ಹುಬ್ಬಳ್ಳಿ:
ಮೈಸೂರು, ಬೀದರ, ಕಲಬುರಗಿ, ವಿಜಯಪುರ, ಬಾಗಲಕೋಟ, ರಾಯಚೂರ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ನೂರಾರು ಆಕಾಂಕ್ಷಿ ಅಭ್ಯರ್ಥಿಗಳು ಬುಧವಾರ ಬೆಳಗ್ಗೆಯಿಂದಲೇ ಧರಣಿ ಆರಂಭಿಸಿದ್ದರು. ಪ್ರತಿಭಟನಾ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯೇ ಪ್ರಾರಂಭವಾಗಿದ್ದ ಧರಣಿ ರಾತ್ರಿ 8ರ ವರೆಗೆ ಮುಂದುವರಿದಿತ್ತು.
ಬೇಡಿಕೆ ಏನು?ಸಂಸ್ಥೆಯಲ್ಲಿ 2019ರಲ್ಲಿ ಚಾಲಕ ಕಂ ನಿರ್ವಾಹಕ 2814 ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದರಂತೆ ಅರ್ಹ ಅಭ್ಯರ್ಥಿಗಳಿಗೆ ಎಲ್ಲಾ ವಿಧದ ಪರೀಕ್ಷೆಗಳನ್ನು ಮಾಡಲಾಗಿದೆ. ಆದರೆ, 1000 ಹುದ್ದೆ ಮಾತ್ರ ಭರ್ತಿ ಮಾಡಲಾಗಿದೆ. ಅಧಿಸೂಚನೆಯಂತೆ ಉಳಿದ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಭರವಸೆ ಈಡೇರಿಸುವರೆಗೂ ಮುಷ್ಕರ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಅನಿರ್ದಿಷ್ಟಾವಧಿವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ಕೂಡ ನೀಡಿದರು. ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ ಸೇರಿದಂತೆ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಹೋರಾಟಗಾರ ಸುಭಾಸಸಿಂಗ್ ಜಮಾದಾರ, ತನ್ವಿರಯ್ಯ ಕಡ್ಲಿಬ್ಯಾಳಿಮಠ, ಮಹಾಂತೇಶ ಹಾವೇರಿ, ನವೀನ ಬಳಿಗೇರ, ಕಲಂದರ ನರಗುಂದ, ಫಕ್ಕೀರಗೌಡ ಪಾಟೀಲ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ರಮೇಶ ಮಾನೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದದ ನೂರಾರು ಉದ್ಯೋಗಾಕಾಂಕ್ಷಿಗಳು, ಕುಟುಂಬಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.