ಹುಬ್ಬಳ್ಳಿ: ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ. ವಚನಗಳ ಸಾರ ತಿಳಿದು ಬದುಕನ್ನು ರೂಪಿಸಿಕೊಳ್ಳಬೇಕು. ರಾಜಕಾರಣ ಸೃಷ್ಟಿಸುತ್ತಿರುವ ಜಾತಿ, ಧರ್ಮಗಳ ಕಿತ್ತಾಟದಿಂದ ದೂರವಿರಬೇಕು ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಹೇಳಿದರು.
ಹಿರಿಯರನ್ನು ಹಾಗೂ ಸಾಧಕರನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸಿಕೊಳ್ಳಬೇಕು. ಜಗತ್ತಿಗೆ ನೋವಾದರೆ ಅದಕ್ಕೆ ಪರಿಹಾರ ಸೂಚಿಸುವುದು ವಚನ ಸಾಹಿತ್ಯ. ವಚನಗಳಂತೆ ಬದುಕನ್ನು ರೂಪಿಸಿಕೊಳ್ಳದಿದ್ದರೆ ಶರಣರನ್ನು ನಾವೇ ಸಾಯಿಸಿದಂತೆ ಎಂದರು.
ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಪ್ರಮುಖವಾಗಿ ಮಾನವ ಮೌಲ್ಯಗಳು ಇರಬೇಕು. ಪ್ರತಿಯೊಬ್ಬರು ಸಮಾಜದ ಋಣ ತೀರಿಸಬೇಕು. ಬಸವಣ್ಣ ಸೇರಿದಂತೆ ಎಲ್ಲ ವಚನಕಾರರನ್ನು ಇನ್ನಷ್ಟು ತಿಳಿದುಕೊಳ್ಳಬೇಕು. ಆದರೆ, ಅದನ್ನು ತಿಳಿದುಕೊಳ್ಳುವಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ. ವಚನಗಳನ್ನು ಅರ್ಥೈಸಿಕೊಳ್ಳಲು ಪಂಡಿತರಾಗಬೇಕೆಂದಿಲ್ಲ. ಆದರೆ, ಅವುಗಳನ್ನು ಅರಿತುಕೊಳ್ಳುವ ತಾಳ್ಮೆ, ವ್ಯವಧಾನ ಬೇಕಾಗುತ್ತದೆ ಎಂದರು.ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಾಜ್ಯಮಟ್ಟದಲ್ಲಿ ನೀಡುತ್ತಿರುವ ಪ್ರಶಸ್ತಿ ರಾಷ್ಟ್ರಮಟ್ಟಕ್ಕೆ ಬೆಳೆಯಲಿ. ಇನ್ನಷ್ಟು ಸಾಹಿತ್ತಿಕ್ಕೆ ಚಟುವಟಿಕೆ ನಡೆಯಲಿ ಎಂದರು
ರಾಯನಾಳ ರೇವಣಸಿದ್ದೇಶ್ವರ ಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಗೋವಿಂದಪ್ಪ ಗೌಡಪ್ಪಗೋಳ, ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಸಾಹಿತಿ ಮಹಾಂತಪ್ಪ ನಂದೂರು ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ ಹಂಡಗಿ ಸ್ವಾಗತಿಸಿದರು. ಬಿ.ಎಸ್. ಮಾಳವಾಡ ಪರಿಚಯಿಸಿದರು. ಪ್ರೊ. ಗುರು ಹಂಜಗಿಮಠ ನಿರೂಪಿಸಿದರು. ರವೀಂದ್ರ ರಾಮದುರ್ಗಕರ್ ವಂದಿಸಿದರು.