ಬಳ್ಳಾರಿ: ಜಗತ್ತಿನಾದ್ಯಂತ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನಿಂದ ಭೀಕರ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ.ದೇವದಾಸ್ ತಿಳಿಸಿದರು.
ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ. ಸಾಮ್ರಾಜ್ಯಶಾಹಿಗಳು ತಮ್ಮ ಲಾಭ ದಾಹಕ್ಕೆ ಯುದ್ಧಗಳನ್ನು ಸೃಷ್ಟಿಸಿ, ದುಡಿಯುವ ಜನರನ್ನು ಘೋರ ಪರಿಸ್ಥಿತಿಗೆ ದೂಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಕಾರ್ಮಿಕರನ್ನು ಕೆಲಸದಿಂದ ಹೊರ ಹಾಕಲಾಗುತ್ತಿದೆ. ಕಾರ್ಮಿಕರ ಪರ ನಿಲ್ಲಬೇಕಾದ ಎಲ್ಲ ಸರ್ಕಾರಗಳು ಬಂಡವಾಳಶಾಹಿಗಳ ಏಜೆಂಟ್‌ಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಈಗಿರುವ 29 ಕಾರ್ಮಿಕ ಪರ ಕಾನೂನುಗಳನ್ನು ತಿದ್ದುಪಡಿ ಮಾಡಿ, ಕಾರ್ಪೊರೇಟ್ ಕಂಪನಿಗಳ ಹಿತಕ್ಕಾಗಿ 4 ಲೇಬರ್ ಕೋಡ್‌ಗಳನ್ನು ಜಾರಿಗೆ ತರುತ್ತಿದೆ. ಹೋರಾಟದಿಂದ ಗಳಿಸಿಕೊಂಡ ಎಲ್ಲ ಹಕ್ಕುಗಳನ್ನು ಹೊಸಕಿ ಹಾಕಲು ಕೇಂದ್ರ ಮುಂದಾಗಿದೆ ಎಂದು ದೂರಿದರು.
ಮೇ ದಿನದಂದು ಹೋರಾಟ, ತ್ಯಾಗ ಬಲಿದಾನಗಳನ್ನು ಮತ್ತೆ ನೆನೆಯಬೇಕಿದೆ. ಈ ಹೋರಾಟದಿಂದ ಸ್ಫೂರ್ತಿ ಪಡೆಯುತ್ತಾ, ಮತ್ತೊಮ್ಮೆ ಅಂತಹ ಸಮರಶೀಲ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಬೇಕು ಎಂದು ಕರೆ ನೀಡಿದರು.ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಎ.ಶಾಂತಾ ಮಾತನಾಡಿ, ಎಷ್ಟೇ ಚುನಾವಣೆಗಳು ನಡೆದರೂ ಎಷ್ಟೇ ಸರ್ಕಾರಗಳು ಬದಲಾದರೂ ಕಾರ್ಮಿಕ ವಿರೋಧಿ ನೀತಿಗಳು ಮಾತ್ರ ಬದಲಾಗುವುದಿಲ್ಲ. ಇಡೀ ವ್ಯವಸ್ಥೆ ಇರುವುದೇ ಉಳ್ಳವರ ಸೇವೆಗಾಗಿ. ಹಾಗಾಗಿ ಕಾರ್ಮಿಕರು ಯಾವುದೇ ಸರ್ಕಾರಗಳ ಮೇಲೆ ಭ್ರಮೆ ಇಟ್ಟುಕೊಳ್ಳದೆ, ತಮ್ಮ ಸಂಘಟಿತ ಹೋರಾಟದ ಮೇಲೆ ವಿಶ್ವಾಸ ಇಡಬೇಕು ಎಂದು ತಿಳಿಸಿದರು. ಎಐಯುಟಿಯುಸಿ ಜಂಟಿ ಕಾರ್ಯದರ್ಶಿ ಜಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಶರ್ಮಾಸ್, ಚೇತನ್ ಪ್ರಭು, ಪಾರ್ವತಮ್ಮ, ಸತೀಶ್, ಹೇಮಣ್ಣ, ಹನುಮನಾಯಕ್, ನಿಂಗಪ್ಪ, ವೀರಭದ್ರಯ್ಯ ಸ್ವಾಮಿ, ಮಹೇಶ್, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮ ಮುನ್ನ ನಗರದಲ್ಲಿ ಕಾರ್ಮಿಕರ ಮೆರವಣಿಗೆ ನಡೆಯಿತು.