)
ಶಿವಕುಮಾರ ಕುಷ್ಟಗಿ ಗದಗ
ಗ್ರಾಮೀಣ ಹಾಗೂ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಸಾಮಾನ್ಯವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 7 ಗಂಟೆ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕಿತ್ತು. ಆದರೆ ಪ್ರಸ್ತುತ ಕೇವಲ 5 ಗಂಟೆಗಳಿಗೆ ಇಳಿಸಲಾಗಿದ್ದು, ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗದೆ ರೈತ ಸಮೂಹ ಕಂಗಾಲಾಗಿದೆ. ಹಲವೆಡೆ ಆಕ್ರೋಶಗೊಂಡ ಅನ್ನದಾತರು ಸ್ಥಳೀಯ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಗಳಿಗೆ ತೆರಳಿ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
40 ಸಾವಿರ ಯುನಿಟ್ ಕೊರತೆ:ಗದಗ ಮತ್ತು ರೋಣ ವಿಭಾಗದ 6 ತಾಲೂಕುಗಳ ಗೃಹೋಪಯೋಗಿ, ವಾಣಿಜ್ಯ, ಕೈಗಾರಿಕೆ, ಕೃಷಿ ಪಂಪ್‌ಸೆಟ್‌ಗಳು, ಶಾಲಾ, ಕಾಲೇಜು ಹಾಗೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸೇರಿದಂತೆ ಜಿಲ್ಲೆಗೆ ಪ್ರತಿ ತಿಂಗಳು ಸರಾಸರಿ ಲೆಕ್ಕಾಚಾರದ ಪ್ರಕಾರ ಪ್ರತಿದಿನ 2 ಲಕ್ಷಕ್ಕೂ ಅಧಿಕ ಯುನಿಟ್‌ಗಳ ಬೇಡಿಕೆ ಇದ್ದು, ಕೇವಲ 1.60 ಲಕ್ಷ ಯುನಿಟ್ ಮಾತ್ರ ಸರಬರಾಜಾಗುತ್ತಿದೆ.ಹೀಗಾಗಿ ಪ್ರತಿನಿತ್ಯ ಉಂಟಾಗುತ್ತಿರುವ ಸುಮಾರು 40 ಸಾವಿರ ಯುನಿಟ್ ಕೊರತೆಯನ್ನು ಸರಿದೂಗಿಸಲು ಅನಿವಾರ್ಯವಾಗಿ ಲೋಡ್ ಶೆಡ್ಡಿಂಗ್ ಮೊರೆ ಹೋಗಲಾಗುತ್ತಿದೆ. ಈ ಕೊರತೆಯನ್ನು ನಿಭಾಯಿಸಲು ಕೇಂದ್ರ ಕಚೇರಿಯಿಂದ ಬರುವ ಮೌಖಿಕ ಸಂದೇಶದಂತೆ ವೃತ್ತ ಕಚೇರಿ ಅಧಿಕಾರಿಗಳು ಜಿಲ್ಲೆಯ 25 ಉಪಕೇಂದ್ರಗಳಿಗೆ ಸೂಚನೆ ನೀಡಿ, ಸರದಿ ಪ್ರಕಾರ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದಾರೆ.
ಸಾಮಾನ್ಯವಾಗಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದ ಸಂದರ್ಭದಲ್ಲಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡಿದ್ದನ್ನು, ತುರ್ತು ಸಂದರ್ಭದಲ್ಲಿ ಇಂಡಿಯನ್ ಎಲೆಕ್ಟ್ರಿಸಿಟಿ ಎಕ್ಸ್‌ಚೇಂಜ್(ಐಇಎಕ್ಸ್) ಮೂಲಕ ಮರಳಿ ಪಡೆಯುವ ಸಂಪ್ರದಾಯವಿದೆ. ಆದರೆ ಅಲ್ಲಿಯೂ ರಾಜ್ಯಕ್ಕೆ ಬೇಕಾದಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಿಲ್ಲದ ಕಾರಣ ಇಡೀ ರಾಜ್ಯದಲ್ಲೇ ಕೊರತೆ ಎದುರಾಗಿದೆ. ಒಟ್ಟಾರೆ ಮಳೆಯ ಕೊರತೆಯು ಕೃಷಿ ವಲಯದ ಜತೆಗೆ ವಿದ್ಯುತ್ ಕ್ಷೇತ್ರವನ್ನೂ ಹೈರಾಣಾಗಿಸಿದ್ದು, ಉತ್ತಮ ಮಳೆಯೊಂದೇ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂಬಂತಾಗಿದೆ.
ಸರ್ಕಾರ ಕೂಡಲೇ ಅನ್ಯ ರಾಜ್ಯಗಳಿಂದ ಅಗತ್ಯವಿರುವ ಹೆಚ್ಚುವರಿ ವಿದ್ಯುತ್ ನ್ನು ಖರೀದಿಸಬೇಕು. ರಾಜ್ಯದ ಜನತೆಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಮಾತೆತ್ತಿದರೆ ನಾವು ಬಡವರ ಪರ ಎನ್ನುತ್ತಾರೆ, ಬಡವರಿಗೆ ವಿದ್ಯುತ್ ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದ್ದಾರೆ.