ವರ್ಷಾಂತ್ಯದ ವೇಳೆ ಕೊಡಗಿನಲ್ಲಿ ಅಶಾಂತಿ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

2024 ವರ್ಷ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು. ವರ್ಷಾಂತ್ಯದ ಸಂದರ್ಭ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಕಂಡುಬಂತು.

ಕನ್ನಡಪ್ರಭ ವಾರ್ತೆ ಮಡಿಕೇರಿ

2024 ವರ್ಷ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ಪ್ರಮುಖವಾಗಿ ವರ್ಷಾಂತ್ಯದ ಸಂದರ್ಭ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಕಂಡುಬಂತು.

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ಹಾಕಿದ ಸಂದೇಶವೊಂದು ಪ್ರತಿಭಟನೆ ಮಾತ್ರವಲ್ಲ ಬಂದ್‌ನವರೆಗೂ ಮುಂದುವರಿದು ಇತಿಹಾಸದ ಪುಟ ಸೇರಿತು. ಇದರ ಬೆನ್ನಲ್ಲೇ ಕಟ್ಟೆಮಾಡುವಿನ ದೇವಾಲಯದಲ್ಲಿ ಕೊಡವ ಸಾಂಪ್ರದಾಯಿಕ ಉಡುಪು ಹಾಕಿದವರಿಗೆ ದೇಗುಲದಲ್ಲಿ ತಡೆ ಹಾಕಿದ ಪ್ರಸಂಗವೂ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಯಿತು. ಇಂತಹ ಘಟನೆಗಳು ಶಾಂತಿಪ್ರಿಯರಲ್ಲಿ ಆತಂಕಕ್ಕೆ ಕಾರಣವಾದವು. ಕಟ್ಟೆಮಾಡುವಿನಲ್ಲಿ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಯಿತು. ಪ್ರತಿಭಟನೆ ಮಾಡಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಲೋಕಸಭಾ ಚುನಾವಣೆ: ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿಯ ಯದುವೀರ್ ಒಡೆಯರ್ ಜಯಗಳಿಸಿದರು. ಕಳೆದ ವರ್ಷ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಸೋತು ನಿರಾಶೆಯಿಂದಿದ್ದ ಬಿಜೆಪಿ ಮತ್ತೆ ಪುಟಿದೆದ್ದು, ತನ್ನ ಶಕ್ತಿಯನ್ನು ಪ್ರದರ್ಶಿಸುವಲ್ಲಿ ಈ ವರ್ಷ ಯಶಸ್ವಿಯಾಯಿತು. ಒಡೆಯರ್ ಅವರಿಗೆ ಹೆಚ್ಚಿನ ಮತಗಳು ಮೈಸೂರಿಗಿಂತ ಕೊಡಗಿನಿಂದಲೇ ಬಂದಿದ್ದು ವಿಶೇಷವಾಗಿತ್ತು.

ವನ್ಯಪ್ರಾಣಿ-ಮಾನವ ಸಂಘರ್ಷ :::

ವನ್ಯಜೀವಿ –ಮಾನವ ಸಂಘರ್ಷ ಈ ವರ್ಷವೂ ನಿಲ್ಲಲಿಲ್ಲ. ಮಾನವ ಹಾಗೂ ವನ್ಯಪ್ರಾಣಿಗಳ ಜೀವಗಳಿಗೆ ಈ ವರ್ಷ ಹಾನಿಯಾಯಿತು. ಜನವರಿ 24ರಂದು ಸಿದ್ದಾಪುರ ಸಮೀಪದ ಹೊಸೂರು ಬೆಟ್ಟಗೇರಿಯಲ್ಲಿ ಬುಧವಾರ ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆ ಬೇಬಿ (55) ಎಂಬುವವರು ಸ್ಥಳದಲ್ಲೇ ಮೃತಪಟ್ಟರು. ಈ ಮೂಲಕ ವರ್ಷಾರಂಭದಲ್ಲೇ ಸಾವುಗಳ ಸರಣಿ ಆರಂಭವಾಗಿದ್ದು ವರ್ಷಪೂರ್ತಿ ಘಟಿಸಿತು. ಕಾಡಾನೆ ದಾಳಿಗೆ ಸಿಲುಕಿ 5ಕ್ಕೂ ಅಧಿಕ ಮಂದಿ ಈ ವರ್ಷ ಸಾವನ್ನಪ್ಪಿದರು.

ಹುಲಿ ದಾಳಿಗಳೂ ನಿರಂತರವಾಗಿ ಮುಂದುವರಿಯಿತು. ಏಪ್ರಿಲ್‌ನಲ್ಲಿ ಗೋಣಿಕೊಪ್ಪಲು ಸಮೀಪದ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕೊಂದ ಹುಲಿಯನ್ನು ಮರುದಿನವೇ ಸೆರೆ ಹಿಡಿಯಲಾಯಿತು. ಪೊನ್ನಂಪೇಟೆ ತಾಲೂಕಿನಲ್ಲಿ ನಿರಂತರವಾಗಿ ಹುಲಿ ದಾಳಿಯಾದರೂ ಈ ವರ್ಷವೂ ಹಾವಳಿ ಮಾತ್ರ ನಿಂತಿರಲಿಲ್ಲ.

ಸಂಭ್ರಮದ ಹಬ್ಬ-ಜಾತ್ರೆ : ಮಡಿಕೇರಿ ದಸರಾ ಅಂಗವಾಗಿ ಐತಿಹಾಸಿಕ ಕರಗ ಉತ್ಸವ, ದಸರಾ ದಶಮಂಟಪಗಳ ಶೋಭಾಯಾತ್ರೆ, ಪವಿತ್ರ ಕಾವೇರಿ ತೀರ್ಥೋದ್ಭವ, ಡಿ.13ರಂದು ಕುಶಾಲನಗರದಲ್ಲಿ ಹನುಮ ಜಯಂತಿ ಸೇರಿದಂತೆ ಜಿಲ್ಲೆಯ ಪ್ರಮುಖ ಉತ್ಸವಗಳು ಶಾಂತಿಯುತವಾಗಿ ನಡೆದವು.

ಹವಾಮಾನ ವೈಪರೀತ್ಯ :: ಕೊಡಗಿನಲ್ಲಿ ಈ ವರ್ಷವೂ ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ಬೆಳೆಗಾರರು ಕಂಗಾಲಾದರು. ವರ್ಷಾರಂಭದಲ್ಲೇ ಕೆಲವೆಡೆ ಬಿರುಸಿನ ಮಳೆ ಸುರಿದು ಕಾಫಿ ಫಸಲಿಗೆ ಹಾನಿಯಾಯಿತು. ನಂತರದ ಕೆಲವು ತಿಂಗಳು ಮಳೆ ಬಾರದೇ ಕೆರೆಕಟ್ಟೆಗಳೆಲ್ಲ ಒಣಗಿ ಹೋದವು. ಅಂತರ್ಜಲವೂ ಕುಸಿಯಿತು. ಅನೇಕ ಕೊಳವೆಬಾವಿಗಳು ಬತ್ತಿ ಹೋಗಿ, ತೋಟಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ಕಷ್ಟಕರವಾಗಿ ಪರಿಣಮಿಸಿತು. ಬೇಸಿಗೆ ಮೊದಲ ಮಳೆಯನ್ನು ಕಾಣಬೇಕಾದರೆ ಏಪ್ರಿಲ್ 22ರವರೆಗೂ ಕಾಯಬೇಕಾಯಿತು. ಅಲ್ಲದೆ ಡಿಸೆಂಬರ್ ಮೊದಲ ವಾರದಲ್ಲಿ ಸುರಿದ ಸೈಕ್ಲೋನ್ ಮಳೆಯಿಂದ ಜಿಲ್ಲೆಯಲ್ಲಿ ಬತ್ತ ಹಾಗೂ ಕಾಫಿ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಿತು. ಇದರಿಂದ ಬೆಳೆಗಾರರು ನಷ್ಟ ಎದುರಿಸುವಂತಾಯಿತು.

ಗಿನ್ನಿಸ್ ಪುಟ ಸೇರಿದ ಹಾಕಿ ಉತ್ಸವ

ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ 24ನೇ ಆವೃತ್ತಿಯ ಕುಂಡ್ಯೋಳಂಡ ಟೂರ್ನಿಯು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಯಿತು. ಒಂದು ಸಮುದಾಯದ ಸುಮಾರು 360ಕ್ಕೂ ಅಧಿಕ ತಂಡಗಳು ಸುಮಾರು ಒಂದು ತಿಂಗಳ ಕಾಲ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದು, ವಿಶ್ವ ದಾಖಲೆಗೆ ಕಾರಣವಾಯಿತು. ಈ ಉತ್ಸವದಲ್ಲಿ ಚೇಂದಂಡ ತಂಡ 3ನೇ ಬಾರಿಗೆ ಚಾಂ‍ಪಿಯನ್ ಆಯಿತು.

ಕೊಡಗಿಗೆ ಆಗಮಿಸಿದ್ದ ಸಿಎಂ

ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಜ.24ರಂದು ಹೆಲಿಕಾಫ್ಟರ್ ಮೂಲಕ ವಿರಾಜಪೇಟೆ ಬಳಿಯ ಅಂಬಟ್ಟಿ ಹೆಲಿ ಪ್ಯಾಡ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ವಿರಾಜಪೇಟೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮಡಿಕೇರಿಯಲ್ಲಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆ.2ರಂದು ಕೂಡಾ ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಮಳೆಯಿಂದ ಹಾನಿಗೊಳಗಾದ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ರಸ್ತೆ ಕುಸಿದ ಸ್ಥಳ ವೀಕ್ಷಣೆ ಮತ್ತಿತರ ಕಡೆ ಭೇಟಿ ನೀಡಿದರು. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.

ಯೋಧ ನಿಧನ

ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರ ಗ್ರಾಮದ ಸೈನಿಕ 28 ವರ್ಷದ ದಿವಿನ್ ಚಿಕಿತ್ಸೆ ಫಲಕಾರಿಯಾಗದೆ ಡಿ.29ರಂದು ನಿಧನರಾದರು.

ಪ್ರಮುಖ ಘಟನೆಗಳು

ಪೊನ್ನಂಪೇಟೆಯಲ್ಲಿ ಜನವರಿಯಲ್ಲಿ 67ನೇ ರಾಷ್ಟ್ರ ಮಟ್ಟದ (17ರ ವರ್ಷದೊಳಗಿನವರ) ಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿ ನಡೆಯಿತು. ಇದರಲ್ಲಿ ಜಾರ್ಖಂಡ್‌ ತಂಡ ಚಾಂಪಿಯನ್ ಆಯಿತು.

ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದ ಶರಣ್ಯ ರಾವ್ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾರತೀಯ ಭೂಸೇನೆಯ ಕ್ಯಾಪ್ಟನ್ ಆಗಿ ಭೂಸೇನೆಯ ನಾರಿಶಕ್ತಿ ತಂಡವನ್ನು ಮುನ್ನಡೆಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಕೊಡಗಿನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸಿದರು.

ಮಾರ್ಚ್ 8ರಂದು ಕೊಡಗಿನ ವೀರ ಪುತ್ರ, ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಯನ್ನು ಶುಕ್ರವಾರ ಮಡಿಕೇರಿಯಲ್ಲಿ ಸಕಲ ಗೌರವಗಳೊಂದಿಗೆ ಮರು ಸ್ಥಾಪನೆ ಮಾಡಲಾಯಿತು.

ಕೊಡಗು ಜಿಲ್ಲೆಯ ಬಹು ದಿನಗಳ ಬೇಡಿಕೆಯಾಗಿದ್ದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮಂಜೂರು ಮಾಡಿತು, ಅಳವಡಿಸಿತು.

ಕಾಡಂಚಿನ ಪ್ರದೇಶದಲ್ಲಿ ನಕ್ಸಲರ ಸುಳಿದಾಟ ನಡೆಯಿತು.

ಈ ಬಾರಿ ಕೊಡಗು ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು. ಕಳೆದೆಲ್ಲ ವರ್ಷಗಳಿಗಿಂತ ಉತ್ತಮ ಫಲಿತಾಂಶ ದಾಖಲಿಸಿ, ರಾಜ್ಯದಲ್ಲೇ 4ನೇ ಸ್ಥಾನಕ್ಕೇರಿತ್ತು.

Share this article