ರೋಣ: ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ಬರುವ ಅನುದಾನದಲ್ಲಿ ಕೆಲಸ ಮಾಡದೇ ಅನಗತ್ಯ ಖರ್ಚು ಹಾಕಲಾಗಿದೆ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗುವುದು ಎಂದು ಪುರಸಭೆ ಸದಸ್ಯ ಸಂತೋಷ ಕಡಿವಾಲ ಸೇರಿದಂತೆ ಸಭೆಯಲ್ಲಿದ್ದ ಕೆಲ ಸದಸ್ಯರು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ 14ನೇ ವರ್ಡಿನಲ್ಲಿ ಮೋಟಾರ್ ರಿಪೇರಿಗಾಗಿ ಖರ್ಚು ತೋರಿಸಿದ್ದಿರಿ, ಆದರೆ ಅಲ್ಲಿ ಯಾವುದೇ ರಿಪೇರಿ ಆಗಿಲ್ಲ. ಈ ಹಿಂದೇ ಮೋಟರ್ ಕೆಟ್ಟು ನಿಂತಾಗಲೂ ಸಹ ನಾವೇ ಸ್ವಂತ ಹಣ ಖರ್ಚು ಮಾಡಿ ರಿಪೇರಿ ಮಾಡಿಸಿದ್ದೇವೆ. ನೀವು ಮೋಟರ್ ರಿಪೇರಿ ಮಾಡದೇ ಖರ್ಚು ಯಾಕೆ ಹಾಕಿದ್ದಿರಿ ಎಂದು ಸದಸ್ಯೆ ವಿಜಯಲಕ್ಷ್ಮೀ ಕೊಟಗಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ, ಮೋಟರ್ ರಿಪೇರಿಗಾಗಿ ಪಂಪ್ ಹೌಸ್ ನಿಂದ ಹೊರ ತೆಗೆಯಲಾಗಿದ್ದು, ತಾಂತ್ರಿಕ ತೊಂದರೆ ಉಂಟಾಗಿದೆ. ಶೀಘ್ರದಲ್ಲಿಯೇ ರಿಪೇರಿ ಮಾಡಿಸುವುದಾಗಿ ಹೇಳಿದರು.ಸ್ವಾಗತ ಕಮಾನು ನಿರ್ಮಾಣ ಏಕಿಲ್ಲ: ನಾವು ಸದಸ್ಯರಾಗಿ ಆಯ್ಕೆಗೊಂಡಾಗಿನಿಂದ ನಿಮಗೆ ಪಟ್ಟಣದಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡುವಂತೆ ಹೇಳುತ್ತಾ ಬಂದಿದ್ದೇವೆ. ನಮ್ಮ ಅಧಿಕಾರ ಅವಧಿ ಮುಗಿಯುತ್ತಾ ಬಂದರೂ ಇದುವರೆಗೂ ಸ್ವಾಗತ ಕಮಾನು ನಿರ್ಮಾಣಗೊಂಡಿಲ್ಲ. ಪ್ರತಿ ಸಭೆಯಲ್ಲಿ ಠರಾವು ಮಾಡುತ್ತೀರಿ ಆದರೇ ಯೋಜನೆ ಮಾತ್ರ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ, ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲವೇ ಎಂದು ಸದಸ್ಯ ಸಂತೋಷ ಕಡಿವಾಲ ಆರೋಪಿಸುತ್ತಿದ್ದಂತೆ. ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು, ಕಮಾನ್ ನಿರ್ಮಾಣ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಬಾರಿ ಸ್ವಾಗತ ಕಮಾನು ನಿರ್ಮಾಣಕ್ಕೆ ಒತ್ತು ನೀಡಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೆವೆ ಎಂದು ಮುಖ್ಯಾಧಿಕಾರಿ ರಮೇಶ ಹೊಸಮನಿ ಸದಸ್ಯರಿಗೆ ಭರವಸೆ ನೀಡಿದರು.
ವಿವಿಧ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಬಳಕೆಯಾಗಿ ಉಳಿಕೆಯಾದ ಮೊತ್ತಕ್ಕೆ ನಿಯಮಾನುಸಾರ ತಯಾರಿಸುವ ಕುರಿತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ, ರೋಣ ತಾಲೂಕು ನೇಕಾರ ಕುರುಹಿನಶೆಟ್ಟಿ ಸಂಘ ಕಾನೂನು ಮಾಪನ ಶಾಸ್ತ್ರ ರೋಣ, ನೂಲಿನ ಚನ್ನಯ್ಯ ಸಮುದಾಯ ಇವರಿಗೆ ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತ ತಳ್ಳಿಕೇರಿ, ಸದಸ್ಯರಾದ ಮಿಥುನ್ ಜಿ. ಪಾಟೀಲ, ಮಲ್ಲಯ್ಯ ಗುರುಬಸಪ್ಪನಮಠ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ವಿದ್ಯಾ ದೊಡ್ಡಮನಿ, ಶಕುಂತಲಾ ದೇಶಣ್ಣವರ, ಚನ್ನಬಸಮ್ಮ ಹಿರೇಮಠ, ಸಂಗಪ್ಪ ಜಿಡ್ಡಿಬಾಗಿಲ, ಜಗದೀಶ ಹಿರೇಮಠ, ಆನಂದ ಚಂಗಳಿ, ಶಕುಂತಲಾ ದೇಶಣ್ಣವರ ಸೇರಿದಂತೆ ಮತ್ತಿತರರು ಇದ್ದರು.