ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಿ

KannadaprabhaNewsNetwork |  
Published : Apr 02, 2026, 02:45 AM IST
1ಬಿಎಸ್ವಿ04- ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಅಮೀತ ಘಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ನೀರಿಲ್ಲದೆ ಜೀವವಿಲ್ಲ, ನಾಗರಿಕತೆಗಳು ನೀರು ಇದ್ದಲ್ಲಿಯೇ ಬೆಳೆದು ಬಂದಿದ್ದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅಮೀತ ಘಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನೀರಿಲ್ಲದೆ ಜೀವವಿಲ್ಲ, ನಾಗರಿಕತೆಗಳು ನೀರು ಇದ್ದಲ್ಲಿಯೇ ಬೆಳೆದು ಬಂದಿದ್ದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅಮೀತ ಘಟ್ಟಿ ಹೇಳಿದರು.

ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತಿ ಕಾರ್ಯಾಲಯ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆಯಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕಲ ಜೀವರಾಶಿಗಳಿಗೂ ನೀರು ಬೇಕು. ನಮ್ಮ ಉಳಿವಿಗೆ ಆಹಾರ, ಗಾಳಿ ಎಷ್ಟು ಮುಖ್ಯವೋ ಅಷ್ಟೇ ನೀರು ಸಹ ಮುಖ್ಯವಾಗಿದೆ. ನೀರು ಪೋಲು, ಹವಾಮಾನ ಬದಲಾವಣೆ ಸೇರಿದಂತೆ ವಿವಿದ ಕಾರಣಗಳಿಂದ ನೀರಿನ ಕೊರತೆ ಹೆಚ್ಚಾಗುತ್ತಿದೆ. ಇದು ಕೈಗಾರಿಕೆ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಸಿಹಿನೀರಿನ ಮೂಲಗಳನ್ನು ಕಾಪಾಡುವ ಮೂಲಕ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಿದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ನ್ಯಾಯವಾದಿ ಬಿ.ಪಿ.ಪತ್ತಾರ ಉಪನ್ಯಾಸ ನೀಡಿ, ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆಯ ದಿನದಲ್ಲಿ ತಣ್ಣನೆ ನೀರನ್ನು ಹಾಗೂ ಹೆಚ್ಚು ನೀರನ್ನು ಸೇವಿಸಬೇಕು. ಶುದ್ಧ ಕುಡಿಯುವ ನೀರನ್ನು ಬಳಸಬೇಕು.ತಗ್ಗು ದಿನ್ನೆಗಳಲ್ಲಿ ನೀರನ್ನು ಸಂಗ್ರಹಣೆ ಮಾಡುವುದು ಕಡಿಮೆ ಮಾಡಿ ಅವುಗಳಿಂದ ಉಂಟಾಗುವ ಮಾರಣಾಂತಿಕ ಕಾಯಿಲೆಗಳಿಂದ ಸುರಕ್ಷಿತರಾಗಬೇಕು. ನೀರಿನ ಮಹತ್ವ ಕುರಿತು ಹೇಳಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಬಿ.ಗೊಂಗಡಿ ಮಾತನಾಡಿ, ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪ್ರತಿ ಗ್ರಾಮಗಳಲ್ಲಿರುವ ಮನೆ ಮನೆಗೆ ಪೂರೈಕೆ ಮಾಡಲಾಗುತ್ತಿದೆ. ಹೈಟೆಕ್ ನಲ್ಲಿಗಳನ್ನು ಅಳವಡಿಸುವುದರ ಮೂಲಕ ಜನರಿಗೆ ಉತ್ತಮವಾದ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಗ್ರಾಮೀಣ ಜನರು ಮಳೆ ನೀರು ಕೊಯ್ಲುಗಳನ್ನು ತಮ್ಮ ಮನೆಯ ಮುಂದೆ ಸಿದ್ಧಪಡಿಸಿಕೊಂಡು ನೀರನ್ನು ಸಂಗ್ರಹಿಸಬೇಕು. ಇದು ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬಹುದು. ನೀರು ಹಾಳಾಗದಂತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿರುತ್ತದೆ ಎಂದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿಲ್ಲದೇ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನೀರು ಜೀವನಕ್ಕೆ ಜನ್ಮ ನೀಡಿದ್ದು ಮಾತ್ರವಲ್ಲದೇ ಸಂಸ್ಕ್ರತಿ, ಆರ್ಥಿಕತೆ, ಸಮಾಜವನ್ನು ರೂಪಿಸಿದೆ. ನೀರಿನ ಮೂಲಗಳು ಇಂದು ಕಲುಷಿತವಾಗುತ್ತಿರುವುದು ವಿಷಾದನೀಯ. ನೀರಿನ ಮಹತ್ವ, ಅದರ ಸಂರಕ್ಷಣೆ ಮತ್ತು ಶುದ್ಧ ನೀರಿನ ಲಭ್ಯತೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾ.22 ರಂದು ವಿಶ್ವ ಜಲ ದಿನ ಆಚರಿಸಲಾಗುತ್ತಿದೆ ಎಂದರು.1ನೇ ಸಿವಿಲ್ ನ್ಯಾಯಾಧೀಶ ಈರಪ್ಪ ಢವಳೇಶ್ವರ, ಸಹಾಯಕ ಸರ್ಕಾರಿ ಅಭಿಯೋಜಕಿ ರಾಜರಾಜೇಶ್ವರಿ ಸುತ್ತಾರ, ಉಪತಹಸೀಲ್ದಾರ್‌ ಸೋಮಶೇಖರ ತಾವರಖೇಡ, ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಕೂಡಗಿ ಪೊಲೀಸ್ ಠಾಣೆಯ ಪಿಎಸೈ ವಿ.ಎಚ್.ಹತ್ತಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುಳಾ ಹಿರೇಮನಿ, ಹಿರಿಯ ನ್ಯಾಯವಾದಿ ವಿ.ಬಿ.ಮರ್ತರ, ಗ್ರಾಮ ಪಂಚಾಯತಿ ಪಿಡಿಒ ಡಿ.ಎಂ.ಬಿಳೆಕುದರಿ ಇತರರು ಇದ್ದರು. ತಾಲೂಕು ಪಂಚಾಯತಿಯ ತಾಲೂಕು ಯೋಜನಾಧಿಕಾರಿ ಎಂ.ಬಿ.ಸೊನ್ನದ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಮೇಶ ಮೇಟಿ ಪರ ಬಿರುಸಿನ ಪ್ರಚಾರ
ಅನಗತ್ಯ ಸಿಲಿಂಡರ್‌ ಗೊಂದಲ ಸೃಷ್ಟಿ ಬೇಡ