ರಣಜಿ ಪಂದ್ಯಕ್ಕೆ ಸಾಕ್ಷಿಯಾದ ಕೇಂದ್ರ ಸಚಿವ, ಸಿಎಂ

KannadaprabhaNewsNetwork |  
Published : Mar 01, 2026, 02:30 AM IST
ಚಾಂಪಿಯನ್‌ ಆಗಿ ಹೊರಹೊಮ್ಮಿದ ಜಮ್ಮು-ಕಾಶ್ಮೀರ ತಂಡದ ಆಟಗಾರರು ಕಪ್‌ ಮೇಲೆತ್ತಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಮೊದಲ ಬಾರಿಗೆ ನಗರಕ್ಕೆ ಅದರಲ್ಲೂ ರಣಜಿ ಫೈನಲ್‌ಗೆ ಏರಿದ್ದ ತಮ್ಮ ರಾಜ್ಯದ ಕ್ರಿಕೆಟ್‌ ತಂಡದ ಆಟವನ್ನು ವೀಕ್ಷಿಸುವುದಕ್ಕಾಗಿಯೇ ಆಗಮಿಸಿದ್ದು ವಿಶೇಷವಾಗಿತ್ತು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನಗರದಲ್ಲಿ ಮೊದಲ ಬಾರಿಗೆ ನಡೆದ ರಣಜಿ ಫೈನಲ್ ಪಂದ್ಯಕ್ಕೆ ಘಟಾನುಘಟಿ ರಾಜಕೀಯ ನಾಯಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾದರು.

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಮೊದಲ ಬಾರಿಗೆ ನಗರಕ್ಕೆ ಅದರಲ್ಲೂ ರಣಜಿ ಫೈನಲ್‌ಗೆ ಏರಿದ್ದ ತಮ್ಮ ರಾಜ್ಯದ ಕ್ರಿಕೆಟ್‌ ತಂಡದ ಆಟವನ್ನು ವೀಕ್ಷಿಸುವುದಕ್ಕಾಗಿಯೇ ಆಗಮಿಸಿದ್ದು ವಿಶೇಷವಾಗಿತ್ತು. ಗೆಲುವು ಖಚಿತವಾಗುತ್ತಿದ್ದಂತೆ ಜಮ್ಮ-ಕಾಶ್ಮೀರ ತಂಡದ ಆಟಗಾರರು, ಅಭಿಮಾನಿಗಳು ಮೈದಾನದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು. ಜತೆಗೆ ಪಂಜಾಬಿ ಡೋಲಿನ ಸದ್ದಿಗೂ ಸ್ಟೆಪ್‌ ಹಾಕಿದರು.

ಕುಗ್ಗದ ಹುಮ್ಮಸ್ಸು:

ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ರಣಜಿ ಪಂದ್ಯದ 5ನೇ ದಿನವೂ ಕ್ರಿಕೆಟ್ ಅಭಿಮಾನಿಗಳ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಆರಂಭದಲ್ಲಿ ಪ್ರೇಕ್ಷಕರ ಗ್ಯಾಲರಿಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. 12 ಗಂಟೆಯ ಬಳಿಕ ಬಹುತೇಕ ಆಸನಗಳೆಲ್ಲ ಭರ್ತಿಯಾಗಿದ್ದವು. ಜತೆಗೆ ಪಂದ್ಯ ಮುಗಿದ ಬಳಿಕ ಹಲವು ಅಭಿಮಾನಿಗಳು ಮುಗಿಬಿದ್ದು ತಮ್ಮ ನೆಚ್ಚಿನ ಆಟಗಾರರ ಆಟೋಗ್ರಾಫ್‌ ಪಡೆದುಕೊಂಡರು. ಇನ್ನು ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಿರಾಸೆಯಿಂದ ಮರಳಿದರು:

ಶನಿವಾರ ಕರ್ನಾಟಕ ತಂಡದ ಆಟಗಾರರು ಜಮ್ಮು-ಕಾಶ್ಮೀರ ತಂಡದ ಆಟ ಪೂರ್ಣಗೊಳಿಸಿ ಬ್ಯಾಟಿಂಗ್‌ ಮಾಡಿ ಗೆಲುವು ಸಾಧಿಸುತ್ತಾರೆಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ಮಧ್ಯಾಹ್ನವೇ ನಿರಾಸೆಯನ್ನುಂಟು ಮಾಡಿತು. ಸಂಜೆಯ ವರೆಗೂ ಪಂದ್ಯ ನಡೆಯಲಿದೆ ಎಂದುಕೊಂಡು 12, 1, 2 ಗಂಟೆಗೆ ಹಲವರು ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಆದರೆ, ಮಧ್ಯಾಹ್ನ 2 ಗಂಟೆಯ ಬಳಿಕ ಡ್ರಾ ಘೋಷಿಸಿದ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಯಿತು. ಪಂದ್ಯದಲ್ಲಿ ಕರ್ನಾಟಕ ಸೋಲು ಕಂಡ ಹಿನ್ನೆಲೆ ಕೆಲವರು ಮರಳಿದರೆ ಇನ್ನು ಕೆಲವರು ನಿರಾಸೆಯಿಂದಲೇ ಪಂದ್ಯ ಮುಗಿಯುವುದಕ್ಕೂ ಮುನ್ನವೇ ಮನೆಯತ್ತ ಹೆಜ್ಜೆ ಹಾಕಿದರು.

ರಣಜಿ ಹೊಸ ಪ್ರತಿಭೆ ಹುಟ್ಟುಹಾಕಲು ಸಹಕಾರಿಯಾಗಿದೆ. ದೇಶಕ್ಕೆ ಪ್ರತಿನಿಧಿಸುವವರಿಗೆ ಇದೊಂದು ವೇದಿಕೆಯಾಗಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವು ಆ ಭಾಗದಲ್ಲಿ ಕ್ರಿಕೆಟ್ ಮತ್ತಷ್ಟು ಎತ್ತರಕ್ಕೆ ಬೆಳೆಯಲು ನೆರವಾಗಲಿದೆ.

ಮಿಥುನ್ ಮನ್ಹಾಸ್, ಬಿಸಿಸಿಐ ಅಧ್ಯಕ್ಷಪ್ರತಿ ರನ್‌ಗಾಗಿ ಆಟ ಆಡುವುದು ಮುಖ್ಯ, ಉತ್ತಮ ಬೌಲಿಂಗ್‌ನಿಂದ ಎದುರಾಳಿ ತಂಡ ಕಟ್ಟಿ ಹಾಕುವಲ್ಲಿ ಯಶಸ್ಸಿಯಾಗಿದ್ದೇವೆ. ಪ್ರಥಮ ಬಾರಿಗೆ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ಮೂಡಿಸಿದೆ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದು, ನಮಗೆ ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸುವ ಭರವಸೆ ಹೊಂದಿದ್ದೇವೆ.

ಪಾರಸ ಡೋಗ್ರಾ, ಜಮ್ಮು-ಕಾಶ್ಮೀರ ತಂಡದ ನಾಯಕ

ಸರಣಿಯುದ್ದಕ್ಕೂ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ಜಮ್ಮು-ಕಾಶ್ಮೀರ ನೀಡಿದ್ದ ಸವಾಲಿನ ಮೊತ್ತ ಬೆನ್ನಟ್ಟುವಲ್ಲಿ ಕೊಂಚ ಎಡವಿತು. ಎದುರಾಳಿ ತಂಡದ ರನ್‌ ನಿಯಂತ್ರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಮುಂದೆ ಇದು ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ. ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಪ್ರಮುಖ ಮೂರು ವಿಕೆಟ್ ಬೇಗ ಕಳೆದುಕೊಂಡಿದ್ದು, ಹಿನ್ನಡೆಗೆ ಕಾರಣವಾಯಿತು.

ಯರೇಗೌಡ. ಕೆ, ಕರ್ನಾಟಕ ತಂಡದ ಕೋಚ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ