ಕನ್ನಡಪ್ರಭ ವಾರ್ತೆ ಹಾಸನ
ಧರ್ಮಸ್ಥಳ ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಇಂತಹ ಸ್ಥಳದ ಮೇಲೆ ಕೆಟ್ಟ ಹೆಸರು ತರುವ ಕೆಲಸ ಆಗಬಾರದು. ಇದೀಗ ಅಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿವೆ ಎಂದು ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ನಗರದಲ್ಲಿ ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಈ ನಾಡಿಗೆ ಎಲ್ಲಾ ವರ್ಗದ ಜನರಿಗೂ ತನ್ನದೇ ಆದ ಕೊಡುಗೆ ನೀಡಿದ್ದಾರೆ. ತನಿಖೆ ಶಾಂತಿಯುತವಾಗಿ ನಡೆಯಲಿ. ದುರುದ್ದೇಶದ ತನಿಖೆ ನಡೆಯಬಾರದು. ಸಮಗ್ರ ತನಿಖೆ ಬಳಿಕ ಅತೀ ಜಾಗ್ರತೆಯಿಂದ ವರದಿ ಬಹಿರಂಗಪಡಿಸಿ ಸತ್ಯಾಸತ್ಯತೆ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಶಾಸಕರನ್ನು ಭಿಕ್ಷುಕರಂತೆ ಮಾಡಬೇಡಿ:ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಶಾಸಕರನ್ನ ಸಮನಾಗಿ ಪರಿಗಣಿಸಿ. ನೀಡುವ ಅನುದಾನದಲ್ಲಿ ತಾರತಮ್ಯ ಮಾಡಬಾರದು. ಪಕ್ಷಾತೀತವಾಗಿ ಸಮಾನ ಅನುದಾನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.ಎಲ್ಲಾ ಕ್ಷೇತ್ರದಲ್ಲಿಯೂ ಎಲ್ಲಾ ಪಕ್ಷದ ಕಾರ್ಯಕರ್ತರು ಮುಖಂಡರು, ಮತದಾರರು ಇದ್ದಾರೆ. ಆದರೆ ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ ಹಾಗೂ ಜೆಡಿಎಸ್, ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ನೀಡುವುದು ಸರಿಯಾದ ಬೆಳವಣಿಗೆ ಅಲ್ಲ ಎಂದರು.
ಈಗಾಗಲೇ ರಾಜ್ಯಾದ್ಯಂತ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಯಥೇಚ್ಛವಾಗಿ ಸುರಿದಿದ್ದು ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಸಾಕಷ್ಟು ಆಸ್ತಿಪಾಸ್ತಿ ಹಾನಿಗೀಡಾಗಿವೆ. ಆದ್ದರಿಂದ ಹೆಚ್ಚಿನ ಅನುದಾನದ ಅಗತ್ಯ ಇದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಎಲ್ಲಾ ಶಾಸಕರಿಗೂ ಸಮನಾಗಿ ಅನುದಾನ ಹಂಚಿಕೆ ಮಾಡುವ ಬಗ್ಗೆ ಸರಕಾರ ಯೋಚಿಸಬೇಕಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಅದರಂತೆ ಈ ಸರ್ಕಾರದ ಅವಧಿಯಲ್ಲಿ ಕೂಡ ಶಾಸಕರನ್ನು ಸಮಾನವಾಗಿ ಪರಿಗಣಿಸಬೇಕು. ಶಾಸಕರನ್ನು ಅನುದಾನಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಸರ್ಕಾರ ತರಬಾರದು ಎಂದು ತಿಳಿಸಿದರು.