ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆ ಹಳೇ ಬಸ್‌ನಿಲ್ದಾಣ, ಕೆ. ಆರ್. ವೃತ್ತ, ಮೈಸೂರು ರಸ್ತೆ ಮಾರ್ಗವಾಗಿ ಮಿನಿ ವಿಧಾನಸೌಧದ ಬಳಿ ಆಗಮಿಸಿ ಪ್ರತಿಭಟನೆ ನಡೆಸಿ ಧರ್ಮಸ್ಥಳದ ಹೆಸರಿಗೆ ಚ್ಯುತಿ ಉಂಟು ಮಾಡಲು ಯತ್ನಿಸುತ್ತಿರುವ ಎಲ್ಲಾ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಭಕ್ತರು ಸರ್ಕಾರವನ್ನು ಒತ್ತಾಯಿಸಿದರು.
ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಮಾತನಾಡಿ, ಕಳೆದ ೨೫-೩೦ ವರ್ಷಗಳಿಂದಲೂ ಧರ್ಮಸ್ಥಳದ ಪರಂಪರೆಯ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಹಿಂದೂಗಳ ದೇವಸ್ಥಾನದ ಮೇಲೆ ಅಪಪ್ರಚಾರ ನಡೆಸುವುದನ್ನು ಸಹಿಸುವುದಿಲ್ಲ. ಆ.೨೩ರಂದು ತಾಲೂಕಿನಿಂದ ಸಾವಿರಾರು ಧರ್ಮಸ್ಥಳ ಭಕ್ತರೊಡನೆ ಕ್ಷೇತ್ರಕ್ಕೆ ತೆರಳಿ ಕಾವಂತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತೇವೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ, ಹಿಂದೂ ಧಾರ್ಮಿಕ ಸ್ಥಳದ ಮೇಲೆ ನಡೆಸುವ ಷಡ್ಯಂತ್ರ ಇದಾಗಿದೆ ಎಂದು ಟೀಕಿಸಿ, ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಖಂಡನೀಯ, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶವ ಹೂತಿರುವುದಾಗಿ ಮುಸುಕುಧಾರಿ ದೂರುದಾರನ ಹೇಳಿಕೆಯಂತೆ ೧೩ನೇ ಗುರುತಿನ ಸ್ಥಳದಲ್ಲೂ ಉತ್ಪನನ ಪೂರ್ಣಗೊಂಡಿದೆ. ಆದರೆ ಯಾವುದೇ ಕಳೇಬರ ಅಥವಾ ಕುರುಹುಗಳು ಲಭಿಸಿಲ್ಲ. ಇದರಿಂದಾಗಿ ಹಿಂದೂಗಳ ಆರಾಧ್ಯ ಕ್ಷೇತ್ರವೊಂದಕ್ಕೆ ಕಳಂಕ ತರುವ ಇಂತಹ ಹುನ್ನಾರದ ಹಿಂದಿರುವ ಕೈಗಳಾವುವು ಎಂಬ ಆಕ್ರೋಶವೀಗ ಎಲ್ಲೆಡೆ ವ್ಯಕ್ತವಾಗತೊಡಗಿದೆ ಎಂದರು.ಪ್ರತಿಭಟನೆಯ ನೇತೃತ್ವವನ್ನು ಕತ್ತರಿಘಟ್ಟದ ಚಂದ್ರಶೇಖರ ಗುರೂಜಿ, ಹಿಂದೂ ಮುಖಂಡರಾದ ಗಜಾನನ ಮನೋಹರ್, ಹಡೇನಹಳ್ಳಿ ಲೋಕೇಶ್, ಗಿರೀಶ್ ನಿಂಬೇಹಳ್ಳಿ, ಯಶೋಧ ಜೈನ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿಆನಂದ್, ಬಿಜೆಪಿ ಮುಖಂಡ ಚಿದಾನಂದ್, ಸತ್ಯನಾರಾಯಣ್, ಆನಂದ್ ಕಾಳೇನಹಳ್ಳಿ, ಕೆರೆಬೀದಿ ಜಗದೀಶ್, ಭರತ್ ಗೌಡ, ಎಚ್. ಸಿ. ಶಂಕರಲಿಂಗೇಗೌಡ, ಸಿ. ಎನ್. ಅಶೋಕ್, ಮಂಜುಗುಂಡ ಶೆಟ್ಟಿಹಳ್ಳಿ, ಆನಂದ್, ಜಯರಾಂ ಮಾರೇನಹಳ್ಳಿ, ನವೀನ್ ಇಂಡಿಯನ್ ಕ್ರಿಕೇಟರ್ಸ್ಸ್ ಮತ್ತಿತರಿದ್ದರು.