ರೋಣ: ಸಾಲ ಮಾಡಿ ಗುತ್ತಿಗೆ ಕಾಮಗಾರಿ ಕೈಗೊಂಡಲ್ಲಿ ಆರ್ಥಿಕವಾಗಿ ಬೆಳೆಯಲು ಕಷ್ಟಕರವಾಗುತ್ತದೆ. ಆದ್ದರಿಂದ ಗುತ್ತಿಗೆದಾರರು ಸಾಲ ಮಾಡದೇ ತಮ್ಮಲ್ಲಿರುವ ಬಂಡವಾಳ ತಕ್ಕಂತೆ ಟೆಂಡರ್‌ನಲ್ಲಿ ಭಾಗಿಯಾಗಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳವುದು ಅತಿ ಸೂಕ್ತವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಸಲಹೆ ನೀಡಿದರು.
ಅವರು ಬುಧವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ರೋಣ ತಾಲೂಕು ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಗುತ್ತಿಗೆದಾರರ ಸಂಘ ವತಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಗುತ್ತಿಗೆದಾರರು ಆರ್ಥಿಕವಾಗಿ ಸಬಲರಾಗುತ್ತಿಲ್ಲ. ಕಾಮಗಾರಿ ಕೈಗೊಳ್ಳಲು ಬೇರೆಡೆ ಸಾಲ ಮಾಡುತ್ತಾರೆ. ಅಲ್ಲದೇ ಕಾಮಗಾರಿ ತಮಗೆ ಸಿಗಬೇಕೆಂದು ಕಡಿಮೆ ದರದಲ್ಲಿ ಟೆಂಡರ್ ಹಾಕುತ್ತಾರೆ. ಹೀಗಾದಲ್ಲಿ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಜತೆಗೆ ಗುತ್ತಿಗೆದಾರರಿಗೆ ಲಾಭವೂ ಸಿಗುವುದಿಲ್ಲ ಎಂದರು.ಜನಪ್ರತಿನಿಧಿಗಳೇ ಗುತ್ತಿಗೆದಾರರಾದರೆ ಹೇಗೆ?: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗುತ್ತಿಗೆದಾರರಾಗುತ್ತಿದ್ದಾರೆ. ಗ್ರಾಪಂ ಸದಸ್ಯರು, ತಾಪಂ, ಜಿಪಂ ಸದಸ್ಯ, ಪುರಸಭೆ, ಪಪಂ ಸದಸ್ಯರು ಕಾಮಗಾರಿ ಗುತ್ತಿಗೆಯನ್ನು ತಾವೇ ನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಪಡೆದುಕೊಳ್ಳಬೇಕಾದ ಸ್ಥಳೀಯ ಜನಪ್ರತಿನಿಧಿಗಳೇ ಗುತ್ತಿಗೆದಾರರಾದರೇ? ಇದರಿಂದ ಸರ್ಕಾರಕ್ಕೆ ರಾಜಸ್ವ ಕಟ್ಟುವ ನಿಜವಾದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಗುತ್ತಿಗೆದಾರ ಲೈಸೆನ್ಸ್ ಇಲ್ಲದವರು ಕಾಮಗಾರಿ ಕೈಗೊಳ್ಳಬಾರದು. ತಾಲೂಕಿನ ಗುತ್ತಿಗೆದಾರರ ಹಿತರಕ್ಷಣೆಗೆ ನಾನು ಸದಾ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಗುತ್ತಿಗೆದಾರ ಅಭಿವೃದ್ಧಿಗೆ ಆದ್ಯತೆ ನೀಡುವುದು ಅತಿ ಮುಖ್ಯವಾಗಿದೆ. ಕಾಮಗಾರಿ ಗುತ್ತಿಗೆ ಪಡೆಯಲು ಅತ್ಯಂತ ಕಡಿಮೆ ದರದಲ್ಲಿ ಟೆಂಡರ್ ಹಾಕಿದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರದ ಒಂದು ಭಾಗವಾಗಿ ಗುತ್ತಿಗೆದಾರರು ಶ್ರಮ ಅತಿ ಮುಖ್ಯವಾಗಿದೆ ಎಂದರು.ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹೊರಪೇಟಿ ದರಗಾದ ಸೈಯದ್ ಸುಲೇಮಾನ ಶಾವಲಿ ಅಜ್ಜನವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ತೋಟಪ್ಪ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪುರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರಥಮ ದರ್ಜೆ ಗುತ್ತಿಗೆದಾರ ರಾಜಣ್ಣ ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಈರಣ್ಣ ಶಿರೋಳ, ಬಸವರಾಜ ಸುಂಕದ, ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ರಂಗವ್ವ ಭಜಂತ್ರಿ, ಮುತ್ತಣ್ಣ ಸಂಗಳದ, ಪರಶುರಾಮ ಅಳಗವಾಡಿ, ಮಲ್ಲಯ್ಯ ಮಹಾಪುರುಷಮಠ, ಮಾರುತಿ ಕಲ್ಲೊಡ್ಡರ, ಯೂಸೂಫ್ ಇಟಗಿ, ಕೆ.ಸಿ. ಪಾಟೀಲ, ಗದಿಗೆಪ್ಪ ಕಿರೇಸೂರ, ಡಾ. ಎಂ.ಬಿ. ಇಟಗಿ, ಅಶೋಕ ಕನ್ನೂರ, ಎಸ್.ವಿ. ಮುಗಳಿ, ದುರ್ಗಪ್ಪ ಹಿರೇಮನಿ, ಹನುಮಂತ ತಳ್ಳಿಕೇರಿ, ಅಫ್ತಾಬ್ ತಹಸೀಲ್ದಾರ್, ಇಸ್ಮೈಲ್ ಹೊರಪೇಟಿ, ಬಸವಣ್ಣೆಪ್ಪ ದೊಡ್ಡಣ್ಣವರ, ಶ್ರೀಪಾದಗೌಡ ಪಾಟೀಲ, ಎಂ.ವಿ. ಗಾಣಿಗೇರ, ಬಾಬುಗೌಡ ಪಾಟೀಲ, ದಾವಲ್‌ಸಾಬ್ ಬಾಡಿನ ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವೀರಣ್ಣ ಕೊಪ್ಪದ ವಂದಿಸಿದರು.