ಮುಂಡಗೋಡ: ಮುಂಡಗೋಡದ ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರ ಸಂಘವು ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿಯ ಕಾರ್ಯಾಲಯದಲ್ಲಿ ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಮೂರು ವರ್ಷದ ಹಿಂದೆ ಕೇವಲ ನಾಲ್ಕು ಲಕ್ಷ ರುಪಾಯಿ ಬಂಡವಾಳದಲ್ಲಿ ಸ್ವ-ಸಹಾಯ ಗುಂಪಿನ ಹಿನ್ನೆಲೆಯ ಗ್ರಾಮೀಣ ಮಹಿಳೆಯರ ಮುಂದಾಳತ್ವದಲ್ಲಿ ಆರಂಭಿಸಿದ ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರ ಸಂಘ ೨೦೨೪-೨೫ನೇ ಸಾಲಿನಲ್ಲಿ ೧೪ ಲಕ್ಷ ಷೇರು ಬಂಡವಾಳದೊಂದಿಗೆ ₹೧೦ ಕೋಟಿಗಿಂತ ಹೆಚ್ಚಿನ ವ್ಯವಹಾರ ನಡೆಸಿ, ₹೯೦ ಲಕ್ಷ ಆಸ್ತಿ ಸಂಪಾದಿಸಿ, ₹೨.೨೦ ಲಕ್ಷ ನಿವ್ವಳ ಲಾಭ ಹೊಂದಿರುವುದು ಮಹಿಳೆಯರ ‘ಆರ್ಥಿಕ ಚಟುವಟಿಕೆ ನಿರ್ವಹಣೆ’ಯ ಸಾಮರ್ಥ್ಯಕ್ಕೊಂದು ನೈಜ ಉದಾಹರಣೆ ಎಂದರು.
ಮುಂಡಗೋಡ ಪಪಂ ವ್ಯಾಪ್ತಿಯಲ್ಲಿಯ ಹಲವು ಸೌಹಾರ್ದ ಸಹಕಾರಿ ಸಂಘಗಳ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆಯೂ ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರಿಯ ಕಾರ್ಯ ನಿರ್ವಹಣೆ ಉತ್ತಮವಾಗಿದೆ. ಆಡಿಟ್ ವಗೀಕರಣದ ವಿಭಾಗದಲ್ಲಿ ‘ಎ’ ವರ್ಗದಲ್ಲಿದೆ. ಇದಕ್ಕೆಲ್ಲ ಷೇರುದಾರ ಮಹಿಳೆಯರ ಹಾಗೂ ಠೇವಣಿದಾರರ ನಂಬಿಕೆ ಮತ್ತು ವಿಶ್ವಾಸ, ಕಳಕಳಿಯ ಆಡಳಿತ ಮಂಡಳಿ, ದಕ್ಷ ಸಿಬ್ಬಂದಿ ವರ್ಗ, ಉತ್ಸಾಹಿ ಪಿಗ್ಮಿದಾರರ ಅವಿರತ ಶ್ರಮವೇ ಕಾರಣ ಎಂದರು.ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಮಿತ ಸಿ.ಜಿ. ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷೆ ಪುಷ್ಪಾ ಕೊರವರ ವಾರ್ಷಿಕ ಸಾಮಾನ್ಯ ಸಭೆ ನಿರೂಪಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಅನ್ನು ಸಿದ್ದಿ, ದಾಕೂಬಾಯಿ, ಶೃತಿ ಕಲಾಲ, ಸಾಹೇರಾ, ಮಂಗಳಾ ಮೋರೆ, ನೇತ್ರಾವತಿ, ಫಕ್ಕಿರವ್ವಾ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ, ಸಿಇಒ ಸುಮಿತ ಸಿ.ಜಿ., ಎಲ್‌ವಿಕೆಯ ಸಲಹೆಗಾರರಾದ ಲೋಕೇಶ ಗೌಡ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಮಿತ ಪ್ರಾರ್ಥಿಸಿ, ಸ್ವಾಗತಿಸಿದರು. ಮಂಗಳಾ ಮೋರೆ ವಂದಿಸಿದರು.