೧೧ ವರ್ಷದಲ್ಲಿ ಮೋದಿ ಸರ್ಕಾರದಿಂದ ಅದ್ವಿತೀಯ ಸಾಧನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

KannadaprabhaNewsNetwork |  
Published : Feb 10, 2026, 01:30 AM IST
9ಕೆಎಂಎನ್‌ಡಿ-2ಮಂಡ್ತದಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಎಲ್ಲ ಹೆದ್ದಾರಿಗಳಲ್ಲೂ ಇದನ್ನೇ ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಇನ್ನೂ ಸುಧಾರಣೆ ಆಗುವ ನಿಟ್ಟಿನಲ್ಲಿ ತಜ್ಞರು ಕಾರ್ಯೋನ್ಮುಖರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ೬೦ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲು ಸಾಧ್ಯವಾಗದ ಸಾಧನೆಗಳನ್ನು ಬಿಜೆಪಿ ಸರ್ಕಾರ ಕೇವಲ ೧೧ ವರ್ಷಗಳಲ್ಲಿ ಸಾಧಿಸಿ ತೋರಿಸಿದೆ. ಯುಪಿಎ ಸರ್ಕಾರ ರೂಪಿಸಿದ್ದ ಹಲವು ಯೋಜನೆಗಳಿಗೆ ಮರುಜೀವ ನೀಡುವ ಜೊತೆಗೆ ಅವುಗಳಿಗೆ ವೇಗವನ್ನೂ ನೀಡಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ರಸ್ತೆ, ರೈಲು, ಆಡಳಿತ ಸುಧಾರಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಸೇವಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಇವೆಲ್ಲವೂ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಾಧ್ಯವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಎಲ್ಲ ಹೆದ್ದಾರಿಗಳಲ್ಲೂ ಇದನ್ನೇ ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಇನ್ನೂ ಸುಧಾರಣೆ ಆಗುವ ನಿಟ್ಟಿನಲ್ಲಿ ತಜ್ಞರು ಕಾರ್ಯೋನ್ಮುಖರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಮುಂದೆ:

ಭಾರತದಲ್ಲಿ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಈ ಪೈಕಿ ಅವರ ಆಯ್ಕೆ ಕರ್ನಾಟಕ ಆಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರನ್ನೇ ಹೆಚ್ಚು ಅವಲಂಬಿಸಿರುತ್ತಾರೆ. ವೇಗವಾಗಿ ಉತ್ಪಾದನೆ ಮತ್ತು ರಫ್ತು ಮಾಡಲು ಎಲ್ಲ ವ್ಯವಸ್ಥೆಗಳು ಇರುವುದರಿಂದ ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕರ್ನಾಟಕ ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದ ಜಾಗವಾಗಿದೆ. ಆದರೆ, ರಾಜ್ಯ ಸರ್ಕಾರವೂ ಅವರಿಗೆ ಸೂಕ್ತವಾದ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಳ್ಳಬೇಕಾಗಿದೆ ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಇಲ್ಲ:

ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದಿಲ್ಲ. ರಾಜ್ಯದ ಪ್ರತಿನಿಧಿಗಳು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಣಕಾಸು ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದೆ. ಇದು ಯಾವ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಇಷ್ಟೇ ಅಲ್ಲದೆ ಸ್ವತಃ ಕೇಂದ್ರ ಸರ್ಕಾರಕ್ಕೂ ಸಹ ಹಣಕಾಸು ಆಯೋಗ ನಿಗದಿಪಡಿಸಿದ ಅನುದಾನವನ್ನೇ ಬಳಸಿಕೊಳ್ಳಬೇಕು ಎಂದು ವಿವರಿಸಿದರು.

ಕಳೆದ ವರ್ಷ ರಾಜ್ಯಕ್ಕೆ ೩.೬ರಷ್ಟು ಅನುದಾನ ನೀಡಿದೆ. ಈ ಬಾರಿ ೪.೧೬ರಷ್ಟು ಅನುದಾನ ನೀಡುವುದರೊಂದಿಗೆ ಒಂದೂವರೆ ಪಟ್ಟು ಹೆಚ್ಚಳ ಮಾಡಿದೆ. ಇದು ಯಾವ ರೀತಿ ಅನ್ಯಾಯ ಎಂದು ಅವರು ಪ್ರಶ್ನಿಸಿದರು.

ವಿವಿಗಳಿಗೆ ನಯಾಪೈಸೆ ಹಣ ಕೊಡಲಿಲ್ಲ:

ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಆಲೋಚನೆಯಿಂದ ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದಲ್ಲಿ ೯ ವಿವಿಗಳನ್ನು ಸ್ಥಾಪಿಸಲಾಯಿತು. ಇರುವಂತಹ ಹುದ್ದೆಗಳಲ್ಲೇ ಅವುಗಳ ನಿರ್ವಹಣೆ ಸಾಧ್ಯವಿತ್ತು. ಆದರೆ, ರಾಜ್ಯಸರ್ಕಾರ ಹೊಸ ವಿಶ್ವವಿದ್ಯಾನಿಲಯಗಳಿಗೆ ಒಂದು ರುಪಾಯಿ ಹಣ ಕೊಡಲಿಲ್ಲ. ಮೈಸೂರು ವಿವಿಯಲ್ಲಿ ಒತ್ತಡ ಹೆಚ್ಚಿದ ಕಾರಣಕ್ಕೆ ಪ್ರತ್ಯೇಕ ವಿವಿಗಳನ್ನು ಸ್ಥಾಪಿಸುವ ಚಿಂತನೆ ಮಾಡಲಾಗಿತ್ತು. ಇದರಿಂದ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ಒಳಗೊಳ್ಳುವಿಕೆಯೂ ಹೆಚ್ಚಾಗಿತ್ತು. ಆದರೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅನುದಾನ ನೀಡದೆ ಅವುಗಳ ಕತ್ತು ಹಿಸುಕಿದೆ ಎಂದು ಆರೋಪಿಸಿದರು.

ಹೊಸ ವಿಶ್ವವಿದ್ಯಾಲಯಗಳಿಗೂ ಹಣವನ್ನೂ ಕೊಡಲಿಲ್ಲ, ಹೊಸ ಹುದ್ದೆಗಳನ್ನೂ ಸೃಜಿಸಲಿಲ್ಲ. ಕಾಂಗ್ರೆಸ್ ಸರ್ಕಾರವೇ ಮಂಜೂರು ಮಾಡಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಎಷ್ಟು ಹುದ್ದೆಗಳನ್ನು ಸೃಜಿಸಲಾಗಿದೆ. ಆ ವಿಶ್ವವಿದ್ಯಾಲಯ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂದು ಪ್ರಶ್ನಿಸಿದ ಅವರು, ಮಂಡ್ಯ ವಿವಿಗೆ ಮಂಜೂರಾಗಿದ್ದ ಹುದ್ದೆಗಳನ್ನು ಕಾಂಗ್ರೆಸ್ ಸರ್ಕಾರ ಭರ್ತಿ ಮಾಡಲಿಲ್ಲ. ಇದರಿಂದಾಗಿ ಹೊಸ ವಿವಿಗಳು ಸಮರ್ಥವಾಗಿ ಮುನ್ನಡೆಯಲು ಹಿನ್ನೆಡೆ ಉಂಟಾಗಿದೆ ಎಂದರು.

ಮೆಟ್ರೋಗೆ ಸಬ್ಸಿಡಿ ಕೊಡಿ:

ಬೆಂಗಳೂರಿನಲ್ಲಿ ಸಂಚಾರ ಒತ್ತಡ ಹೆಚ್ಚಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಮೆಟ್ರೋ ಸ್ಥಾಪಿಸಲಾಗಿದೆ. ಆದರೆ, ದರ ಹೆಚ್ಚಳ ಮಾಡುವ ಮೂಲಕ ಪ್ರಯಾಣಿಕರಿಗೆ ಹೊರೆ ಹೆಚ್ಚಿಸಬಾರದು. ಬೆಂಗಳೂರು ಅಭಿವೃದ್ಧಿಗೆ ೧ ಲಕ್ಷ ಕೋಟಿ ಅನುದಾನ ಮೀಸಲಿಡುವ ರಾಜ್ಯ ಸರ್ಕಾರ ಅದರಲ್ಲಿ ೫೦೦ ರಿಂದ ೧ ಸಾವಿರ ಕೋಟಿ ರು. ಹಣವನ್ನು ಮೆಟ್ರೋಗೆ ಸಬ್ಸಿಡಿ ನೀಡುವ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿಸಬಹುದು. ಅದು ಬಿಟ್ಟು ದರ ಹೆಚ್ಚಳ ಮಾಡುವ ಮೂಲಕ ಮತ್ತೆ ಸಂಚಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ದೂರಿದರು.

ರಾಜ್ಯ ಸರ್ಕಾರದ ನಿರ್ವಹಣೆಯಲ್ಲೇ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಆದರೆ, ಮೆಟ್ರೋ ನಿಯಂತ್ರಣ ಅಧಿಕಾರ ಕೇಂದ್ರದ ಕೈಯ್ಯಲ್ಲಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಮೆಟ್ರೋ ಸಂಸ್ಥೆಯನ್ನು ರಾಜ್ಯ ಸರ್ಕಾರದಿಂದ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಕೇಂದ್ರಕ್ಕೆ ಹಸ್ತಾಂತರಿಸಲಿ ಎಂದು ಸವಾಲು ಹಾಕಿದರು.

ಮೈತ್ರಿ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ:

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ಅದನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲೂ ಪಾಲನೆ ಮಾಡಬೇಕು. ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಆಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ, ಶ್ರೀಧರ್, ವಸಂತ್, ಎಚ್.ಆರ್.ಅಶೋಕ್‌ಕುಮಾರ್, ಎಚ್.ಪಿ.ಸ್ವಾಮಿ ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ: ಮಾರಸಿಂಗನಹಳ್ಳಿಯಲ್ಲಿ ಸಿಡಿ ಉತ್ಸವ ಸಂಪನ್ನ
ಪರೀಕ್ಷೆಗಳು ಮುಗಿಯುವ ತನಕ ಟಿ20 ಕ್ರಿಕೆಟ್ ಮುಂದೂಡಲು ಆಗ್ರಹ