ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜಿಲ್ಲೆಯ ಬಡ ಕೂಲಿ ಕಾರ್ಮಿಕರಿಗೆ ಶೀಘ್ರ ನಿವೇಶನ ನೀಡಬೇಕು ಹಾಗೂ ವನ್ಯಜೀವಿ ದಾಳಿ ತಡೆಗೆ ಅರಣ್ಯ ಇಲಾಖೆ ಶಾಶ್ವತ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಜೂ. 13 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.ಈ ಕುರಿತು ಯೂನಿಯನ್‍ನ ಜಿಲ್ಲಾಧ್ಯಕ್ಷರಾದ ಎಚ್.ಎಂ.ಸೋಮಪ್ಪ ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
13ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಕಕ್ಕೆ ಹೊಳೆ ಜಂಕ್ಷನ್ ಬಳಿಯಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಜೇಸಿ ವೇದಿಕೆಯಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಲಾಗುವುದು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅಹವಾಲನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.ಕಳೆದ ಅನೇಕ ವರ್ಷಗಳಿಂದ ಲೈನ್‍ಮನೆ ಮತ್ತು ಬಾಡಿಗೆ ಮನೆಯಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಬಡ ಕೂಲಿ ಕಾರ್ಮಿಕ ವರ್ಗಕ್ಕೆ ಸರ್ಕಾರ ಶೀಘ್ರ ನಿವೇಶನ ಅಥವಾ ವಸತಿ ಸೌಲಭ್ಯ ಕಲ್ಪಿಸಬೇಕು. ಇದುವರೆಗೂ ಯಾವುದೇ ಸರ್ಕಾರಗಳು ಬಡವರ ಕೂಗಿಗೆ ಸ್ಪಂದಿಸಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇದ್ದರೂ ಅದು ಉಳ್ಳವರ ಪಾಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಧಿಕಾರ ನಡೆಸಿದ್ದ ಶಾಸಕರು ಬಡವರಿಗೆ ನಿವೇಶನ ಕಲ್ಪಿಸಲು ಮುಂದಾಗಿಲ್ಲ. ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಶಾಸಕರು ಸ್ಪಂದಿಸುತ್ತಾರೆಂಬ ಭರವಸೆ ಇದೆ. ನಮ್ಮ ವಿಶ್ವಾಸ ಸುಳ್ಳಾದರೆ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾರ್ಮಿಕ ವರ್ಗ ತಕ್ಕ ಪಾಠ ಕಲಿಸಲು ಮುಂದಾಗಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಕಾಡಾನೆ ಹಾಗೂ ಹುಲಿಯ ಹಾವಳಿ ಹೆಚ್ಚುತ್ತಿದ್ದು ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಗಣಿಸುತ್ತಿಲ್ಲ. ಅರಣ್ಯ ಇಲಾಖೆ ಪರಿಹಾರದ ಚೆಕ್ ನೀಡಿ ಕೈ ತೊಳೆದುಕೊಳ್ಳತ್ತಿದೆಯೇ ಹೊರತು ಶಾಶ್ವತ ಪರಿಹಾರದ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಆನೆ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು 2023ರಲ್ಲಿ ಕೊಡಗಿಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆಯ ಮಾತುಗಳನ್ನಾಡಿದ್ದರು. ಆದರೆ, ಇದೂವರೆಗೆ ಭರವಸೆ ಈಡೇರಿಲ್ಲ. ಕಾಡಾನೆ ಹಾವಳಿಯ ನೈಜತೆಯನ್ನು ಅಧ್ಯಯನ ಮಾಡಬೇಕು. ಶಾಶ್ವತವಾದ ಯೋಜನೆಯನ್ನು ರೂಪಿಸಬೇಕು ಎಂದರು.ಪ್ರತಿಭಟನೆಯಲ್ಲಿ ಜಿಲ್ಲೆಯ ತೋಟದ ಮಾಲೀಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಬಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕರಾದ ಸುಂದರ ಹಾಗೂ ಶೇಷಪ್ಪ, ಕಾರ್ಯದರ್ಶಿ ಕೆ.ಎಂ.ಮಂಜುನಾಥ್ ಮತ್ತು ಸಿಪಿಐ ತಾಲೂಕು ಕಾರ್ಯದರ್ಶಿ ಶಬಾನಾ ಇದ್ದರು.