ಕನ್ನಡಪ್ರಭ ವಾರ್ತೆ ಕುಶಾಲನಗರ
ಜಲಾಶಯದಿಂದ 2,000 ಕ್ಯುಸೆಕ್ ಪ್ರಮಾಣದ ನೀರನ್ನು ಹರಿಸಿ ಎರಡು ಟರ್ಬೈನ್ ಗಳ ಮೂಲಕ 9 ಮೆಗಾ ವ್ಯಾಟ್ ಮತ್ತು ಎರಡನೇ ಘಟಕದಲ್ಲಿ 6 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಘಟಕದ ಹಿರಿಯ ಪ್ರಧಾನ ವ್ಯವಸ್ಥಾಪಕ ಶಿವಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಈ ಸಾಲಿನಲ್ಲಿ 24 ಮಿಲಿಯನ್ ಯೂನಿಟ್ ಪ್ರಮಾಣದ ವಿದ್ಯುತ್ ಉತ್ಪಾದನಾ ಗುರಿ ಹೊಂದಲಾಗಿದೆ ಎಂದು ತಿಳಿಸಿರುವ ಅವರು ಪ್ರಸಕ್ತ ಘಟಕದಲ್ಲಿ ಕೆಲವು ಯಂತ್ರೋಪಕರಣಗಳ ನಿರ್ವಹಣೆ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಹಾರಂಗಿ ಅಣೆಕಟ್ಟು ನೀರು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು ಈ ಬಾರಿ ಮಾತ್ರ ಪ್ರತಿ ಬಾರಿಗಿಂತ ಒಂದು ತಿಂಗಳು ಮುಂಚಿತವಾಗಿ ಜಲಾಶಯದ ನೀರು ಲಭ್ಯವಾಗಿದ್ದು ಘಟಕ ಉತ್ಪಾದನಾ ಕಾರ್ಯ ಆರಂಭಿಸಿದೆ. ಹಾರಂಗಿ ಜಲಾನಯನ ಪ್ರದೇಶದ ವ್ಯಾಪ್ತಿಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.ಹೆಚ್ಚುವರಿ ನೀರನ್ನು ವಿದ್ಯುತ್ ಉತ್ಪಾದನೆ ಘಟಕ ಮತ್ತು ಅಣೆಕಟ್ಟಿನ ಮುಖ್ಯ ಗೇಟ್ ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.