ಕೇಂದ್ರ ಸಚಿವರಿಗೆ ಕಾಳಜಿಯಿದ್ದರೆ ಎನ್‌ಎಂಡಿಸಿ ಕಾರ್ಖಾನೆ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡಲಿ

KannadaprabhaNewsNetwork |  
Published : Feb 28, 2026, 02:00 AM IST
ಬಳ್ಳಾರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಗಣಿಬಾಧಿತ  ಪ್ರದೇಶದ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಮುಖಂಡರು ಸಂಡೂರಿನಲ್ಲಿ ಹೊಸದಾಗಿ ಗಣಿಗಾರಿಕೆಗೆ ಆಸ್ಪದ ನೀಡಬಾರದು ಎಂದು ಆಗ್ರಹಿಸಿದರು.  | Kannada Prabha

ಸಾರಾಂಶ

ಕೆಐಒಸಿಎಲ್ ಹೆಸರಿನಲ್ಲಿ ಹೊಸದಾಗಿ ಗಣಿಗಾರಿಕೆ ಪಡೆದು ಬಳಿಕ ಅದನ್ನು ಖಾಸಗಿಯವರಿಗೆ ನೀಡುವ ಹುನ್ನಾರವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೈಬಿಡಬೇಕು

ಬಳ್ಳಾರಿ; ಕುಡಿತಿನಿ ಬಳಿ ಕೈಗಾರಿಕೆ ಆರಂಭಿಸಲು ಪಡೆದಿರುವ ಜಮೀನಿನಲ್ಲಿ ಎನ್‌ಎಂಡಿಸಿಯ ಪ್ಲಾಂಟ್ ಆರಂಭಿಸಬೇಕು. ಕೆಐಒಸಿಎಲ್ ಹೆಸರಿನಲ್ಲಿ ಹೊಸದಾಗಿ ಗಣಿಗಾರಿಕೆ ಪಡೆದು ಬಳಿಕ ಅದನ್ನು ಖಾಸಗಿಯವರಿಗೆ ನೀಡುವ ಹುನ್ನಾರವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೈಬಿಡಬೇಕು ಎಂದು ಗಣಿಬಾಧಿತ ಪ್ರದೇಶದ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ಶ್ರೀಶೈಲ ಆಲದಹಳ್ಳಿ ಹಾಗೂ ಉಗ್ರ ನರಸಿಂಹೇಗೌಡ, ಕೇಂದ್ರ ಉಕ್ಕು, ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸಂಡೂರಿನಲ್ಲಿ ಗಣಿಗಾರಿಕೆ ಮಾಡುವ ಕುರಿತು ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಈಚೆಗೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಸಂಡೂರಿನ ಅರಣ್ಯ ಪ್ರದೇಶಕ್ಕೆ ಕುತ್ತು ತರುವ ಹೇಳಿಕೆಯನ್ನು ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಸಂಡೂರು ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಅರಣ್ಯ ಪೈಕಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಉಳಿದಿಳಿದಿರುವ ಅರಣ್ಯದಿಂದ ಜನರು ಹಾಗೂ ವನ್ಯಜೀವಿಗಳು ಒಂದಷ್ಟು ಉಸಿರಾಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸಚಿವ ಕುಮಾರಸ್ವಾಮಿ, ಮಂಗಳೂರಿನಲ್ಲಿರುವ ಕೆಐಒಸಿಎಲ್ ಪೆಲೆಟ್‌/ ಬ್ಲಾಸ್ಟ್‌ ಫರ್ನಿಷ್ ಪ್ಲಾಂಟ್, ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಉಕ್ಕು ಕಂಪನಿಗಳಿಗೆ (ವಿಐಎಸ್‌ಎಲ್‌) ಕಚ್ಚಾ ಕಬ್ಬಿಣ ಅದಿರು ಪೂರೈಕೆ ಕುರಿತು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವರು ನೀಡಿರುವ ಹೇಳಿಕೆ ಜಾರಿಗೊಂಡರೆ ಸಂಡೂರಿನ ಕುಮಾರಸ್ವಾಮಿ ಅರಣ್ಯ ಪ್ರದೇಶ ದೇವದಾರಿ ಬ್ಲಾಕ್‌ನಲ್ಲಿ ಕೆಐಒಸಿಎಲ್ ಗೆ 1 ಸಾವಿರ ಎಕರೆ ಅರಣ್ಯ, ರಾಮಘಡ ಅರಣ್ಯ ಬ್ಲಾಕ್‌ನಲ್ಲಿ ವಿಐಎಸ್‌ಎಲ್ ಗೆ 150 ಎಕರೆ ಗಣಿಗಾರಿಕೆ ಉದ್ದೇಶಕ್ಕಾಗಿ 1.30 ಲಕ್ಷ ಮರಗಳನ್ನು ಕಡಿದು ಗಣಿಗಾರಿಕೆ ಆರಂಭಿಸಬೇಕಾಗುತ್ತದೆ. ಈಗಾಗಲೇ ಅವ್ಯಾಹತವಾಗಿ ನಡೆದಿರುವ ಅಕ್ರಮ ಗಣಿಗಾರಿಕೆಯಿಂದ ಸಂಡೂರಿನ ಪರಿಸರ ನಾಶವಾಗಿದೆ. ಮತ್ತೆ ಈ ಭಾಗದಲ್ಲಿ ಪರಿಸರ ನಾಶಗೊಳಿಸಿ ಗಣಿಗಾರಿಕೆ ಮಾಡುವುದು ಎಷ್ಟು ಸರಿ? ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಗೆ ಸಂಡೂರಿನಲ್ಲಾಗಿರುವ ಅಕ್ರಮ ಗಣಿಗಾರಿಕೆಯಿಂದಾಗಿರುವ ಅಪಾರ ಪ್ರಮಾಣದ ಪರಿಸರ ನಾಶದ ಬಗ್ಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಒಂದು ವೇಳೆ ಕೇಂದ್ರ ಸಚಿವರಿಗೆ ಉಕ್ಕು ಸ್ಥಾವರಗಳನ್ನು ಪುನಶ್ಚೇತನಗೊಳಿಸುವ ಉದ್ದೇಶವಿದ್ದರೆ ಕೇಂದ್ರ ಸರ್ಕಾರ ಸ್ವಾಮ್ಯದ ಎನ್‌ಎಂಡಿಸಿಯಿಂದಲೇ ನೇರವಾಗಿ ಅದಿರು ಖರೀದಿ ಮಾಡಲಿ ಎಂದು ಆಗ್ರಹಿಸಿದರು.

ಕನ್ನಡಿಗರ ಕಂಪನಿಗಳಾದ ವಿಐಎಸ್ಎಲ್ ಹಾಗೂ ವಿಐಎಸ್‌ಎಲ್ ಉಕ್ಕು ಸ್ಥಾವರಗಳಿಗೆ ಅವಶ್ಯಕವಾಗಿರುವ ಕಚ್ಚಾ ಕಬ್ಬಿಣದ ಅದಿರಿನ ಕೊರತೆ ನೀಗಿಸಲು ದಟ್ಟವಾದ ಕಾನನದಲ್ಲಿರುವ ಲಕ್ಷಾಂತರ ಮರಗಳನ್ನು ನಾಶಗೊಳಿಸುವುದು ಸರಿಯಲ್ಲ. ಉಕ್ಕು ಕಾರ್ಖಾನೆ ಸ್ಥಾಪಿಸುವ ಉದ್ದೇಶದಿಂದಲೇ 2014ರಲ್ಲಿ ಕುಡಿತಿನಿ ಭಾಗದಲ್ಲಿ ಸಾವಿರಾರು ಎಕರೆ ಜಮೀನನ್ನು ಪಡೆದುಕೊಂಡು ಕೊನೆಗೆ ಕಾರ್ಖಾನೆ ಸ್ಥಾಪಿಸದ ಎನ್‌ಎಂಡಿಸಿ ಕೇವಲ ಅದಿರನ್ನು ಉತ್ಪಾದಿಸಿ ಖಾಸಗಿ ಉಕ್ಕು ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದೆ. ಇದರ ಫಲದಿಂದಾಗಿಯೇ ಬಳ್ಳಾರಿ ಜಿಲ್ಲೆಯಲ್ಲಿ ಖಾಸಗಿ ಉಕ್ಕು ಕಂಪನಿಗಳು ಬಲಿಷ್ಠಗೊಂಡಿವೆ ಎಂದರು.

ಹೋರಾಟ ಸಮಿತಿಯ ಟಿ.ಎಂ.ಶಿವಕುಮಾರ್, ಸೋಮಶೇಖರಗೌಡ, ಎಂಎಲ್‌ಕೆ ನಾಯ್ಡು, ಈರಣ್ಣ ಮೂಲೆಮನೆ, ನಾಗರಾಜ್, ಚಾನಾಳ್ ಗಣೇಶ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮ ದಿನಾಚರಣೆ: ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ
ಭೂಮಿಯ ಮೂಲ ಹಕ್ಕುದಾರರಿಗೆ ಆದೇಶಕ್ಕೆ ಆಗ್ರಹಿಸಿ ಪ್ರತಿಭಟನೆ