ಸಂವಿಧಾನ ಸರಿಯಾಗಿ ಅರ್ಥಮಾಡಿಕೊಳ್ಳಿ

KannadaprabhaNewsNetwork | Published : Nov 26, 2024 12:51 AM

ಸಾರಾಂಶ

ನಮ್ಮನ್ನು ಮೌಢ್ಯತೆಯ ಅಂಧಕಾರಕ್ಕೆ ತಳ್ಳುತ್ತಿರುವ ಬ್ರಾಹ್ಮಣ್ಯ ಸಂಪ್ರದಾಯಗಳು ಸವಾಲಾಗುತ್ತಿದ್ದರೂ ಇಂದಿಗೂ ಭಾರತದ ಸಂವಿಧಾನವನ್ನು ಯಾರು ಸಹ ಅಲುಗಾಡಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಸುಶಿಕ್ಷಿತರು ಸಂವಿಧಾನವನ್ನು ಬಿಟ್ಟು ಹಳೆಯ ಗೊಡ್ಡು ಸಂಪ್ರದಾಯಗಳ ಹಿಂದೆ ಹೋಗುತ್ತಿದ್ದಾರೆ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವುದೇ ಇದಕ್ಕೆ ಕಾರಣ

ಕನ್ನಡಪ್ರಭ ವಾರ್ತೆ ಮಾಲೂರು

ದೇಶದ ಸಂವಿಧಾನಕ್ಕೆ ಸವಾಲಾಗಿರುವ ಧರ್ಮಾಂದ ಮೂಲಭೂತವಾದಿಗಳನ್ನು ಮಣಿಸಬೇಕಾದರೆ ಮೊದಲು ಸಂವಿಧಾನವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಕಲ್ಬುರ್ಗಿಯ ವಿಚಾರವಾದಿ ಚಿಂತಕ ಡಾ. ವಿಠ್ಠಲ್ ವಗ್ಗನ್ ಅಭಿಪ್ರಾಯಪಟ್ಟರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಸಂವಿಧಾನಕ್ಕೆ ಸವಾಲೊಡ್ಡಿರುವ ಮತಾಂದತೆ ಮತ್ತು ಮೌಡ್ಯತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ನಮ್ಮನ್ನು ಮೌಢ್ಯತೆಯ ಅಂಧಕಾರಕ್ಕೆ ತಳ್ಳುತ್ತಿರುವ ಬ್ರಾಹ್ಮಣ್ಯ ಸಂಪ್ರದಾಯಗಳು ಸವಾಲಾಗುತ್ತಿದ್ದರೂ ಇಂದಿಗೂ ಭಾರತದ ಸಂವಿಧಾನವನ್ನು ಯಾರು ಸಹ ಅಲುಗಾಡಿಸಲು ಸಾಧ್ಯವಾಗಿಲ್ಲ ಎಂದರು.

ಮೌಢ್ಯಕ್ಕೆ ಶರಣಾದ ವಿದ್ಯಾವಂತರು

ಇತ್ತೀಚೆಗೆ ಉತ್ತಮ ಶಿಕ್ಷಣ ಪಡೆದವರು ಹಾಗೂ ಸುಶಿಕ್ಷಿತರು ಸಂವಿಧಾನವನ್ನು ಬಿಟ್ಟು ಹಳೆಯ ಗೊಡ್ಡು ಸಂಪ್ರದಾಯಗಳ ಹಿಂದೆ ಹೋಗುತ್ತಿದ್ದಾರೆ ಇದಕ್ಕೆ ಕಾರಣ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಇರುವುದು ಎಂದರು.

ಗುಲಾಮಗಿರಿ ಬುದ್ಧಿ ಬಿಡಿ

ಹಿಂದೂ ಪುರಾಣಗಳಲ್ಲಿ ಅರ್ಥವಾಗದ ಮಂತ್ರಗಳನ್ನು ಪಠಿಸಿ, ಮನುಷ್ಯನನ್ನು ಕತ್ತಲಿನಲ್ಲಿಟ್ಟಿದ್ದರೂ ಅವುಗಳನ್ನೇ ನಂಬಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವ ಅಭ್ಯಾಸ ಹೆಚ್ಚಾಗುತ್ತಿದೆ. ದಲಿತರಲ್ಲಿನ ಕೆಲವರು ತಮ್ಮ ಗುಲಾಮಗಿರಿ ಬುದ್ಧಿಯನ್ನು ಬಿಡದೆ ತಾವು ಮಾತ್ರ ಮುಂದುವರೆಯುವುದನ್ನು ನಿಲ್ಲಿಸುವವರೆಗೂ ದಲಿತರ ಉದ್ಧಾರ ಸಾಧ್ಯವಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವಿ .ಕೃಷ್ಣಪ್ಪ ,ಕ.ಸಾ.ಪ ಮಾಜಿ .ಅಶ್ವತ್ ರೆಡ್ಡಿ ,ದಲಿತ ಮುಖಂಡರಾದ ತಿಮ್ಮಯ್ಯ, ಕೆ. ವೆಂಕಟೇಶಪ್ಪ ,ಎ.ಕೆ .ವೆಂಕಟೇಶಪ್ಪ, ರಾಮಚಂದ್ರಪ್ಪ, ರಾಮಕೃಷ್ಣಪ್ಪ ,ಇಂದುಮಂಗಲ ಶ್ರೀನಿವಾಸ್, ಹಾಗೂ ಅನೇಕ ಹಿರಿಯ ದಲಿತ ಮುಖಂಡರು ,ವಿದ್ಯಾರ್ಥಿಗಳು, ಶಿಕ್ಷಕರು ,ಉಪನ್ಯಾಸಕರು, ಹಾಗೂ ದಸಂಸ ಕಾರ್ಯಕರ್ತರು ನೆರೆದಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ತಾಲೂಕು ಸಂಚಾಲಕರಾದ ಎಮ್.ಶೇಷಪ್ಪನವರು ದಸಂಸ ಉದ್ದೇಶ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು .ನಿರೂಪಣೆಯನ್ನು ಶ್ರೀನಿವಾಸ್ ಮಾಡಿದರೆ ಶಿವಣ್ಣ ವಂದಿಸಿದರು.

Share this article