ರಾಣಿಬೆನ್ನೂರು: 1971ರ ಇಂಡೋ- ಪಾಕ್ ಯುದ್ಧದ ವಿಜಯವು ನಮ್ಮ ಸೈನಿಕರ ಸೇವಾ ಮನೋಭಾವ ಮತ್ತು ಧೈರ್ಯ ಕುರಿತು ಯುವಜನರಿಗೆ ಪ್ರೇರಣೆಯಂತಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.ನಗರದ ಎಪಿಎಂಸಿ ದೇವಸ್ಥಾನ ಬಳಿ ಶುಕ್ರವಾರ 1971ರ ಪಾಕಿಸ್ತಾನ ಯುದ್ಧದಲ್ಲಿ ಬಳಸಿದ ಶಿವಶಕ್ತಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಅಂದಿನ ಯುದ್ಧ ಭಾರತವು ಯಾವುದಕ್ಕೂ ಕಡಿಮೆಯಿಲ್ಲ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿತು. ಅಂದಿನ ಯುದ್ಧದಲ್ಲಿ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಪ್ರದರ್ಶಿಸಿದ ಧೈರ್ಯ ಸ್ಮರಣಿಯವಾಗಿದೆ. ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು. ಆಗ ಬಳಕೆಯಾಗಿದ್ದ ಟ್ಯಾಂಕರ್ ಇಲ್ಲಿಗೆ ತಂದು ಇಲ್ಲಿನ ಜನರಿಗೆ ಪ್ರದರ್ಶನಕ್ಕೆ ಇಟ್ಟಿರುವ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಕಾರ್ಯ ಶ್ಲಾಘನೀಯ. ಭಾರತ ದೇಶ ಬಲಿಷ್ಠವಾಗಲು ವಿದ್ಯಾರ್ಥಿಶಕ್ತಿ ಪ್ರಬಲವಾಗಿರಬೇಕು ಎಂದರು.ವಿಶ್ವದ ಇತರ ದೇಶಗಳನ್ನು ನೋಡಿದಾಗ ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ಶಕ್ತಿಯಾಗಿದೆ. ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಧರ್ಮ ಪಾಲಿಸಿದರೂ ಮನೆಯಿಂದ ಹೊರಗಡೆ ಬಂದಾಗ ನಾವೆಲ್ಲರೂ ಭಾರತೀಯರೆಂಬ ಹೆಮ್ಮೆ ಮತ್ತು ಒಗ್ಗಟ್ಟಿನ ವಿಚಾರವನ್ನು ಅಳವಡಿಸಿಕೊಳ್ಳಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ದೇಶವಾಸಿಗಳು ನೆಮ್ಮದಿಯಿಂದ ಓಡಾಡುವಂತಾಗಲು ಬಿ.ಆರ್. ಅಂಬೇಡ್ಕರ್ ಬರೆದ ನಮ್ಮ ದೇಶದ ಸಂವಿಧಾನವಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಸಂವಿಧಾನ ಬದ್ಧವಾಗಿ ಆಡಳಿತ ನಡೆಸಬೇಕು ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. ಇಲ್ಲಿನ ಎಪಿಎಂಸಿ ಬಳಿಯಿಂದ ಹೊರಟ ಮೆರವಣಿಗೆಯು ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್ ಮಾರ್ಗವಾಗಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನಗರಸಭಾ ಕ್ರೀಡಾಂಗಣಕ್ಕೆ ಬಂದು ತಲುಪಿತು.
ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವ ಆರ್. ಶಂಕರ್, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಶೇರುಖಾನ ಕಾಬೂಲಿ ಮೆರವಣಿಗೆಯಲ್ಲಿದ್ದರು.