ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಗೂಡೆಹೊಸಹಳ್ಳಿಯಲ್ಲಿ ನಡೆದ ಮಾದಾಪುರ ಗ್ರಾಮ ಪಂಚಾಯ್ತಿ ಮಟ್ಟದ ಜನ ಸಂಪರ್ಕ ಹಾಗೂ ಪ್ರಜಾ ಜನಸ್ಪಂದನಾ ಸಭೆಯಲ್ಲಿ ಮಾತನಾಡಿ, ಗಡಿಗ್ರಾಮ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮೊದಲು ಮಾಡಬೇಕು ಎಂದರು.
ಗ್ರಾಮದ ಗೋಮಾಳದಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಭೂ ಮಂಜೂರು, ಮನೆಗಳಿಗೆ ಹಕ್ಕುಪತ್ರ ವಿತರಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ಮನೆಯ ಹಬ್ಬದಂತೆ ಸರ್ಕಾರಿ ಸಭೆಯನ್ನು ಗ್ರಾಮಸ್ಥರು ಹಮ್ಮಿಕೊಂಡಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳಿಗೆ ಹೇಳಿದರು.ಜನತೆ ನೀಡಿರುವ ಆರ್ಶೀವಾದದಿಂದ ಸಿಕ್ಕ ಅಧಿಕಾರವನ್ನು ಜನರಿಗಾಗಿ ಮೀಸಲಿಟ್ಟು ಕೆಲಸ ಮಾಡುತ್ತಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗುತ್ತಿಲ್ಲ. ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಸರ್ಕಾರ 50 ಕೋಟಿ ರು. ಅನುದಾನ ನೀಡಿದರೆ, ವಿರೋಧ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ 10 ರಿಂದ 20 ಕೋಟಿ ಅನುದಾನ ನೀಡಲು ಸಹ ಸತಾಯಿಸುತ್ತಾರೆ. ಇದರ ನಡುವೆ ಅನುದಾನಕ್ಕಾಗಿ ಹೋರಾಟ ಮಾಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ ಎಂದರು.ಗ್ರಾಮದಲ್ಲಿ 1600 ಪೌತಿ ಖಾತೆಗಳಿದ್ದು, ತ್ವರಿತವಾಗಿ ಸರಿಪಡಿಸಿ ದುರಸ್ಥಿ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಧಿಕಾರಿಗಳು ನಾಗರಿಕರನ್ನು ವೃಥಾ ಕಚೇರಿಗಳಿಗೆ ಅಲೆದಾಡಿಸದೆ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಖಡಕ್ ಸೂಚನೆ ನೀಡಿದರು.
ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕೃಷಿ ಯಂತ್ರೋಪಕರಣ, ಹರಿಗೋಲುದೋಣಿ, ಮೇವು ಕಟಾವುಯಂತ್ರ, ಟ್ರಾಕ್ಟರ್, ಕೊಳವೆಬಾವಿ ಮೋಟಾರ್, ಪೈಪ್‌ಮತ್ತಿತರ ಪರಿಕರಗಳನ್ನು ಶಾಸಕ ಎಚ್.ಟಿ.ಮಂಜು ವಿತರಿಸಿದರು.ಗ್ರಾಮ ಪಂಚಾಯ್ತಿ ಇಲಾಖೆಯ ಇ-ಸ್ವತ್ತು, ಕಂದಾಯ ಇಲಾಖೆಯ ಪೌತಿಖಾತೆ ದಾಖಲೆ, ವಿಧವಾ ವೇತನ, ವೃದ್ದಾಪ್ಯ ವೇತನ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಎಸ್.ಯು.ಅಶೋಕ್, ತಾಪಂ ಇಒ ಸುಷ್ಮಾ, ಚನ್ನರಾಯಪಟ್ಟಣ ತಾಪಂ ಇಒ ಹರೀಶ್, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಬಿಇಒ ವೈ.ಕೆ.ತಿಮ್ಮೇಗೌಡ, ಪಿಡಿಒ ಚಂದ್ರು, ಗ್ರಾಮ ಮುಖಂಡರು, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.