ಸಾಹಿತಿಗಳಿಂದ ಸಾಮಾಜಿಕ ವ್ಯವಸ್ಥೆಯ ತಿಳುವಳಿಕೆ: ಡಾ. ಶ್ರೀಧರ್‌

KannadaprabhaNewsNetwork |  
Published : Mar 12, 2024, 02:09 AM IST
‘ಡಾ.ನಾ ಮೊಗಸಾಲೆ ಕಾದಂಬರಿಗಳು – ವಿದ್ಯಾರ್ಥಿ ಓದು ಎಂಬ ರಾಜ್ಯಮಟ್ಟದ ವಿಚಾರಸಂಕಿರಣ | Kannada Prabha

ಸಾರಾಂಶ

ಶ್ರೀ ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಡಾ.ನಾ.ಮೊಗಸಾಲೆ ಕಾದಂಬರಿಗಳು-ವಿದ್ಯಾರ್ಥಿ ಓದು’ ಎಂಬ ರಾಜ್ಯಮಟ್ಟದ ವಿಚಾರಸಂಕಿರಣ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಪ್ರಾದೇಶಿಕ ಚೈತನ್ಯವನ್ನು, ಸಾಂಸ್ಕೃತಿಕ ವಿವರಗಳನ್ನು ಸಾಹಿತಿಗಳು ಕಟ್ಟಿಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಸಾಹಿತಿಗಳು, ಅವರ ಬರಹಗಳು ಹತ್ತಿರವಾದರೆ ಸಾಮಾಜಿಕ ವ್ಯವಸ್ಥೆಯ ತಿಳುವಳಿಕೆ ಪಡೆದಂತಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಪ್ರಸ್ತುತ ಪರೀಕ್ಷಾಂಗ ಕುಲಸಚಿವ ಡಾ. ಎಚ್.ಜಿ. ಶ್ರೀಧರ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಡಾ.ನಾ.ಮೊಗಸಾಲೆ ಕಾದಂಬರಿಗಳು-ವಿದ್ಯಾರ್ಥಿ ಓದು’ ಎಂಬ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ತಾಲೂಕಿನ ಕಾಂತಾವರದ ಸಾಹಿತಿ ಡಾ. ನಾ.ಮೊಗಸಾಲೆಯವರು ಕರ್ನಾಟಕದ ಶ್ರೇಷ್ಠ ಬರಹಗಾರ. ಅವರು ಶಿವರಾಮ ಕಾರಂತರ ನಂತರದ ಸ್ಥಾನವನ್ನು ತುಂಬಿದ್ದಾರೆ. ಈ ಹಿರಿಯ ಸಾಹಿತಿಯ ಕೃತಿಗಳ ಕುರಿತಾಗಿ ಚಿಂತನ-ಮಂಥನ ನಡೆಯುತ್ತಿರುವುದು ನಿಜಕ್ಕೂ ಸಂತೋಷಕರ ಸಂಗತಿ. ಆದರೂ ನಾ.ಮೊಗಸಾಲೆ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ಕಡಿಮೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್, ನಾ.ಮೊಗಸಾಲೆಯವರು ಕಾರ್ಕಳದ ಹೆಮ್ಮೆ. ಎಂಬತ್ತರ ಹರೆಯದಲ್ಲೂ ಅವರ ಬರವಣಿಗೆಯ ಉತ್ಸಾಹ ನಮಗೆಲ್ಲ ಮಾದರಿ. ಅವರ ಕೃತಿಗಳ ಅವಲೋಕನ ಸಾಮಾಜಿಕ ವ್ಯವಸ್ಥೆಯ ಅವಲೋಕನ ಎಂಬುದನ್ನು ನಾವು ಮರೆಯಬಾರದು ಎಂದರು.ನಂತರ ನಡೆದ ಗೋಷ್ಠಿಯಲ್ಲಿ ಮೊಗಸಾಲೆ ಕೃತಿಗಳನ್ನು ವಿದ್ಯಾರ್ಥಿಗಳು ಚರ್ಚಿಸಿದರು. ಕಾದಂಬರಿ ಅನುಸಂಧಾನದ ಕಾರ್ಯಕ್ರಮಕ್ಕೆ ಖ್ಯಾತ ಚಿಂತಕ, ವಿಮರ್ಶಕ ಅರವಿಂದ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಖ್ಯಾತ ಸಾಹಿತಿ, ಬರಹಗಾರ ಡಾ. ನಾ.ಮೊಗಸಾಲೆಯವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಸಂವಾದ ನಡೆಸಿದರು.

ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣ ಕುಮಾರ ಎಸ್.ಆರ್. ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ಸ್ವಾಗತಿಸಿದರು. ಸಹನಾ ವಾಗ್ಳೆ ಹಾಗೂ ಅಶ್ವಿತಾ ವಂದಿಸಿದರು. ಶ್ರೀರಕ್ಷಾ ಭಟ್ ಹಾಗೂ ವಿಯೋಲಾ ಆರ್. ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ