)
ರಾಮನಗರ: ಮೇಕೆದಾಟು ಅಣೆಕಟ್ಟೆ, ರೈಲ್ವೆ ಯೋಜನೆ, ಟ್ರಾಮಾ ಸೆಂಟರ್, ಇಎಸ್ಐ ಆಸ್ಪತ್ರೆ, ರೇಷ್ಮೆ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಜರೂರಾಗಿ ಆಗಬೇಕಾಗಿದ್ದ ಯಾವೊಂದು ಯೋಜನೆಗಳ ಬಗ್ಗೆಯೂ ಪ್ರಸ್ತಾಪ ಮಾಡದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಕಳೆದ ಏಳು ವರ್ಷಗಳಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ತಡೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿ ಅಡ್ಡಗಾಲು ಹಾಕಿತ್ತು. ಕೊನೆಗೂ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿರುವುದು ಮೇಕೆದಾಟು ಯೋಜನೆ ಮುಂದುವರಿಸಲು ಹಸಿರು ನಿಶಾನೆ ಸಿಕ್ಕಿದಂತಾಗಿದೆ. ಈ ಬಾರಿಯ ಬಜೆಟ್ ನಲ್ಲೂ ಯೋಜನೆ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.
ಬೆಂಗಳೂರಿನ ಹೆಜ್ಜಾಲ-ಚಾಮರಾಜನಗರಕ್ಕೆ ರೈಲು ಮಾರ್ಗ ಸೃಜಿಸಬೇಕೆಂಬುದು ಎರಡೂವರೆ ದಶಕಗಳ ಬೇಡಿಕೆಯಾಗಿದೆ. ಈ ರೈಲು ಮಾರ್ಗ ಹಾರೋಹಳ್ಳಿ ಮತ್ತು ಕನಕಪುರದ ಮೂಲಕ ಹಾದುಹೋಗಲಿದೆ. ಕೇಂದ್ರ ಸರ್ಕಾರ ಈ ಬಾರಿಯೂ ಅದರತ್ತ ಗಮನ ಹರಿಸಿಲ್ಲ.ಇತ್ತೀಚೆಗೆ ರಾಮನಗರ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರವರು ಹೆಜ್ಜಾಲದಿಂದ ಚಾಮರಾಜನಗರಕ್ಕೆ ರೇಲ್ವೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಭೂಮಿ ಒದಗಿಸಿದರೆ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಈ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಜವಳಿ ಉದ್ಯಮದ ಬಗ್ಗೆ ಗಮನ ಹರಿಸಿರುವ ವಿತ್ತ ಸಚಿವರು, ಜಿಲ್ಲೆಯ ಆರ್ಥಿಕ ಚಟುವಟಿಕೆಗೆ ಕೊಡುಗೆ ನೀಡುತ್ತಿರುವ ರೇಷ್ಮೆ ಕೃಷಿ ಮತ್ತು ಉದ್ಯಮದ ಉದ್ಯಮದ ಬಗ್ಗೆ ಗಮನ ಹರಿಸದಿರುವುದು ರೀಲರ್ಸ್‌ಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಕಾಫಿ ಮತ್ತು ಸ್ಪೈಸಸ್ ಬೋರ್ಡ್ ಮಾದರಿಯಲ್ಲೇ ಶ್ರೀಗಂಧದ ಬೋರ್ಡ್ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದ್ದರು. ಶ್ರೀಗಂಧದ ಬೆಳೆ ಹೆಚ್ಚಿಸಲು ರಾಜ್ಯ ಸರ್ಕಾರಗಳೊಂದಿಗೆ ಕ್ರಮ ವಹಿಸಲಾಗುತ್ತದೆ ಎಂದು ವಿತ್ತ ಸಚಿವ ನಿರ್ಮಲಾ ಸೀತರಾಮನ್ ಭರವಸೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ಹಲವೆಡೆ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಮಾ ಸೆಂಟರ್ ಸ್ಥಾಪನೆ, ಕಾರ್ಮಿಕರ ಹಿತದೃಷ್ಟಿಯಿಂದ ಸುಸಜ್ಜಿತ ಇಎಸ್ ಐ ಆಸ್ಪತ್ರೆ ಅವಶ್ಯಕತೆ ಇತ್ತು. ಈ ಬಾರಿಯ ಬಜೆಟ್ ನಲ್ಲಿಯೂ ಅನುಮೋದನೆ ಸಿಕ್ಕಿಲ್ಲ.
ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗಿಲ್ಲ. ನಮ್ಮ ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ. ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಯೋಜನೆ ಇತ್ತೊ ಅದೇ ಯೋಜನೆ ಮುಂದುವರಿಯಲಿ. ಶೇಕಡ 60:40ರ ಅನುಪಾತ ಯಾವುದೇ ಕಾರಣಕ್ಕೂ ನಡೆಯಲ್ಲ. ಯಾವ ಸರ್ಕಾರವೂ ಬಂಡವಾಳ ಹಾಕಲು ಆಗುವುದಿಲ್ಲ.
ಕೋಟ್ .........
- ಕೆ.ಎಸ್.ಪ್ರಶಾಂತ್ , ಕಾರ್ಯದರ್ಶಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ , ಬೆಂ.ದಕ್ಷಿಣ ಜಿಲ್ಲೆ.
ಕೋಟ್ ...............ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಮತ್ತೆ ನಿರಾಸೆ ಮೂಡಿಸಿದೆ. ರೈತ ಸಮುದಾಯಕ್ಕೆ ಕೇವಲ 1.62 ಲಕ್ಷ ಕೋಟಿ ಕೊಡುವ ಮೂಲಕ ಕನಿಷ್ಠ ಪರಿಗಣನೆ ಮಾಡಲಾಗಿದೆ. ಈ ಮೂಲಕ ದೇಶದ ರೈತರಿಗೆ ಬಜೆಟ್ ನಲ್ಲಿ ಯಾವುದೇ ಭದ್ರತೆಯ ಭರವಸೆ ನೀಡಿಲ್ಲ. ರೈತರ ಬಹುದಿನಗಳ ಹಕ್ಕೊತ್ತಾಯವಾಗಿದ್ದ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಆಗಿಲ್ಲ. ಮೇಕೆದಾಟು ಅಣೆಕಟ್ಟು ಬಗ್ಗೆ ನಿರ್ಲಕ್ಷ ತೋರಲಾಗಿದೆ. ನೀರಾವರಿ ಯೋಜನೆಗೆ 5 ಸಾವಿರದ 300 ಕೋಟಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ನಿರಾಸೆ ಮೂಡಿಸಿದೆ.
-ಕುಮಾರಸ್ವಾಮಿ, ರಾಜ್ಯ ಸಲಹೆಗಾರರು, ಜಯಕರ್ನಾಟಕ ಜನಪರ ವೇದಿಕೆ