ಸಾಂಸ್ಕೃತಿಕತೆಯಿಂದ ಏಕತೆ: ಸಂಸದ ಕಾಗೇರಿ

KannadaprabhaNewsNetwork |  
Published : Apr 27, 2026, 02:15 AM IST
ಫೋಟೋ : ೨೬ಕೆಎಂಟಿ_ಎಪಿಆರ್_ಕೆಪಿ೨ : ಹವ್ಯಕ ಸಭಾಭವನದಲ್ಲಿ ಸಾಧನಾ ಸೌರಭ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಪತ್ರಕರ್ತ ವಿಶ್ವೇಶ್ವರ ಭಟ್, ಶ್ರೀಕಾಂತ ಭಟ್, ರಾಮಾ ಜೋಯಿಸ್, ಅರುಣ ಹೆಗಡೆ, ಮೋಹನ ಹೆಗಡೆ ಇತರರು ಇದ್ದರು.  | Kannada Prabha

ಸಾರಾಂಶ

ನಾಡಿನ ಸಾಂಸ್ಕೃತಿಕ ವೈವಿಧ್ಯತೆ ನಮ್ಮನ್ನು ಇಂದಿಗೂ ವಿವಿಧತೆಯಲ್ಲಿ ಏಕತೆಯಿಂದ ಇರುವಂತೆ ಮಾಡಿವೆ. ಇತರ ಅಭಿವೃದ್ಧಿಯ ಜತೆಗೆ ಸಾಂಸ್ಕೃತಿಕ ಅಭಿವೃದ್ಧಿ ಸಹ ಆಗಬೇಕು.

ಸಾಂಸ್ಕೃತಿಕ ಅನುಸಂಧಾನ, ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಕುಮಟಾನಾಡಿನ ಸಾಂಸ್ಕೃತಿಕ ವೈವಿಧ್ಯತೆ ನಮ್ಮನ್ನು ಇಂದಿಗೂ ವಿವಿಧತೆಯಲ್ಲಿ ಏಕತೆಯಿಂದ ಇರುವಂತೆ ಮಾಡಿವೆ. ಇತರ ಅಭಿವೃದ್ಧಿಯ ಜತೆಗೆ ಸಾಂಸ್ಕೃತಿಕ ಅಭಿವೃದ್ಧಿ ಸಹ ಆಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಹವ್ಯಕ ಸಭಾಮಂಟಪದಲ್ಲಿ ಭಾನುವಾರ ಸೌರಭ ಸಂಸ್ಥೆಯ ೩೦ನೇ ವಾರ್ಷಿಕೋತ್ಸವ ಪ್ರಯುಕ್ತ ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸೌಲಭ್ಯಗಳ ಅಗತ್ಯತೆಗಳು ಎಂದೂ ಮುಗಿಯುವುದಿಲ್ಲ. ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿರಬೇಕು. ಜತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಸರ್ಕಾರದ ಮೇಲೆ ಇವುಗಳ ಅಗತ್ಯದ ಬಗ್ಗೆ ಅರಿವು ಮೂಡಿಸುವ ವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಡವಾಗಿಯೇ ಇರುತ್ತದೆ. ನಾಟಕ, ಯಕ್ಷಗಾನ, ಭರತನಾಟ್ಯ, ಸಂಗೀತ ಹಲವು ಕಲೆಗಳ ಮೂಲಕ ಜಿಲ್ಲೆ ಸಂಸ್ಕೃತಿ ಉಳಿಸಿಕೊಂಡು ಬಂದಿದೆ. ನಾವು ಭಾರತೀಯರಾಗಿ ಸನಾತನ ಧರ್ಮದ ವಾರಸುದಾರರಾಗಿ ನಮ್ಮ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಈ ಆಧುನಿಕತೆಯ ಭರಾಟೆಯಲ್ಲಿ ಉಳಿಸಿಕೊಳ್ಳಬೇಕಾಗಿದೆ. ನಮ್ಮ ಸಾಂಸ್ಕೃತಿಕ ಅಂಶಗಳಿಗೆ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು ಅವುಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವೈವಿಧ್ಯತೆಯಲ್ಲಿ ಏಕತೆ ಕಾಣುವ ದಿಸೆಯಲ್ಲಿ ಮುಂದುವರಿಯಲು ಸೌರಭ ಸಂಸ್ಥೆ ತನ್ನದೇ ಆದ ಪ್ರಭಾವವನ್ನು ಜನತೆಯಲ್ಲಿ ಮೂಡಿಸುತ್ತಿದೆ ಎಂದರು.ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ ಧರ್ಮದರ್ಶಿ ರಾಮಾ ನಾರಾಯಣ ಜೋಯಿಸ ಮಾತನಾಡಿ, ಅನುಭವ ಹಾಗೂ ಜ್ಞಾನದ ಸಂಗ್ರಹವಿದ್ದಾಗ ಮಾತ್ರ ಬುದ್ಧಿ-ಬರಹದ ಸಮನ್ವಯತೆಯಿಂದ ಉತ್ತಮ ಸಾಧನೆಗಳು, ಶ್ರೇಷ್ಠ ರಚನೆಗಳು ಹೊರಹೊಮ್ಮಲು ಸಾಧ್ಯ. ಪತ್ರಕರ್ತ ವಿಶ್ವೇಶ್ವರ ಭಟ್ಟರಲ್ಲಿ ಅಗಾಧ ಜ್ಞಾನ ಸಂಪನ್ನತೆಯಿದ್ದು ಮುಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ ಎಂದರು. ವಿಶ್ವೇಶ್ವರ ಭಟ್‌ ಅವರ ಸಾಹಿತ್ಯ ಪಥದ ಕುರಿತು ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ, ವಿಶ್ವೇಶ್ವರ ಭಟ್‌ ಅವರು ಪತ್ರಿಕೋದ್ಯಮದ ತಲೆಬರಹಗಳ ಹಣೆಬರಹಗಳನ್ನೇ ಬದಲಿಸಿದವರು. ಪತ್ರಿಕೋದ್ಯಮವನ್ನು ಒಂದೆರಡು ತಲೆಮಾರು ವಿಶೇಷ ದೃಷ್ಟಿಯಿಂದ ನೋಡುವಂತೆ ಮಾಡಿದವರು. ವಿಶ್ವವನ್ನು ವೇಗವಾಗಿ ಸುತ್ತಿ ಆ ಅನುಭವಗಳನ್ನು ವೇಗವಾಗಿ ಬರೆಯುವ ವಿಶ್ವಕೋಶದಂತಾಗಿದ್ದಾರೆ ಎಂದರು. ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿದರು. ಬಳಿಕ ಪಂ. ರಘುನಂದನ್ ಭಟ್, ಗುರುರಾಜ ಹೆಗಡೆ, ಸತೀಶ ಭಟ್ ಹೆಗ್ಗಾರ್ ತಂಡದಿಂದ ಭಕ್ತಿ-ಭಾವ-ಗಾನ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂಕಣಕಾರ ಕಿರಣ ಉಪಾಧ್ಯಾಯ, ಸಾಹಿತಿ ರಾಜು ಅಡ್ಕಳಿ, ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್, ಮೋಹನ ಹೆಗಡೆ ಹೆರವಟ್ಟಾ, ಪತ್ರಕರ್ತ ಮೋಹನ ನಂಜನಗೂಡು, ವಿನಾಯಕ ಹೆಗಡೆಕಟ್ಟೆ ಇನ್ನಿತರರು ಉಪಸ್ಥಿತರಿದ್ದರು. ಸೌರಭದ ಪ್ರಧಾನ ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿದರು. ನಿರ್ದೇಶಕ ಆನಂದ ಹೆಗಡೆ ಪರಿಚಯಿಸಿದರು. ಸೌರಭದ ಅಧ್ಯಕ್ಷ ಶ್ರೀಕಾಂತ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾಲನೆ
2024ರ ಕನಕಗಿರಿ ಉತ್ಸವದ ಸ್ಮರಣಿಕೆ, ಗಂಧದ ಹಾರಗಳಿಗೆ ಧೂಳು