ಎಚ್.ಡಿ. ದೇವೇಗೌಡರು ದೇಶ ಕಂಡ ಅಪ್ರತಿಮ ರೈತ ನಾಯಕ

KannadaprabhaNewsNetwork | Published : May 19, 2025 2:00 AM
JSS Old Age Home in Aravind Nagar, Mysore
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೇಶ ಕಂಡ ಅಪ್ರತಿಮ ರೈತ ನಾಯಕರು ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದರು.

ಅರವಿಂದ್ ನಗರದಲ್ಲಿರುವ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಮಾನಿ ಬಳಗ ಹಾಗೂ ಎಸ್. ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗವು ಎಚ್.ಡಿ. ದೇವೇಗೌಡರ 93ನೇ ಹುಟ್ಟು ಹಬ್ಬದ ಅಂಗವಾಗಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸೀರೆ, ಪಂಚೆ ಮತ್ತು ದಿನಸಿ ಸಾಮಗ್ರಿಗಳನ್ನು ಅವರು ಭಾನುವಾರ ವಿತರಿಸಿ ಮಾತನಾಡಿದರು.

ಹಾಸನ ಜಿಲ್ಲೆಯಿಂದ ಗೆದ್ದು ಕರ್ನಾಟಕ ರಾಜ್ಯದಿಂದ ಏಕ ಮಾತ್ರ ಪ್ರಧಾನಮಂತ್ರಿಯಾಗಿ ಆಡಳಿತ ಮಾಡಿದ ಎಚ್.ಡಿ. ದೇವೇಗೌಡ ಅವರ ಜನ್ಮ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ನೂರಾರು ವರ್ಷ ಆರೋಗ್ಯವಾಗಿ ಬಾಳಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.

ದೇವೇಗೌಡರ ಗರಡಿಯಲ್ಲಿ ಬೆಳೆದ ಸಾಕಷ್ಟು ಜನ ಮುಖ್ಯಮಂತ್ರಿಗಳಾಗಿ, ಸಚಿವರಾಗಿ, ಕೇಂದ್ರ ಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ದೇವೇಗೌಡರ ಆಶೀರ್ವಾದ ಇನ್ನೂ ನಮಗೆಲ್ಲರಿಗೂ ಅಗತ್ಯವಿದೆ. ದೇವೇಗೌಡರೇ ಒಂದು ಶಕ್ತಿ ಎಂದು ಅವರು ಹೇಳಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ದೇಶ ಕಂಡಂತಹ ಉತ್ತಮ ಪ್ರಧಾನಿಗಳಲ್ಲಿ ಎಚ್.ಡಿ. ದೇವೇಗೌಡರು ಒಬ್ಬರು. ಅವರು ರೈತಾಪಿ ಹಿನ್ನೆಲೆಯಿಂದ ಬಂದವರಾಗಿದ್ದು, ಕರ್ನಾಟಕದ ಸರ್ದಾರ್ ಪಟೇಲ್ ಎಂದೇ ಖ್ಯಾತಿ ಪಡೆದಿದ್ದರು ಎಂದರು.

ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಮುಖಂಡರಾದ ನಟರಾಜ್, ಛಾಯಾ, ಪಿಂಕಿ ಕುಮಾರಿ, ರಾಜೇಶ್ ಕುಮಾರ್, ವೀರಭದ್ರ ಸ್ವಾಮಿ, ಸುಬ್ರಮಣಿ, ರಮೇಶ್ ರಾಮಪ್ಪ, ಗಗನ್, ಶ್ರೀಧರ್, ಹರ್ಷ, ವೆಂಕಟೇಶ್, ಶ್ರೀಧರ್, ಅಕ್ಷಯ್, ಹರ್ಷಿತ್ ಮೊದಲಾದವರು ಇದ್ದರು.