ್ಕಮಗಳೂರು ಸೇರಿದಂತೆ 6 ಜಿಲ್ಲೆಗಳ ವ್ಯಾಪ್ತಿ । ಶಿಕ್ಷಕರ ಕ್ಷೇತ್ರದ ಕಣದಲ್ಲಿ 8 ಮಂದಿ । ಪದವೀಧರರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ಸೇರಿದಂತೆ ನೆರೆಯ 5 ಜಿಲ್ಲೆಗಳಲ್ಲಿ ಸೋಮವಾರ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆ ಸೋಮವಾರ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಕಣದಲ್ಲಿ ಈ ಬಾರಿ 8 ಮಂದಿ ಇದ್ದಾರೆ. 6 ಜಿಲ್ಲೆಗಳಲ್ಲಿ ಒಟ್ಟು 23,402 ಮಂದಿ ಮತದಾರರು ಇದ್ದಾರೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಇರುವ 4,224 ಮತದಾರರ ಮತ ಚಲಾವಣೆಗಾಗಿ 12 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ.

ನೈರುತ್ಯ ಪದವೀಧರರ ಕ್ಷೇತ್ರದ ಕಣದಲ್ಲಿ 10 ಮಂದಿ ಇದ್ದರೆ, ಇಲ್ಲಿ ಒಟ್ಟು 85,089 ಮತದಾರರು ಇದ್ದಾರೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯೊಂಲ್ಲೆ ಇರುವ 10,206 ಮಂದಿ ಮತದಾನಕ್ಕಾಗಿ 13 ಮತಗಟ್ಟೆಗಳನ್ನು ತೆರೆಯಲಾಗಿದೆ.

ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆ ಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತ ದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ಜೂ. 3 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಚುನಾವಣಾ ಆಯೋಗ ಆದೇಶಿಸಿದೆ.

ಮತದಾನ ಮಾಡುವ ಸಮಯದಲ್ಲಿ ಮತದಾರರು ಭಾವಚಿತ್ರವುಳ್ಳ ಗುರುತಿನ ಚೀಟಿ (ಇಪಿಐಸಿ) ನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಇಪಿಐಸಿ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗ ನಿರ್ಧರಿಸಿರುವ ಪೂರಕ ದಾಖಲಾತಿಗಳ ಪೈಕಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್‌ ಪೋರ್ಟ್‌ ಇವುಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

---- ಬಾಕ್ಸ್‌ ----ಎಲ್ಲೆಲ್ಲಿ ಮತದಾನ ಕೇಂದ್ರಗಳು ?

- ತಾಲೂಕು ಆಡಳಿತ ಸೌಧ ನರಸಿಂಹರಾಜಪುರ

- ಉಪ ವಿಭಾಗಾಧಿಕಾರಿ ನ್ಯಾಯಾಂಗ ಸಭಾಂಗಣ, ತಾಲೂಕು ಆಡಳಿತ ಸೌಧ, ತರೀಕೆರೆ

- ನ್ಯಾಯಾಂಗ ಸಭಾಂಗಣ, ತಾಲೂಕು ಆಡಳಿತ ಸೌಧ, ಕೊಪ್ಪ

- ತಾಲೂಕು ಕಚೇರಿ ಕಡೂರು

- ಸಹಾಯಕ ಖಜಾನೆ ಅಧಿಕಾರಿ ಕೊಠಡಿ ಕಡೂರು

- ತಾಲೂಕು ಆಡಳಿತ ಸೌಧ ಶೃಂಗೇರಿ

- ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಠಡಿ ಸಂಖ್ಯೆ ೧೮, ಬೇಲೂರು ರಸ್ತೆ

- ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಠಡಿ ಸಂಖ್ಯೆ ೨೦, ಬೇಲೂರು ರಸ್ತೆ

- ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಠಡಿ ಸಂಖ್ಯೆ ೧೯, ಬೇಲೂರು ರಸ್ತೆ, ಚಿಕ್ಕಮಗಳೂರು

- ತಾಲೂಕು ಆಡಳಿತ ಸೌಧ ಮೂಡಿಗೆರೆ

- ತಾಲೂಕು ಆಡಳಿತ ಸೌಧ ಅಜ್ಜಂಪುರ

- ಕರ್ನಾಟಕ ಪಬ್ಲಿಕ್ ಸ್ಕೂಲ್ ಕಳಸ

----ನಿಷೇಧ

ಮತದಾನ ಕಾರ್ಯ ಸುಗಮವಾಗಿ ನಡೆಯುವ ದೃಷ್ಟಿಯಿಂದ ಸರ್ಕಾರಿ ಕಚೇರಿಗಳಲ್ಲಿ ಮತದಾನ ದಿನ ದಂದು ಸಾರ್ವಜನಿಕ ಪ್ರವೇಶ ನಿಷೇಧಿಸಿ, ಎಂದಿನಂತೆ ಸಿಬ್ಬಂದಿ ಕಚೇರಿಗೆ ಹಾಜರಾಗಿ ಕಾರ್ಯ ನಿರ್ವಹಿಸುವುದು, ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಲೂರು ರಸ್ತೆ, ಚಿಕ್ಕಮಗಳೂರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್, ಕಳಸ ಈ ಎರಡು ಮತಗಟ್ಟೆ ಕೇಂದ್ರದ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Share this article