ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ

KannadaprabhaNewsNetwork |  
Published : Aug 17, 2026, 01:45 AM IST
16ಎಚ್ಎಸ್ಎನ್4 :  | Kannada Prabha

ಸಾರಾಂಶ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಜೊತೆಗೆ, ಇತಿಹಾಸದಲ್ಲಿ ಹೆಚ್ಚು ಪರಿಚಿತರಾಗದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನೂ ಸ್ಮರಿಸಬೇಕು ಎಂದರು. ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಸಮೃದ್ಧ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಭೂತಕಾಲದ ಬಗ್ಗೆ ಹೆಮ್ಮೆ, ವರ್ತಮಾನದಲ್ಲಿ ಜವಾಬ್ದಾರಿ ಮತ್ತು ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡು ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. “ಒಗ್ಗಟ್ಟಾಗಿ ಬಾಳೋಣ, ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಭಾರತವು ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿಗಳ ಭಿನ್ನತೆಯ ನಡುವೆಯೂ ‘ವಿವಿಧತೆಯಲ್ಲಿ ಏಕತೆ’ ಸಾರುವ ಅಪೂರ್ವ ರಾಷ್ಟ್ರವಾಗಿದೆ. ನಾವು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಾಗಿದ್ದರೂ ಮೊದಲು ಭಾರತೀಯರು ಎಂಬ ಭಾವನೆ ನಮ್ಮಲ್ಲಿರಬೇಕು ಎಂದು ವಿಜಯಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಕರೆ ನೀಡಿದರು.ನಗರದ ವಿಜಯಶಾಲೆಯ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಾ, ದೇವರು, ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ದ್ವೇಷ ಬೆಳೆಸುವುದು ಹಾಗೂ ಪರಸ್ಪರ ಜಗಳವಾಡುವುದು ಸಮಾಜದ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುತ್ತದೆ. ವಿದ್ಯಾರ್ಥಿಗಳು ಇಂತಹ ಅಸಾಮಾಜಿಕ ಚಟುವಟಿಕೆಗಳಿಗೆ ಪ್ರಭಾವಿತರಾಗದೆ, ಸಹೋದರತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೂ ಎಚ್ಚರಿಕೆ ಅಗತ್ಯವಾಗಿದೆ. ಮೊಬೈಲ್‌ನಲ್ಲಿ ದೊರೆಯುವ ಯಾವುದೇ ಸಂದೇಶ, ವಿಡಿಯೋ ಅಥವಾ ಪೋಸ್ಟರ್‌ ಅನ್ನು ಪರಿಶೀಲಿಸದೆ ತಕ್ಷಣವೇ ಹಂಚಿಕೊಳ್ಳಬಾರದು. ‘ನಾನು ಹಂಚಿಕೊಳ್ಳುತ್ತಿರುವ ಮಾಹಿತಿಯಿಂದ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಹೆಚ್ಚುತ್ತದೆಯೇ ಅಥವಾ ಹಾಳಾಗುತ್ತದೆಯೇ?’ ಎಂದು ಯೋಚಿಸಿ ನಂತರವೇ ಮುಂದುವರಿಯಬೇಕು ಎಂದು ಸಲಹೆ ನೀಡಿದರು.ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ಜೊತೆಗೆ, ಇತಿಹಾಸದಲ್ಲಿ ಹೆಚ್ಚು ಪರಿಚಿತರಾಗದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನೂ ಸ್ಮರಿಸಬೇಕು ಎಂದರು. ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ಸಮೃದ್ಧ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಭೂತಕಾಲದ ಬಗ್ಗೆ ಹೆಮ್ಮೆ, ವರ್ತಮಾನದಲ್ಲಿ ಜವಾಬ್ದಾರಿ ಮತ್ತು ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡು ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. “ಒಗ್ಗಟ್ಟಾಗಿ ಬಾಳೋಣ, ದೇಶದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷರಾದ ವೈ ಎನ್ ಸುಬ್ಬಸ್ವಾಮಿಯವರು ಮಾತನಾಡುತ್ತಾ, ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತ ದೇಶವು ಆಹಾರ, ಆರೋಗ್ಯ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಆದರೆ ಇಂದು ಭಾರತವು ಆರೋಗ್ಯ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ ಸ್ವಾವಲಂಬನೆಯನ್ನು ಸಾಧಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ ಸೇರಿದಂತೆ ಅನೇಕ ವೀರ ಮಹಿಳೆಯರು ಮತ್ತು ಮಹನೀಯರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಅವರ ತ್ಯಾಗ ಮತ್ತು ದೇಶಪ್ರೇಮವನ್ನು ಇಂದಿನ ಪೀಳಿಗೆ ಆದರ್ಶವಾಗಿಸಿಕೊಳ್ಳಬೇಕು. ದೇಶದ ಗಡಿಗಳನ್ನು ಕಾಯುವ ಸೈನಿಕರು ಕೇವಲ ಗಡಿ ರಕ್ಷಣೆಯಲ್ಲದೆ ದೇಶದ ಆಂತರಿಕ ಸಮಸ್ಯೆಗಳು ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನರ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಅದೇ ರೀತಿ ರೈತರು ದೇಶದ ಜನತೆಗೆ ಆಹಾರವನ್ನು ಒದಗಿಸುವುದರ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ಮತ್ತು ರೈತರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹತ್ವದ ಕೊಡುಗೆ ನೀಡಿದ ಮಾತಂಗಿನಿ ಹಜ್ರಾ, ಉಷಾ ಮೆಹ್ತಾ, ತಿರೋಟ್ ಸಿಂಗ್, ರಾಣಿ ಅಬ್ಬಕ್ಕ, ಪೊಟ್ಟಿ ಶ್ರೀರಾಮುಲು, ಲಕ್ಷ್ಮಿ ಸೆಹಗಲ್, ಕನೈಲಾಲ್ ದತ್ತ, ಸೇನಾಪತಿ ಬಾಪಟ್, ವೀರವನಿತೆ ಕುಯಿಲಿ ಮೊದಲಾದ ಮಹನೀಯರನ್ನು 9ನೇ ತರಗತಿಯ ಒಟ್ಟು 115 ವಿದ್ಯಾರ್ಥಿಗಳು ರೂಪಕದ ಮೂಲಕ ಪರಿಚಯಿಸಿದರು. ಇಂದಿನ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಮಹತ್ವವನ್ನು ಅರಿತು, ದೇಶದ ಪ್ರಗತಿ ಮತ್ತು ಏಕತೆಗಾಗಿ ಜವಾಬ್ದಾರಿಯುತ ನಾಗರಿಕರಾಗಿ ಮುನ್ನಡೆಯಬೇಕೆಂಬ ಸಂದೇಶವನ್ನು ಈ ರೂಪಕವು ಮನಮುಟ್ಟುವಂತೆ ಬಿಂಬಿಸಿತು. ಸಂಪೂರ್ಣ ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟರು.ಏಳನೇ ತರಗತಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಂದೀಶ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ
ಏತ ನೀರಾವರಿಗೆ ಶಾಸಕ ಮಂಜು ಚಾಲನೆ