ಕ್ರೀಡೆಯಿಂದ ಒಗ್ಗಟ್ಟು, ಧೈರ್ಯ: ವಿಜಯಕುಮಾರ್

KannadaprabhaNewsNetwork |  
Published : May 10, 2025, 01:13 AM IST
ಸುಂಟಿಕೊಪ್ಪ: ಕ್ರೈಸ್ತ ಸಮಾಜದ ಕ್ರಿಕೆಟ್‌ ಟೂರ್ನಿ | Kannada Prabha

ಸಾರಾಂಶ

ಕೊಡಗು ಜಿಲ್ಲಾ ರೋಮನ್ ಕೆಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ೧೪ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಿತು.

ಸುಂಟಿಕೊಪ್ಪ: ಕ್ರೈಸ್ತ ಸಮಾಜದ ಕ್ರಿಕೆಟ್‌ ಟೂರ್ನಿ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕ್ರೀಡೆಯ ಮೂಲಕ ಕ್ರೈಸ್ತರನ್ನು ಒಂದೆಡೆ ಸೇರಿಸುವ ಕೆಲಸ ನಡೆದಿದೆ. ಇದರಿಂದಾಗಿ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ಧೈರ್ಯ ಬಂದಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್ ಹೇಳಿದರು.

ಕೊಡಗು ಜಿಲ್ಲಾ ರೋಮನ್ ಕೆಥೋಲಿಕ್ ಅಸೋಸಿಯೇಷನ್ ಮತ್ತು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಆಶ್ರಯದಲ್ಲಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೧೪ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯ ಮೂಲಕ ನಾವೆಲ್ಲರೂ ಒಂದೆಡೆ ಸೇರಿ ಒಂದೇ ಮನೆಯ ಮಕ್ಕಳಂತೆ ಸೌಹಾರ್ದತೆ, ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳಲು ಇದು ಸುಂದರ ವೇದಿಕೆಯಾಗಿದೆ. ಕ್ರೀಡೆ ನಮ್ಮಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಒಂದೆಡೆ ಸೇರಿದಾಗ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ, ಭಾಂದವ್ಯ ಇನ್ನಷ್ಟು ಬೆಸೆದುಕೊಳ್ಳುತ್ತದೆ ಎಂದರು.

ಸುಂಟಿಕೊಪ್ಪ ಕಾಂಗ್ರೆಸ್ ಮುಖಂಡ ಪಿ.ಎಂ.ಲತೀಫ್ ಮಾತನಾಡಿ, ಎಲ್ಲ ಸಮುದಾಯದವರು ತಮ್ಮ ತಮ್ಮ ಸಂಘಟನೆಗಾಗಿ ಈ ರೀತಿಯ ಕ್ರೀಡಾಕೂಟಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಹಾಗೆಯೇ ಕ್ರೈಸ್ತ ಜನಾಂಗದವರು ಸುಂಟಿಕೊಪ್ಪದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂಘಟನೆಗೆ ಕೊಟ್ಟ ಕೊಡುಗೆಯಾಗಿದೆ. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಿಡುವು ಮಾಡಿಕೊಂಡು ಈ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ತಾವೆಲ್ಲರೂ ಭಾಗವಹಿಸಿ ಸೌಹಾರ್ದಯುತವಾದ ಮತ್ತು ಕ್ರೀಡಾ ಮನೋಭಾವನೆಗಾಗಿ ಸೇರಬೇಕು ಎಂದರಲ್ಲದೇ, ಅಂತಿಮ ಪಂದ್ಯದಲ್ಲಿ ಜಯಗಳಿಸುವ ತಂಡಕ್ಕೆ ೫೦೦೦ ರು. ನಗದು ಬಹುಮಾನವನ್ನು ಘೋಷಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್ .ಸುನಿಲ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಇಂತಹ ಸಮುದಾಯಗಳು ಆಯೋಜಿಸಿದ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಅಲ್ಲದೇ ಪಹಲ್ಗಾಂನಲ್ಲಿ ನಡೆದ ೨೬ ಮಂದಿಯ ಹತ್ಯಾಕಾಂಡವನ್ನು ಖಂಡಿಸಿ ಭಾರತೀಯ ಯೋಧರೊಂದಿಗೆ ನಾವೆಲ್ಲರೂ ಇದ್ದು, ಅವರಿಗೆ ಧೈರ್ಯ, ಸ್ಥೈರ್ಯವನ್ನು ತುಂಬಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರಾಡ್ರಿಗಸ್ ಮಾತನಾಡಿ, ಒಂದು ಸಂಘವನ್ನು ಕಟ್ಟುವುದು ಕಷ್ಟಸಾಧ್ಯ. ಅದರಲ್ಲೂ ಕೊಡಗಿನಲ್ಲಿ ೧೪ ವರ್ಷಗಳಿಂದ ಬಹಳ ಪ್ರಬಲವಾಗಿ ಮುಂದುವರಿಸಿಕೊಂಡು ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನದೊಂದಿಗೆ ಕ್ರೀಡಾಕೂಟವನ್ನು ಮಾಡುತ್ತಿರುವುದು ಸಂತೋಷ ತಂದಿದೆ. ಇದರೊಂದಿಗೆ ಕ್ರೈಸ್ತ ಯುವಕ ಯುವತಿಯರು ೧೮ ವರ್ಷ ತುಂಬಿದ ನಂತರದಲ್ಲಿ ರಾಜಕೀಯ ಅಥವಾ ಸರ್ಕಾರಿ ಹುದ್ದೆಯಲ್ಲಿ ಸೇರ್ಪಡೆಗೊಂಡಲ್ಲಿ ಮಾತ್ರ ತಮ್ಮನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯ. ಹಾಗಾಗಿ ಹೆಚ್ಚಿನ ಕ್ರೈಸ್ತ ಯುವಕರು ಕೇವಲ ನಾಮಕಾವಸ್ಥೆಗೆ ಮಾತ್ರ ಶಿಕ್ಷಣ ಪಡೆಯದೆ ಎಲ್ಲರೂ ಉನ್ನತ ಹುದ್ದೆಗಳಲ್ಲಿ ಸೇರುವ ಪಣ ತೊಡಬೇಕು. ರಾಜಕೀಯದಲ್ಲಿ ಒಬ್ಬ ಕಾರ್ಯಕರ್ತನಾಗಿ ತಾವು ಗುರುತಿಸಿಕೊಳ್ಳಬೇಕೆಂದು ಯುವಕರಲ್ಲಿ ಮನವಿ ಮಾಡಿಕೊಂಡರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೆಯೇ ಅತಿ ಹೆಚ್ಚು ಅಂಕಗಳಿಸಿದ ಕ್ರೈಸ್ತ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲ ರೋಮನ್ ಕೆಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು. ವೇದಿಕೆಯಲ್ಲಿ ಚೆಟ್ಟಳ್ಳಿ ಚರ್ಚಿನ ಧರ್ಮಗುರು ಜೆರಾಲ್ಡ್ ಸಿಕ್ವೇರಾ, ಸುಂಟಿಕೊಪ್ಪ ಸಿಎಸ್‌ಐ ಚರ್ಚಿನ ಧರ್ಮಗುರು ಮಧು ಕಿರಣ್, ಸುಂಟಿಕೊಪ್ಪ ಸಂತ ಅಂತೋಣಿ ಸುಪೀರಿಯರ್ ಜೋವಿಟಾ, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ಗಿಲ್ಬರ್ಟ್ ಡಿಸಿಲ್ವಾ, ಸೋಮವಾರಪೇಟೆ ಓಎಲ್ ವಿ ಚರ್ಚಿನ ಧರ್ಮಗುರುಗಳಾದ ಅವಿನಾಶ್ , ಜಿಲ್ಲಾ ಸಂಘದ ಗೌರವ್ಯಾಸ ಜೋಕಿಂ ವಾಸ್, ಕಾರ್ಯಧ್ಯಕ್ಷ ಲಾರೆನ್ಸ್, ಕಾರ್ಯದರ್ಶಿ ಜೂಡಿ ಡೇವಿಡ್ ವಾಸ್, ಖಜಾಂಚಿ ಜೇಮ್ಸ್ ಡಿಸೋಜಾ,ಪಿ.ಎಫ್.ಸಭಾಸ್ಟೀನ್, ಎಂ.ಬಿ.ವಿನ್ಸೆಂಟ್, ಜಿಲ್ಲಾ ಸಮಿತಿ, ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಂತರ ನಡೆದ ಜಿಲ್ಲಾ ಮಟ್ಟದ ಕೆಥೋಲಿಕ್ ಕ್ರಿಕೆಟ್ ಟೂರ್ನಿಗೆ ಟಿಂಬರ್ ವ್ಯಾಪಾರಿಹಾಗೂ ಸಿಎಸ್‌ಐ ದೇವಾಲಯದ ವಿಲಿಯಂ ಚಾಲನೆ ನೀಡಿದರು.

ಈ ಕ್ರೀಡಾಕೂಟದಲ್ಲ ಕೊಡಗು ಜಿಲ್ಲೆಯ ೨೫ ಧರ್ಮ ಕೇಂದ್ರಗಳ ೨೨ ತಂಡಗಳು ಭಾಗವಹಿಸಿದ್ದವು. ಕ್ರೀಡಾಕೂಟವು ಭಾನುವಾರ ಸಂಜೆ ಮುಕ್ತಾಯಗೊಳ್ಳಲಿದೆ.

ಮೊದಲ ದಿನದ ಫಲಿತಾಂಶ:

ಶುಕ್ರವಾರ ಅಬ್ಬೂರುಕಟ್ಟೆ ಮತ್ತು ವಿರಾಜಪೇಟೆ ಬಿ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯವನ್ನು ವಿರಾಜಪೇಟೆ ತಂಡ ೫ ರನ್ ಗಳಿಂದ ಗೆದ್ದುಕೊಂಡಿತು.ಎರಡನೇ ಪಂದ್ಯದಲ್ಲಿ ಪಾಲಿಬೆಟ್ಟ ಮತ್ತು ಹಟ್ಟಿಹೊಳೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹಟ್ಟಿಹೊಳೆ ಪವಿತ್ರಕುಟುಂಬ ದೇವಾಲಯ ಜಯಗಳಿಸಿತು.೩ನೇ ಪಂದ್ಯಾಳಿಯು ಮಡಿಕೇರಿ ಸಂತ ಮೈಕಲರ ದೇವಾಲಯದ ಬಿ ತಂಡ ಹಾಗೂ ಆತಿಥೇಯ ಸಂತ ಅಂತೋಣಿ ದೇವಾಲಯದ ಬಿ ತಂಡಗಳ ನಡುವೆ ನಡೆದು ಸಂತ ಮೈಕಲರ ಬಿ ತಂಡವು ಗೆದ್ದುಕೊಂಡಿತು.೪ನೇ ಪಂದ್ಯಾವಳಿಯು ಪೊನ್ನಂಪೇಟೆ ಸಂತ ಅಂತೋಣಿ ದೇವಾಲಯದ ತಂಡ ಹಾಗೂ ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯದ ತಂಡಗಳ ನಡುವೆ ನಡೆದು ಪೊನ್ನಂಪೇಟೆ ತಂಡವು ಜಯಗಳಿಸಿಕೊಂಡಿತು.

೫ನೇ ಪಂದ್ಯಾವಳಿಯು ಗೋಪಾಲಪೂರದ ಸಂತ ಅಂತೋಣಿ ದೇವಾಲಯದ ತಂಡ ಹಾಗೂ ಸೋಮವಾರಪೇಟೆ ಓಎಲ್‌ವಿ ತಂಡಗಳ ನಡುವೆ ನಡೆದು ಗೋಪಾಲಪುರ ತಂಡವು ಗೆದ್ದುಕೊಂಡಿತು. ಪಾಲಿಬೆಟ್ಟ ದೇವಾಲಯದ ತಂಡ ಅತಿಥೇಯ ಸಂತ ಅಂತೋಣಿ ದೇವಾಲಯದ ಎ ತಂಡಗಳ ನಡುವೆ ನಡೆದು ಪಾಲಿಬೆಟ್ಟ ತಂಡವು ಗೆಲುವು ಸಾಧಿಸುವುದರೊಂದಿಗೆ ಮುಂದಿನ ಸುತ್ತಿಗೆ ಆರ್ಹತೆಯನ್ನು ಪಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ