ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರಸಭೆಯ ಬಿಜೆಪಿ ಆಡಳಿತದ ವೇಗದಿಂದ ಗಲಿಬಿಲಿಗೊಂಡಿರುವ ಕಾಂಗ್ರೆಸ್ ಮುಖಂಡರು ಬಿಜೆಪಿ ಸದಸ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಸ್ಪಷ್ಟಪಡಿಸಿದರು.ನಗರದ ರಸ್ತೆಯ ಅಭಿವೃದ್ಧಿ ಕಾರ್ಯಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕವೇ ಮಾಡಬೇಕು. ನಿಯಮಬಾಹಿರವಾಗಿ ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿರುವ ಹಿನ್ನೆಲೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಇದನ್ನು ಪ್ರಶ್ನಿಸಿದ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ವಕ್ತಾರರೊಬ್ಬರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದರು.
ದಸರಾದ ಹಿನ್ನೆಲೆಯಲ್ಲಿ ನಗರಸಭೆಯ ನಿಧಿಯಿಂದ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ಮುಂದುವರೆದಿದೆ. ಕಂದಾಯ ಸಂಗ್ರಹದಲ್ಲಿ ಮಡಿಕೇರಿ ನಗರಸಭೆ 2ನೇ ಸ್ಥಾನದಲ್ಲಿದೆ. ಯಾವುದೇ ಕಡತಗಳು ಬಾಕಿ ಉಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ಇದನ್ನೆಲ್ಲ ಸಹಿಸದ ಕಾಂಗ್ರೆಸ್ಸಿಗರು ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮಹೇಶ್ ಜೈನಿ ತಿಳಿಸಿದರು.ನಗರಸಭಾ ಸದಸ್ಯ ಹಾಗೂ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸಿಗರು ತಮ್ಮ ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಗರದಲ್ಲಿ ಸುಮಾರು 39 ಅನಧಿಕೃತ ಶೆಡ್‌ಗಳಿದ್ದು, ಆದರೆ, ವಿನಾಕಾರಣ ನಿಯಮಬಾಹಿರ ಶೆಡ್‌ಗಳ ಬಗ್ಗೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ನಿಯಮ ಬಾಹಿರ ಶೆಡ್‌ಗಳ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಅರುಣ್ ಶೆಟ್ಟಿ, ಎ.ಕೆ.ಸಬಿತಾ ಹಾಗೂ ನಗರ ಬಿಜೆಪಿ ಉಪಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.