ಕೊಪ್ಪಳ: ಸಂಗೀತ, ನೃತ್ಯ ಹಾಗೂ ಚಿತ್ರಕಲೆಯಂತಹ ಲಲಿತ ಕಲೆಗಳಿಗೆ ಬಹಳಷ್ಟು ಬೆಲೆಯಿದ್ದು, ಲಲಿತ ಕಲೆ ಭಾರತೀಯ ಸಂಸ್ಕೃತಿಯ ವೈಶಿಷ್ಟತೆ ತಿಳಿಸುತ್ತವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಿಮ್ಮೊಂದಿಗೆ ನಾವು, ಕಲಾವಿದರ ನಡೆ-ಜನಸಾಮಾನ್ಯರ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕಾಡೆಮಿಗಳ ಕಾರ್ಯಕ್ರಮಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಜತೆಗೆ ಅಕಾಡೆಮಿಯ ಸದಸ್ಯ ಸ್ಥಾನ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಕರ್ನಾಟಕ, ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಇಂತಹ ಅಕಾಡೆಮಿಗಳ ಬಗ್ಗೆ ಇಲ್ಲಿನ ಜನರಲ್ಲಿ ಮಾಹಿತಿಯೇ ಇರುತ್ತಿರಲಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗಗಳಲ್ಲಿಯೂ ದೊಡ್ಡ ದೊಡ್ಡ ಪ್ರತಿಭೆಗಳಿದ್ದು, ಈಗ ನಮ್ಮ ಭಾಗದವರಿಗೂ ಅವಕಾಶಗಳು ಸಿಗುತ್ತಿವೆ. ಇಲ್ಲಿನ ಜನರು ಈಗ ಅಕಾಡೆಮಿಗಳ ಸದಸ್ಯರಾಗುತ್ತಿದ್ದಾರೆ. ಇದರ ಜತೆಗೆ ಇಂತಹ ಕಾರ್ಯಕ್ರಮ ನಮ್ಮ ಭಾಗದಲ್ಲಿ ಹಮ್ಮಿಕೊಳ್ಳುವ ಮೂಲಕ ಪ್ರತಿಭೆ ಗುರುತಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸಹ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕಾಡೆಮಿಗಳಿಗೆ ಪ್ರತಿ ವರ್ಷ ₹80 ಲಕ್ಷ ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ವೆಂಕಟೇಶ ಬಡಿಗೇರ ಹಾಗೂ ನಾನು ಒಂದೇ ತರಗತಿಯಲ್ಲಿ ಓದಿ ಸ್ನೇಹಿತರಾಗಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ಸಂಜೀವಕುಮಾರ ನಿರಂತರ ಪರಿಶ್ರಮದಿಂದ ಉನ್ನತ ಶಿಕ್ಷಣ ಓದಿ ನ್ಯಾಯಮೂರ್ತಿಗಳಾದರು. ನಾಯಕತ್ವ ಗುಣಗಳಿಂದ ನಾನು ರಾಜಕೀಯದಲ್ಲಿ ಬೆಳೆದೆ ಹಾಗೂ ತಮ್ಮ ಮನೆತನದ ಚಿತ್ರಕಲೆ ಮುಂದುವರೆಸಿಕೊಂಡು ವೆಂಕಟೇಶ ಯಶಸ್ವಿ ಚಿತ್ರಕಲಾವಿದರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೂರು ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ ಎಂದರು.ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಮಾತನಾಡಿ, ಮನುಷ್ಯನನ್ನು ಎತ್ತರ ರಂಗಕ್ಕೆ ಕೊಂಡೊಯ್ಯಲು ಲಲಿತಕಲೆ ಅತ್ಯವಶ್ಯಕವಾಗಿದೆ. ಚಿತ್ರಕಲೆಯು ಬಹಳಷ್ಟು ಪುರಾತನ ಕಾಲದ್ದಾಗಿದೆ. ಶಿಲಾಯುಗದ ಸಂದರ್ಭದಲ್ಲಿ ನಮ್ಮ ಪೂರ್ವಜರು ಗುಹೆಗಳಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಗುಹೆಗಳಲ್ಲಿ ಮನುಷ್ಯ, ಪ್ರಾಣಿ ಹಾಗೂ ಇತರೆ ಚಿತ್ರ ಬಿಡಿಸುತ್ತಿದ್ದರು. ಕಲೆಗಳು ಮನುಷ್ಯನ ವ್ಯಕ್ತಿತ್ವ ರೂಪಿಸಲು ಅನುಕೂಲವಾಗುತ್ತವೆ ಎಂದರು.ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಲಲಿತಕಲಾ ಅಕಾಡೆಮಿಯಿಂದ ಕಳೆದ 8 ತಿಂಗಳಲ್ಲಿ 24 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿತ್ರಕಲಾವಿದರ ಸಮ್ಮೇಳನ ಹಮ್ಮಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಶಾಲಾ ಮಕ್ಕಳ ಕಲಾ ಶಿಬಿರವು ನಡೆಯಿತು. ಚಿತ್ರಕಲಾವಿದರು, ಚಿತ್ರಕಲಾ ಶಿಕ್ಷಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.