ಕೈಗಾರಿಕೆ ಸ್ಥಾಪನೆಗೆ ಸ್ಥಳ ದೊರಕಿಸಲು ಕೇಂದ್ರ ಸಚಿವ ಎಚ್‌ಡಿಕೆ ಸೂಚನೆ

KannadaprabhaNewsNetwork |  
Published : Nov 07, 2025, 01:45 AM IST
6ಕೆಎಂಎನ್ ಡಿ11,12 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ನಾಗಮಂಗಲ ತಾಲೂಕು ಹಟ್ನ ಗ್ರಾಮದಲ್ಲಿ 1277 ಎಕರೆ, ಮದ್ದೂರಿನ ಕುದರಗುಂಡಿ ಕಾಲೋನಿ ಬಳಿ 109 ಎಕರೆ ಜಮೀನು ಗುರುತಿಸಿದ್ದು, ಒಂದು ಎಕರೆಗೆ 35 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ, ಸ್ಥಳೀಯ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಜನರ ಒತ್ತಡವಿರುವುದರಿಂದ ಆದಷ್ಟು ಬೇಗ ಸ್ಥಳ ದೊರಕಿಸಿಕೊಡುವಂತೆ ಸಂಸದರು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿನ ಕಾವೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಗಾರಿಕೆಗಳ ಸ್ಥಾಪನೆ ಸಂಬಂಧ ಜಿಲ್ಲೆಯಲ್ಲಿ ಸ್ಥಳ ಗುರುತಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ತಿಳಿಸಿದ್ದೆ. ಜಿಲ್ಲೆಯ ಜನರಿಗೆ ಉದ್ಯೋಗವಕಾಶ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆ ಅವಶ್ಯವಿದ್ದು, ಆದಷ್ಟು ಬೇಗ ಜಾಗ ಒದಗಿಸುವಂತೆ ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ನಾಗಮಂಗಲ ತಾಲೂಕು ಹಟ್ನ ಗ್ರಾಮದಲ್ಲಿ 1277 ಎಕರೆ, ಮದ್ದೂರಿನ ಕುದರಗುಂಡಿ ಕಾಲೋನಿ ಬಳಿ 109 ಎಕರೆ ಜಮೀನು ಗುರುತಿಸಿದ್ದು, ಒಂದು ಎಕರೆಗೆ 35 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ, ಸ್ಥಳೀಯ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮಳವಳ್ಳಿ ತಾಲೂಕಿನ ಪಂಡಿತನಹಳ್ಳಿ ಬಳಿ 1249 ಎಕರೆ ಜಾಗವಿದೆ. 350 ಎಕರೆ ಜಾಗ ಖರೀದಿಗೂ ವಿರೋಧವಿದೆ. ಮಂಡ್ಯ ತಾಲೂಕಿನ ನೊದೆಕೊಪ್ಪಲು ಬಳಿ 294 ಎಕರೆ ಜಾಗವಿದ್ದು ಅಲ್ಲಿಯೂ ರೈತರ ವಿರೋಧವಿರುವುದಾಗಿ ಸಭೆಗೆ ವಿವರಿಸಿದರು.

ಕೈಗಾರಿಕೆ ಸ್ಥಾಪನೆಗೆ ನೇರವಾಗಿ ಜಾಗ ಕೊಡಲಾಗುವುದಿಲ್ಲ. ಉದ್ಯಮಿಗಳು ಯಾವ ಕೈಗಾರಿಕೆ ಸ್ಥಾಪಿಸಿಬೇಕೆಂದುಕೊಂಡಿರುವರೋ ಅವರು ಮೊದಲು ಕೆಐಎಡಿಬಿಗೆ ಅರ್ಜಿ ಹಾಕಬೇಕು. ನಂತರ ಇಲಾಖೆಯವರು ಭೂ ಸ್ವಾಧಿನಪಡಿಸಿಕೊಂಡು ನೀಡಬೇಕು ಎಂದರು.

ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಮಂಡ್ಯ ಸುತ್ತಮುತ್ತ ಕೃಷಿ ಭೂಮಿ ಇರುವುದರಿಂದ ಇಲ್ಲಿ ಜಾಗ ಸಿಗುವುದು ಕಷ್ಟ. ಹಾಗಂತ ಜಿಲ್ಲೆಯ ಯಾವುದೋ ಮೂಲೆಯನ್ನು ಗುರುತಿಸುವುದೂ ಕಷ್ಟ. ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವಂತೆ, ಮೂಲಸೌಲಭ್ಯಗಳನ್ನು ಒದಗಿಸಬಹುದಾದ ಸ್ಥಳಗಳನ್ನು ಶೀಘ್ರ ಗುರುತಿಸಿ, ಸಮಸ್ಯೆಗಳಿದ್ದರೆ ಪರಿಹರಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಕೆರೆಗಳನ್ನು ತುಂಬಿಸುತ್ತಿಲ್ಲವೇಕೆ?

ಕೃಷ್ಣರಾಜಸಾಗರ ಮೂರು ಬಾರಿ ಭರ್ತಿಯಾಗಿದೆ, ಸಾಕಷ್ಟು ನೀರಿದೆ, ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ನೀವು ಮದ್ದೂರು, ಮಳವಳ್ಳಿ ಕೊನೆಯ ಭಾಗದ ಕೆರೆಗಳನ್ನು ತುಂಬಿಸುತ್ತಿಲ್ಲವೇಕೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಪ್ರಶ್ನಿಸಿದರು.

ಹೆಬ್ಬಕವಾಡಿ ನಾಲೆ ಆಧುನೀಕರಣ ನೆಪದಲ್ಲಿ ಕೆರೆಗಳನ್ನು ತುಂಬಿಸುತ್ತಿಲ್ಲ. ಕೊನೆಯ ಭಾಗದ ಕೆರೆಗಳು ಖಾಲಿ ಇವೆ ಎಂದು ದೂರಿದರೆ, ಮದ್ದೂರು ತಾಲೂಕು ಕೊಪ್ಪ ಹೋಬಳಿಗೂ ನೀರು ಹರಿಸುತ್ತಿಲ್ಲ. ಮೂರ್‍ನಾಲ್ಕು ದಿನಗಳಿಗೊಮ್ಮೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆ ಭಾಗದ ಕೆರೆಗಳೂ ಖಾಲಿ ಇರುವುದಾಗಿ ದೂಷಿಸಿದರು.

ಕೃಷ್ಣರಾಜಸಾಗರ ಜಲಾಶಯದ ಅಧೀಕ್ಷಕ ಅಭಿಯಂತರ ರಘುರಾಮ್ ಪ್ರತಿಕ್ರಿಯಿಸಿ, ಕೊಪ್ಪ ಭಾಗದಲ್ಲಿ ಏಳು ಕೆರೆಗಳು ತುಂಬಬೇಕಿದೆ. ಮಂಡ್ಯದಲ್ಲಿ ರೈತರು ನೀರನ್ನು ಬೆಳೆಗಳಿಗೆ ಹರಿಸುತ್ತಿರುವುದರಿಂದ ನಿರಂತರ ನೀರು ಹರಿಸುವುದಕ್ಕೆ ತೊಂದರೆಯಾಗುತ್ತಿದೆ. ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್, ಎಚ್.ಟಿ.ಮಂಜು, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇತರರಿದ್ದರು.ನಾಲೆ ಪಕ್ಕ ತಡೆಗೋಡೆಗಳನ್ನು ನಿರ್ಮಿಸಿ

ನಾಲೆಗಳಿಗೆ ವಾಹನಗಳು ಉರುಳುವುದು, ಪ್ರಾಣಹಾನಿ ಸಂಭವಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದಾಗ, ನಾಲಾ ದುರಂತ ಪ್ರಕರಣಗಳು ಸಂಭವಿಸುವುದನ್ನು ತಡೆಯಲು ತಾಂತ್ರಿಕ ತಂಡವೊಂದನ್ನು ರಚಿಸಿ ಸರ್ವೇ ನಡೆಸಲಾಯಿತು. ಜಿಲ್ಲೆಯ 535 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಬ್ಲಾಕ್‌ಸ್ಪಾಟ್ ಗುರುತಿಸಲಾಗಿದೆ. ಪಿಡಬ್ಲ್ಯುಡಿ, ಕಾವೇರಿ ನೀರಾವರಿ ನಿಗಮದ ಮೂಲಕ 191 ಕೋಟಿ ರು.ಗೆ ಅಂದಾಜುಪಟ್ಟಿ ತಯಾರಿಸಲಾಗಿದೆ. ವೆಚ್ಚ ಹೆಚ್ಚಾಗಿದ್ದರಿಂದ ಅದರಲ್ಲಿ 35 ಕೋಟಿ ರು. ಕಡಿಮೆ ಮಾಡಿ ತಿರುವುಗಳಲ್ಲಿ ಕ್ರಾಸ್ ಬೋರ್ಡ್ ನಿರ್ಮಿಸಲಾಗುತ್ತಿದೆ. ಈ ರಸ್ತೆಗಳಲ್ಲಿ ಕೆಲವರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿರುವುದರಿಂದ ರಸ್ತೆ ಕಾಣಿಸುವುದಿಲ್ಲ. ಆ ಒತ್ತುವರಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸಭೆಗೆ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನವಿಕಾಸ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕಾರ್ಕಳ: ಜ್ಞಾನಸುಧ ‘ಜ್ಞಾನ ತೀರ್ಥ-ವಿಟಲ ಸಂಗೀತ ಸಂಜೆ’