ಚಿತ್ರಕಲಾ ಸ್ಪರ್ಧೆಗೆ ಅಭೂತಪೂರ್ವ ಯಶಸ್ಸು

KannadaprabhaNewsNetwork | Published : Nov 14, 2024 12:47 AM

ಸಾರಾಂಶ

6ನೇ ವರ್ಷದ ಈ ಚಿತ್ರಕಲಾ ಸ್ಪರ್ಧೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕಲಘಟಗಿ, ನವಲಗುಂದ, ಕುಂದಗೋಳ ವ್ಯಾಪ್ತಿಯ ಸಾವಿರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಇಂದಿರಾ ಗಾಜಿನ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದರು.

ಹುಬ್ಬಳ್ಳಿ:

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮಾರ್ಕ್ಸ್‌, ಗ್ರೇಡ್‌ಗಳ ಮಧ್ಯೆ ಕಳೆದು ಹೋಗುತ್ತಿರುವ ಮಕ್ಕಳ ಸುಪ್ತ ಪ್ರತಿಭೆ ಹಾಗೂ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ''''''''ಕನ್ನಡಪ್ರಭ'''''''' ಮತ್ತು ''''''''ಏಷ್ಯಾನೆಟ್‌ ಸುವರ್ಣ ನ್ಯೂಸ್‌'''''''' ಮಕ್ಕಳ ದಿನಾಚರಣೆ ಮುನ್ನಾದಿನ ಬುಧವಾರ ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯು ಅಭೂತಪೂರ್ವ ಯಶಸ್ವಿಯಾಗಿದೆ.

6ನೇ ವರ್ಷದ ಈ ಚಿತ್ರಕಲಾ ಸ್ಪರ್ಧೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕಲಘಟಗಿ, ನವಲಗುಂದ, ಕುಂದಗೋಳ ವ್ಯಾಪ್ತಿಯ ಸಾವಿರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಇಂದಿರಾ ಗಾಜಿನ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದರು. ಅತ್ಯಾಕರ್ಷಕ ಬಹುಮಾನ ಪಡೆಯುವ ನಿರೀಕ್ಷೆಯಿಂದ ಭಾಗವಹಿಸಿದ ಮಕ್ಕಳು ತಮ್ಮ ಕಲ್ಪನೆಯ ಚಿತ್ರಗಳ ಮೂಲಕ ತಮ್ಮ ಕಲಾ ಪ್ರತಿಭೆ ಮೆರೆದರು.

ಯಾವ ತರಗತಿಗೆ ಯಾವ ವಿಷಯ?

ಪ್ರತಿಯೊಂದು ತರಗತಿಗೆ ಒಂದೊಂದು ವಿಷಯ ನೀಡುವ ಮೂಲಕ ಮಕ್ಕಳಿಗೆ ಚಿತ್ರ ಬಿಡಿಸಲು ಎರಡು ಗಂಟೆ ಸಮಯ ನೀಡಲಾಗಿತ್ತು. 8ನೇ ತರಗತಿ ಮಕ್ಕಳಿಗೆ ನನ್ನ ಶಾಲೆ, 9ನೇ ತರಗತಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ 10ನೇ ತರಗತಿ ಮಕ್ಕಳಿಗೆ ನಮ್ಮೂರ ಜಾತ್ರೆ ವಿಷಯ ನೀಡಲಾಗಿತ್ತು. ಸ್ಪರ್ಧೆಗೆ ನೋಂದಣಿ ಮಾಡಿಸಿ ಭಾಗವಹಿಸಿದ ಮಕ್ಕಳಿಗೆ ವಿಷಯದ ಜತೆಗೆ ಹಾಳೆ, ಪೆನ್ಸಿಲ್‌, ಬಣ್ಣಗಳನ್ನು ''''''''ಕನ್ನಡಪ್ರಭ'''''''' ನೀಡಿತ್ತು. ಪ್ರತಿಯೊಂದು ಮಗುವಿನ ಕೈಯಲ್ಲಿ ಬಿಳಿ ಹಾಳೆ, ಪೆನ್ಸಿಲ್‌ ಹಾಗೂ ಬಣ್ಣಗಳಿಂದ ಮೈದಾಳಿದ ತರಹೇವಾರಿ ಚಿತ್ರಗಳು ಮಕ್ಕಳಲ್ಲಿನ ಅಪಾರ ಪ್ರತಿಭೆಗೆ ಸಾಕ್ಷಿಯಾಗಿದವು. ಒಬ್ಬರಿಗಿಂತ ಒಬ್ಬರು ಅತ್ಯುದ್ಭುತವಾಗಿ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು. ಅತ್ಯುತ್ತಮ ಚಿತ್ರಗಳಿಗೆ ಬಹುಮಾನ ವಿತರಿಸಲಾಯಿತು.

ವಿಜೇತರಿವರು:

8ನೇ ತರಗತಿಯಲ್ಲಿ ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಶಿವಾನಿ ರೇವಣಕರ ಪ್ರಥಮ, ಹುಬ್ಬಳ್ಳಿಯ ಪರಿವರ್ತನ ಗುರುಕುಲ ಶಾಲೆಯ ದುರ್ಗಾ ಚಂದ್ರ ದ್ವಿತೀಯ, ಸೇಂಟ್‌ ಅಂಥೋನಿ ಪಬ್ಲಿಕ್‌ ಸ್ಕೂಲ್‌ನ ಐಶ್ವರ್ಯಾ ಎಂ. ನಾಯಕ ತೃತೀಯ ಸ್ಥಾನ ಪಡೆದರು. 9ನೇ ತರಗತಿಯಲ್ಲಿ ಕಾನ್ವೆಂಟ್‌ ಪ್ರೌಢಶಾಲೆಯ ಸುಖದಾ ಮುರಗೋಡ ಪ್ರಥಮ, ಆದರ್ಶ ನಗರದ ರೋಟರಿ ಪಬ್ಲಿಕ್‌ ಸ್ಕೂಲ್‌ನ ಸಿಂಚನಾ ಅರ್ಕಸಾಲಿ ದ್ವಿತೀಯ, ಕುರುವಿನಕೊಪ್ಪದ ಜಿ.ಎಚ್‌.ಎಸ್‌. ಪ್ರೌಢಶಾಲೆಯ ಸೌಮ್ಯಾ ಮೇಟಿ ತೃತೀಯ ಸ್ಥಾನ ಪಡೆದರು. 10ನೇ ತರಗತಿಯಲ್ಲಿ ಸೇಂಟ್‌ ಮೇರಿ ಸ್ಕೂಲ್‌ನ ಸರ್ವೇಶ ಎಂ. ರೇವಣಕರ ಪ್ರಥಮ, ಸುಳ್ಳದ ಶ್ರೀ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ಭಾಗ್ಯ ಜಿ. ಮಣಕವಾಡ ದ್ವಿತೀಯ, ಧಾರವಾಡದ ಹೋಮ್‌ ಸ್ಕೂಲ್‌ನ ರೀಚಾ ಪಾಂಡೆ ತೃತೀಯ ಸ್ಥಾನ ಪಡೆದರು. ನಿರ್ಣಾಯಕರ ಮೆಚ್ಚುಗೆ ಪಡೆದ ಚಿತ್ರ ಸುಳ್ಳ ಗ್ರಾಮದ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ಸೌಮ್ಯಾ ಲಕ್ಷ್ಮೇಶ್ವರಗೆ ನೀಡಲಾಯಿತು. ಪ್ರಥಮ ಸ್ಥಾನ ಪಡೆದ ಮೂವರಿಗೂ ಸೈಕಲ್‌ ಹಾಗೂ ಪ್ರಮಾಣ ಪತ್ರ ಬಹುಮಾನ ನೀಡಿದರೆ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ, ಗಿಫ್ಟ್‌ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಇನ್ನು, ವಿಜೇತರಿಗೆ ಬಹುಮಾನ ವಿತರಿಸಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಬಹುಮಾನ ಸಿಗದ ವಿದ್ಯಾರ್ಥಿಗಳು ಬೇಸರವಾಗದೇ ಮುಂದಿನ ಬಾರಿ ಪ್ರಯತ್ನ ಮಾಡಿ ಫಲ ಸಿಗಲಿದೆ ಎಂದರು.

ಮಾಜಿ ಸಂಸದ ಐ.ಜಿ. ಸನದಿ, ''''''''ಕನ್ನಡಪ್ರಭ'''''''' ಮತ್ತು ''''''''ಏಷ್ಯಾನೆಟ್‌ ಸುವರ್ಣ ನ್ಯೂಸ್‌'''''''' ಅತ್ಯದ್ಭುತ ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ ಎಂದರು. ಸ್ವರ್ಣಾ ಗ್ರೂಪ್‌ ಆಫ್‌ ಕಂಪನೀಸ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್‌.ವಿ.ಎಚ್‌.ವಿ. ಪ್ರಸಾದ, ಪ್ರತಿ ವರ್ಷ ಆಯೋಜಿಸುತ್ತಿರುವ ಮಕ್ಕಳ ಪ್ರೋತ್ಸಾಹಕ ಈ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರಲಿದೆ ಎಂಬ ಭರವಸೆ ನೀಡಿದರು.

ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷರಾದ ನಂದಿನಿ ಕಶ್ಯಪ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ''''''''ಕನ್ನಡಪ್ರಭ'''''''' ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ವರದಿಗಾರ ಶಿವಾನಂದ ಗೊಂಬಿ ಸ್ವಾಗತಿಸಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಅಚ್ಚುಕಟ್ಟು ವ್ಯವಸ್ಥೆ:

ಪ್ರತಿ ವರ್ಷ ಆಯೋಜಿಸುತ್ತಿರುವ ಈ ಚಿತ್ರಕಲಾ ಸ್ಪರ್ಧೆಯು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಮಕ್ಕಳು ಬೆಳಗ್ಗೆ 7 ರಿಂದಲೇ ಗಾಜಿನ ಮನೆಗೆ ಆಗಮಿಸಿದರು. ಅವರಿಗೆ ಬಿಸ್ಕತ್‌, ಐಸ್‌ಕ್ರೀಂ ಹಾಗೂ ಸ್ಪರ್ಧೆ ಮುಗಿದ ನಂತರ ಲಘು ಉಪಾಹಾರದ ವ್ಯವಸ್ಥೆ ಸಹ ಮಾಡಲಾಗಿತ್ತು. ಶಿಸ್ತು ಬದ್ಧ ಕಾರ್ಯಕ್ರಮ ನಿರ್ವಹಣೆಗೆ ಜೆ.ಜೆ. ಕಾಮರ್ಸ್‌ ಕಾಲೇಜು 49 ಎನ್‌ಸಿಸಿ ಕ್ಯಾಡೆಟ್‌ಗಳು ಕೆಲಸ ಮಾಡಿದರು. ಇನ್ನು, ಮಕ್ಕಳ ಜತೆಗೆ ಆಗಮಿಸಿದ ಚಿತ್ರಕಲಾ ಶಿಕ್ಷಕರಿಗಾಗಿ ಲಕ್ಕಿ ಡಿಪ್‌ ಮೂಲಕ ಆರು ಜನ ಶಿಕ್ಷಕರಾದ ಸೆಂಟ್‌ ಜೋಸೆಫ್‌ ಶಾಲೆಯ ಪೂಜಾ ಕುಲಕರ್ಣಿ, ಹುಬ್ಬಳ್ಳಿ ರೋಟರಿ ಶಾಲೆಯ ಜಯಾಪ್ರಕಾಶ ರುದ್ರಾಪುರ, ಮುತ್ತಗಿಯ ಜಿಎಸ್‌ಎಸ್‌ನ ನಾಗರತ್ನಾ ಮೊರಬದ, ಕುಂದಗೋಳ ಬಾಲಕಿಯ ಶಾಲೆಯ ಸಾಯಿರಾಬಾನು, ಹುಬ್ಬಳ್ಳಿ ವಿಜಯನಗರ ಅಕ್ಷರ ವಿದ್ಯಾಲಯದ ಜ್ಯೋತಿ ಜಿ. ಹಾಗೂ ಎಸ್‌ಡಬ್ಲೂಆರ್‌ ಶಾಲೆಯ ಎಂ. ಚಂದ್ರಿಕಾ ಅವರಿಗೆ ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಕೊಡಮಾಡುವ ಸೀರೆಗಳನ್ನು ಊಡುಗೊರೆಯಾಗಿ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಸ್ವರ್ಣಾ ಗ್ರೂಪ್‌ ಆಫ್‌ ಕಂಪನಿ, ಮಜೇಥಿಯಾ ಫೌಂಡೇಶನ್‌, ಟ್ರ್ಯಾಕ್‌ ಆ್ಯಂಡ್‌ ಟ್ರೈಲ್‌, ಧಾರವಾಡ ಹಾಲು ಒಕ್ಕೂಟ, ಹ್ಯಾಂಗೋ ಐಸ್‌ಕ್ರೀಂ ಹಾಗೂ ದಾವಣಗೆರೆಯ ಬಿ.ಎಸ್‌. ಚೆನ್ನಬಸಪ್ಪ ಆ್ಯಂಡ್‌ ಸನ್ಸ್‌, ಅದಮ್ಯ ಚೇತನ ಪ್ರಾಯೋಜಕತ್ವ ವಹಿಸಿದ್ದವು.

ನಿರ್ಣಾಯಕರಾಗಿ ಕಲಾವಿದರಾದ ಆರ್‌.ಬಿ. ಗರಗ, ಚಂದ್ರು ಕೆ. ಯಡ್ರಾಮಿ, ಜಿ.ಆರ್. ಮಲ್ಲಾಪುರ, ವಸಂತ ಬಳ್ಳಾರಿ, ಶಕುಂತಲಾ ವೆರ್ಣೇಕರ, ಮಂಜುಳಾ ಕೆ.ವಿ., ಕೆ.ವಿ. ಶಂಕರ, ಮಂಜುನಾಥ ಕರಿಗಾರಿ ಮತ್ತು ಭರತ್‌ ಸೂರ್ಯವಂಶಿ ಕಾರ್ಯನಿರ್ವಹಿಸಿದರು.

ಸ್ಪರ್ಧೆಗೆ ಚಿತ್ರನಟಿ ಮೆರುಗು..

ಪ್ರತಿ ಬಾರಿಯ ಚಿತ್ರಕಲಾ ಸ್ಪರ್ಧೆಗೆ ಒಬ್ಬ ವಿಶೇಷ ಹಾಗೂ ಗಮನ ಸೆಳೆಯುವ ಅತಿಥಿಗಳಿರುತ್ತಾರೆ. ಅಂತೆಯೇ, ಈ ಬಾರಿ ಮಿಸ್‌ ಯೂನಿವರ್ಸಲ್‌ ಪೆಟಿಟ್‌-2024 ಕಿರೀಟ ಮುಡಿಗೇರಿಸಿಕೊಂಡ ಬೆಡಗಿ, ಹಲವು ಚಿತ್ರಗಳಲ್ಲಿ ನಟಿಸಿರುವ, ಹುಬ್ಬಳ್ಳಿ ಮೂಲದ ವೈದ್ಯರಾದ ಡಾ. ಶ್ರುತಿ ಹೆಗಡೆ ವಿಶೇಷ ಅತಿಥಿಯಾಗಿದ್ದರು.

ಸಾವಿರಾರು ಮಕ್ಕಳ ಚಪ್ಪಾಳೆ, ಸಿಳ್ಳೆಯೊಂದಿಗೆ ಇಡೀ ಕಾರ್ಯಕ್ರಮದಲ್ಲಿ ಗಮನ ಸೆಳೆದ ನಟಿ ಶ್ರುತಿ ಮಕ್ಕಳ ಚಿತ್ರಕಲೆಗೆ ಸ್ಫೂರ್ತಿಯಾದರು. ಕೊನೆಗೆ ಮಕ್ಕಳೊಂದಿಗೆ ಸೆಲ್ಫಿ ಸಹ ತೆಗೆಯಿಸಿಕೊಂಡು ಅವರ ಉತ್ಸಾಹಕ್ಕೆ ಮತ್ತಷ್ಟು ನೀರು ಎರೆದರು.

Share this article