ಶರಣು ಸೊಲಗಿಮುಂಡರಗಿ: ಬೀದಿದೀಪಗಳ ಸರಿಯಾದ ನಿರ್ವಹಣೆ ಇಲ್ಲದೇ ಮುಂಡರಗಿ ಪಟ್ಟಣದ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.ಜಿಲ್ಲೆಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪಟ್ಟಣಗಳಲ್ಲಿ ಮುಂಡರಗಿ ಮುಂದಿದೆ. ಅತಿ ಹೆಚ್ಚು ಕರ ವಸೂಲಾತಿಯಲ್ಲಿ ಮುಂಡರಗಿ ಪುರಸಭೆ ಮೊದಲ ಸ್ಥಾನದಲ್ಲಿದೆ. ಆದರೂ ಬೀಡಿದೀಪಗಳು ಉರಿಯುತ್ತಿಲ್ಲ. ಎಸ್.ಎಸ್. ಪಾಟೀಲ ನಗರದಿಂದ ಬ್ಯಾಲವಾಡಗಿ ವೃತ್ತದ ವರೆಗೆ ಇರುವ ರಸ್ತೆ ಡಿವೈಡರ್‌ನ ಪ್ರತಿ ಕಂಬಗಳಿಗೂ ಎರಡು ಬಲ್ಬ್‌ಗಳನ್ನು ಹಾಕಿದ್ದು, ಒಂದು ಉರಿದರೆ ಮತ್ತೊಂದು ಉರಿಯುವುದಿಲ್ಲ. ಉರಿದರೂ ಉತ್ತಮವಾಗಿ ಪ್ರಜ್ವಲಿಸಿ ಬೆಳಕು ನೀಡುವ ಬದಲು ಝೀರೋ ಬಲ್ಬ್ ನೀಡಿದಷ್ಟು ಬೆಳಕು ನೀಡುತ್ತವೆ. ಕೊಪ್ಪಳ ವೃತ್ತ, ಬೃಂದಾವನ ವೃತ್ತ, ಗಾಂಧಿ ವೃತ್ತ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಸಹ ಸರಿಯಾಗಿ ಬೆಳಕು ನೀಡುತ್ತಿಲ್ಲ. ಅವುಗಳೂ ಸರಿಯಾದ ನಿರ್ವಹಣೆ ಇಲ್ಲದೇ ಕೆಲವೆಡೆ ಒಂದು ಎರಡು, ಇನ್ನು ಕೆಲವೆಡೆ ಎರಡು ಮೂರು ಬಲ್ಬ್‌ಗಳು ಮಾತ್ರ ಉರಿಯುತ್ತಿದ್ದು, ಉಳಿದವು ದುರಸ್ತಿಯಲ್ಲಿವೆ. ಹೆಸರೂರು ರಸ್ತೆ ಆಶ್ರಯ ಕಾಲನಿಯಲ್ಲಿ ಸಾವಿರಾರು ಜನ ವಾಸಿಸುತ್ತಿದ್ದು, ನಿತ್ಯ ಸಂಜೆ ಪಟ್ಟಣದಿಂದ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ತೆರಳುವವರು ಕತ್ತಲೆಯಲ್ಲಿಯೇ ಹೋಗಬೇಕಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ನಿತ್ಯವೂ ಅನೇಕ ವ್ಯಾಪಾರಸ್ಥರು ಕಸಕಡ್ಡಿ, ಮುಸರಿ ತಂದು ಹಾಕುತ್ತಾರೆ. ಹೀಗಾಗಿ ಅವುಗಳನ್ನು ತಿನ್ನುವುದಕ್ಕಾಗಿ ಅಲ್ಲಿ ಬೀದಿನಾಯಿಗಳು ಬರುತ್ತಿದ್ದು, ಅವು ಅನೇಕ ಬಾರಿ ವಾಹನಗಳಿಗೆ ಬೆನ್ನಟ್ಟಿ ದಾಳಿ ಮಾಡಿವೆ. ಅಲ್ಲಿ ಯಾವುದೇ ರೀತಿಯ ವಿದ್ಯುತ್ ವ್ಯವಸ್ಥೆ ಇಲ್ಲ. ಹೆಸರೂರು ರಸ್ತೆಯಿಂದ ಆಶ್ರಯ ಕಾಲನಿಯವರೆಗೂ 3- 4 ಬೀದಿದೀಪಗಳಿದ್ದು, ಅವು ಸರಿಯಾಗಿ ಬೆಳಕು ನೀಡುತ್ತಿಲ್ಲ. ರಾಮೇನಹಳ್ಳಿ, ಶಿರೋಳ ಹೀಗೆ ಪುರಸಭೆ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ಸರಿಯಾಗಿ ಬೀದಿದೀಪಗಳು ಉರಿಯುತ್ತಿಲ್ಲ. ಈ ಕುರಿತು ಪುರಸಭೆ ಆಡಳಿತ ಮಂಡಳಿಯಾಗಲಿ, ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಜನತೆಗೆ ನ್ಯಾಯ ಕೊಡುವವರು ಯಾರು? ಎನ್ನುವುದು ಜನತೆಯ ಪ್ರಶ್ನೆಯಾಗಿದೆ.
ಪಟ್ಟಣದ ಹೊಸ ಎಪಿಎಂಸಿ ರಸ್ತೆಯಿಂದ ಬ್ಯಾಲವಾಡಗಿ ವೃತ್ತದವರೆಗೆ ರಸ್ತೆ ಡಿವೈಡರ್‌ಗೆ ಅಳವಡಿಸಿದ ವಿದ್ಯುತ್ ಕಂಬಗಳಿಗೆ ಹೊಸದಾಗಿ ಬಲ್ಬ್‌ಗಳನ್ನು ಹಾಕಿಸುವ ಕಾರ್ಯ ಪ್ರಾರಂಭವಾಗಿದೆ. ಅಲ್ಲದೇ ಹೆಸರೂರು ರಸ್ತೆ, ರಾಮೇನಹಳ್ಳಿ ರಸ್ತೆ, ಶಿರೋಳ ರಸ್ತೆ ಸೇರಿದಂತೆ ಎಲ್ಲೆಡೆ ಪರಿಶೀಲಿಸಿ ಅವಶ್ಯವಿರುವಲ್ಲಿ ಬೀದಿದೀಪ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ತಿಳಿಸಿದರು.