ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚಿರತೆ ದಾಳಿ ಮಾಡಿ ಸಾಕು ನಾಯಿ ಅರ್ಧ ದೇಹ ತಿಂದಿರುವ ಘಟನೆ ತಾಲೂಕಿನ ಅತ್ತಿಮಾರನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಘಟಿಸಿದೆ.ತಾಲೂಕಿನ ಸಿಂಧಘಟ್ಟ ಗ್ರಾಪಂ ವ್ಯಾಪ್ತಿಯ ಅತ್ತಿಮಾರನಹಳ್ಳಿ ನಂಜೇಗೌಡರು, ಸಾಕಿದ ನಾಯಿ ಚಿರತೆ ಬಾಯಿಗೆ ಆಹಾರವಾಗಿದೆ. ಗ್ರಾಮದ ದೇವಸ್ಥಾನದ ಪಕ್ಕದಲ್ಲಿ ರೈತ ನಂಜೇಗೌಡರ ಮನೆ ಇದ್ದು, ಮನೆ ಕಾಂಪೌಂಡ್ ಒಳಗಡೆ ನಂಜೇಗೌಡರು ಎಂದಿನಂತೆ ಸಾಕು ನಾಯಿಯನ್ನು ಕಟ್ಟಿಹಾಕಿದ್ದರು.
ಶನಿವಾರ ತಡರಾತ್ರಿ ಚಿರತೆ ಹೊಂಚುಹಾಕಿ ನಾಯಿಯನ್ನು ಎಳೆದೊಯ್ದು ತಲೆಯ ಭಾಗವನ್ನು ಕಚ್ಚಿ ಹಾಕಿ ತಿಂದಿದೆ. ಸದಾ ಗದ್ದೆ ಬಯಲು, ಕಬ್ಬಿನ ಗದ್ದೆಗಳು ಹಾಗೂ ತೋಟದ ಮನೆಗಳಲ್ಲಿ ಹಸು, ಎಮ್ಮೆ, ಸಾಕು ನಾಯಿಗಳು ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮದ ಒಳಗಡೆಯೇ ನುಗ್ಗಲಾರಂಭಿಸಿವೆ.ಕಳೆದ ವಾರ ಮಾಳಗೂರು ಗ್ರಾಮದಲ್ಲಿ ಸಂಜೆ ವೇಳೆಯೇ ಹಸುಗಳನ್ನು ಮೇಯಿಸಿಕೊಂಡು ಮನೆಗೆ ಜಾನುವಾರ ಸಮೇತ ಹಿಂತಿರುಗುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು.
ತಾಲೂಕಿನ ಮೆಳ್ಳಳ್ಳಿ, ಕತ್ತರಘಟ್ಟ, ಗವೀಮಠ, ದಬ್ಬೇಘಟ್ಟ, ತೆಂಗಿನಘಟ್ಟ, ಸಂತೇಬಾಚಹಳ್ಳಿ, ಮಾದಾಪುರ, ಮಾಕವಳ್ಳಿ, ಕುಂದನಹಳ್ಳಿ, ಮರುಕನಹಳ್ಳಿ ಸೇರಿದಂತೆ ತಾಲೂಕಿನ ಉದ್ದಗಲಕ್ಕೂ ಚಿರತೆ ಹಾವಳಿ ವ್ಯಾಪಿಸಿದೆ. ನಿತ್ಯ ಒಂದಲ್ಲ ಒಂದು ಕಡೆ ಜಾನುವಾರುಗಳು ಮತ್ತು ಸಾಕು ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ವರದಿಯಾಗುತ್ತಿದೆ.ತಾಲೂಕಿನ ಹರಿಹರಪುರದ ವ್ಯಾಪ್ತಿಯ ಹೇಮಗಿರಿ ನಾಲಾ ಬಯಲಿನ ಕಬ್ಬಿನ ಗದ್ದೆಗಳ ಪರಿಸರದಲ್ಲಿ ಒಂದೇ ಜಾಗದಲ್ಲಿ ಹಲವು ಸಲ ಚಿರತೆ ದಾಳಿ ಮಾಡಿ ಮೇಯುತ್ತಿದ್ದ ಜಾನುವಾರುಗಳನ್ನು ಕೊಂದು ತಿಂದಿದ್ದರೂ ಚಿರತೆ ಸೆರೆ ಹಿಡಿಯುವ ಪ್ರಯತ್ನ ಇದುವರೆಗೂ ನಡೆದಿಲ್ಲ.
ರಾತ್ರಿವೇಳೆ ಹೊಲಗದ್ದೆಗಳಿಗೆ ಹೋಗಲು ಅಂಜುತ್ತಿದ್ದ ರೈತರು ಈಗ ಹಾಡಹಗಲೇ ಏಕಾಂಗಿಯಾಗಿ ಹೊಲಗದ್ದೆಗಳಿಗೆ ಹೋಗಲು ಭಯಪಡುವ ಸನ್ನಿವೇಶ ಎದುರಾಗಿದೆ. ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೆ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯದೆ ಎಚ್ಚರಿಕೆ ವಹಿಸುವಂತೆ ರೈತರಿಗೆ ಕಿವಿಮಾತು ಹೇಳುತ್ತಿದೆ. ತಾಲೂಕು ಆಡಳಿತ ಮತ್ತು ಕ್ಷೇತ್ರದ ಶಾಸಕರು ವಿಶೇಷ ಸಭೆ ನಡೆಸಿ ಅಗತ್ಯ ಕ್ರಮ ವಹಿಸುುವಂತೆ ಜನರು ಮನವಿ ಮಾಡಿದ್ದಾರೆ.