ಮೈಸೂರು ಗಲಭೆ ಪ್ರಕರಣದ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನೀಡುವುದು ಸೂಕ್ತವಲ್ಲ : ಕೇಂದ್ರ ಸಚಿವ ಎಚ್‌ಡಿಕೆ

KannadaprabhaNewsNetwork |  
Published : Feb 16, 2025, 01:46 AM ISTUpdated : Feb 16, 2025, 12:55 PM IST
15ಎಚ್ಎಸ್ಎನ್17 : ಸಕಲೇಶಪುರದಲ್ಲಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

 ರಾಜಕೀಯ ನಾಯಕರು ಕ್ಷುಲ್ಲಕ ವಿಚಾರಗಳಿಗಿಂತ ಮುಖ್ಯ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಕೇಂದ್ರ ಮಂತ್ರಿ ಕುಮಾರಸ್ವಾಮಿ ಹೇಳಿದರು.

 ಸಕಲೇಶಪುರ  : ಮೈಸೂರು ಗಲಭೆ ಪ್ರಕರಣದ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನೀಡುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಆದಿಚುಂಚನಗಿರಿ ಮಠದ ವತಿಯಿಂದ ಪಟ್ಟಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕೃಷಿ ಸಮ್ಮೇಳನದಲ್ಲಿ ಭಾಗವಹಿಸಿಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಮಾಜದವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರು. 

ಈ ವಿಷಯಕ್ಕೆ ರಾಜಕೀಯ ತಿರುವು ಕೊಡಲಾಗುತ್ತಿದೆ, ಈ ಘಟನೆ ರಾಜ್ಯದಲ್ಲಿ ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡಲು ಕಾರಣವಾಗಿದೆ. ಸಾಮಾನ್ಯ ಜನತೆಗೆ ಆಗುತ್ತಿರುವ ಆರ್ಥಿಕ ಹೊರೆ, ದರ ಏರಿಕೆ, ಸರ್ಕಾರದ ಹಣಕಾಸಿನ ನಿರ್ವಹಣೆಯ ಬಗ್ಗೆ ಸೂಕ್ತ ದಿಕ್ಕು ಕಲ್ಪಿಸಬೇಕಾಗಿದ್ದರೆ, ರಾಜಕೀಯ ನಾಯಕರು ಕ್ಷುಲ್ಲಕ ವಿಚಾರಗಳಿಗಿಂತ ಮುಖ್ಯ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

ಆರ್ಥಿಕ ಸಂಕಷ್ಟ ಮತ್ತು ನಿರ್ವಹಣಾ ಕೊರತೆ:ಕೇಂದ್ರ ಸಚಿವರು ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತಂತೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ೧.೮೯ ಲಕ್ಷ ಕೋಟಿ ತೆರಿಗೆ ಸಂಗ್ರಹ ನಿರೀಕ್ಷಿಸಿದ್ದರೂ, ಹದಿನೈದು ಸಾವಿರ ಕೋಟಿ ಕೊರತೆ ಎದುರಿಸಿದೆ. ಈ ಹಣ ತುಂಬಿಸಲು ಪ್ರಯತ್ನವಾಗಿ ಸರ್ಕಾರ ಐನೂರು ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಮುಂದಾಗಿದೆ, ಎಂದರು.

ಕಾಡಾನೆ ಸಮಸ್ಯೆ:ಹಾಸನ ಜಿಲ್ಲೆಯಯ ಹಲವೆಡೆ ಕಾಡಾನೆ ದಾಳಿಯಿಂದ ಜನ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಅರಣ್ಯ ಇಲಾಖೆ ಮಂತ್ರಿಗಳು 65% ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ೨೦೧೮ರ ನಾನು ನೀಡಿದ ಹಣದಿಂದ ನಿರ್ಮಿಸಲಾಗಿದೆ. ಅದಾದ ಮೇಲೆ ಸರ್ಕಾರ ಯಾವುದೇ ಹೊಸ ಪ್ರಯತ್ನ ಮಾಡಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.ಕೇಂದ್ರ ಸಚಿವರು ಕೆಪಿಎಸ್ಸಿ ನೇಮಕಾತಿ ಕುರಿತಂತೆ ಸರ್ಕಾರದ ನಿರ್ಲಕ್ಷ್ಯವನ್ನೂ ಲೇವಡಿ ಮಾಡಿದರು. 

2014ರ ನೇಮಕಾತಿಯ ಬಗ್ಗೆ ದೊಡ್ಡ ಚರ್ಚೆ ನಡೆದು, 370 ಜನರ ಭವಿಷ್ಯ ಹಾಳಾಯಿತು. 2025ಕ್ಕೆ ಬಂದರೂ, ಯಾವುದೇ ಹೊಸ ಉದ್ಯೋಗ ಸೃಷ್ಟಿಯಾಗಿಲ್ಲ. ಯುವಕರ ಭವಿಷ್ಯವನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ, ಎಂದು ಆರೋಪಿಸಿದರು.

ಮೆಟ್ರೋ ದರ ಜನಸಾಮಾನ್ಯರ ಮೇಲೆ ಹೊರೆ: ಬೆಂಗಳೂರು ಮೆಟ್ರೋ ದರ ಏರಿಕೆಯು ನೇರವಾಗಿ ಜನಸಾಮಾನ್ಯರ ಮೇಲೆ ಹೊರೆ ಹೇರಿದೆ. ಪ್ರತಿ ದಿನ ಐದು ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರ ಜನರ ಕಡೆಯಿಂದ ಹಣ ಸುಲಿಯುತ್ತಿದೆ. ರಾಜ್ಯದಲ್ಲಿ ಯಾವುದೇ ವಾಸ್ತವಿಕ ಅಭಿವೃದ್ಧಿ ಕಾಣುತ್ತಿಲ್ಲ. ಸರ್ಕಾರ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಬೆನ್ನಿಗಾನಹಳ್ಳಿ ಭೂಮಿ ಅಕ್ರಮ ಒತ್ತುವರಿ ಪ್ರಕರಣ ಕುರಿತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್ ಹಿರೇಮಠ್ ರಿಪೋರ್ಟ್ ಮೇಲಿನ ಪ್ರಕರಣ ಇದು. ಮೈತ್ರಿ ಎಂಬುವವರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡು 370 ಜನರನ್ನು ಬೀದಿಗೆ ತಂದರು. ನಾನು ಅವರ ಪರ ಹೋರಾಟ ಮಾಡಿದ್ದಕ್ಕೆ ಈ ಪ್ರಕರಣ ಎಂದು ಆಕ್ರೋಶ ಹೊರಹಾಕಿದರು.

ರಾಜಕೀಯ ಪಿತೂರಿ ಆರೋಪ:

ಸಿದ್ದಪ್ಪ ಅವರು ಆ ಸಮಯದಲ್ಲಿ ರಾಮನಗರದ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ಅವರಿಂದ ಒಂದು ವರದಿ ಕೊಡಿಸಿಕೊಂಡು ಈ ರಾಜಕೀಯ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಅವರ ಕಾಲದಲ್ಲೂ ಈ ಪ್ರಕರಣದ ತನಿಖೆ ನಡೆಸಿದ್ದರು, ಏನೂ ಸಿಗಲಿಲ್ಲ. ಈಗ ಮತ್ತೆ ಅದೇ ನಾಟಕ ನಡೀತಿದೆ, ಎಂದು ಕುಮಾರಸ್ವಾಮಿ ಆರೋಪಿಸಿದರು.

ನಾನು ಭಯಪಡುವುದಿಲ್ಲ:

ನಾನು ಕಷ್ಟಪಟ್ಟು ಸಂಪಾದನೆ ಮಾಡಿರುವುದಕ್ಕೆ ಇಂದು ನನ್ನನ್ನು ಗುರಿಯಾಗಿಸಲಾಗಿದೆ. ಆದರೆ ಲೂಟಿ ಮಾಡಿ ಹಣ ಸಂಪಾದಿಸಿದವರನ್ನು ಯಾರೂ ಪ್ರಶ್ನಿಸುತ್ತಿಲ್ಲ. ನಾನು ಈ ರಾಜಕೀಯ ದಾಳಿಗಳಿಗೆ ಹೆದರಿಕೊಳ್ಳುವವರಲ್ಲ, ಮುಂದೆ ಏನಾಗುತ್ತದೋ ನೋಡೋಣ ಎಂದು ಅವರು ಸವಾಲು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌