ದಾವಣಗೆರೆ: ದಶಕಗಳ ಸಮಸ್ಯೆಯಾಗಿದ್ದ ಅಶೋಕ ಚಿತ್ರಮಂದಿರ ಎದುರಿನ ರೇಲ್ವೆ ಗೇಟ್ ಸಮಸ್ಯೆ ಪರಿಹರಿಸುವ ಹೆಸರಿನಲ್ಲಿ ಅತ್ಯಂತ ಅವೈಜ್ಞಾನಿಕ ರೇಲ್ವೆ ಕೆಳ ಸೇತುವೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸೇತುವೆಯಿಂದ ಬರುವ ವಾಹನ ಚಾಲಕರು, ಸವಾರರಿಗೆ ಜಿಲೇಬಿ ವಿತರಿಸುವ ಮೂಲಕ ಮಹಿಳಾ ಕಾಂಗ್ರೆಸ್‌ನಿಂದ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಅಶೋಕ ಚಿತ್ರಮಂದಿರ ಎದುರು ಅತ್ಯಂತ ಅವೈಜ್ಞಾನಿಕ ರೇಲ್ವೆ ಕೆಳ ಸೇತುವೆ ನಿರ್ಮಿಸಿದ್ದು, ಜಿಲೇಬಿಯಂತೆ ಸೊಳ್ಳಂಬಳ್ಳವಾಗಿ ಸೇತುವೆ ನಿರ್ಮಿಸಲಾಗಿದೆ. ಇದರಿಂದಾಗಿ ನಿತ್ಯ ಸಾವಿರಾರು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಅವೈಜ್ಞಾನಿಕ ಕೆಳ ಸೇತುವೆಯಿಂದಾಗಿ ನಿತ್ಯ ಹಲವಾರು ವಾಹನಗಳ ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿರುವುದು ಸಾಮಾನ್ಯವಾಗಿದೆ. ಸಂಸದ ಸಿದ್ದೇಶ್ವರ ಅಧಿಕಾರಾವಧಿಯಲ್ಲಿ ದಾವಣಗೆರೆಯ ಹಲವಾರು ಕಡೆ ಅತ್ಯಂತ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಡಿಸಿಎಂ ಟೌನ್ ಶಿಪ್ ಎದುರಿನ ರೇಲ್ವೆ ಕೆಳ ಸೇತುವೆ, ಶಿರಮಗೊಂಡನಹಳ್ಳಿ ಕೆಳ ಸೇತುವೆ ಬಳಿ ಪ್ರತಿಭಟಿಸಲಿದ್ದೇವೆ ಎಂದು ಅವರು ತಿಳಿಸಿದರು.ಇನ್ನೂ ವಿವಿಧ ಹಂತದಲ್ಲಿ ವಿನೂತನ ಹೋರಾಟ ನಡೆಸಲಿದ್ದೇವೆ. ಅವೈಜ್ಞಾನಿಕ ಕೆಳ ಸೇತುವೆಗಳ ನಿರ್ಮಾಣದಿಂದಾಗಿ ಜನ ಸಾಮಾನ್ಯರು, ತಳ್ಳುಗಾಡಿಯವರು, ವಿವಿಧ ವಾಹನ ಚಾಲಕರ ಪರದಾಡ ತಪ್ಪಿಲ್ಲ. ನಮ್ಮ ಹೋರಾಟವಂತೂ ಇಲ್ಲಿಗೆ ನಿಲ್ಲುವುದೂ ಇಲ್ಲ ಎಂದು ಎಚ್ಚರಿಸಿದರು.
ಅಶೋಕ ಟಾಕೀಸ್ ಎದುರಿನ ರೇಲ್ವೆ ಕೆಳಸೇತುವೆಯಲ್ಲಿ ಸಂಚರಿಸುವುದೇ ಹರಸಾಹಸದ ಕೆಲಸವಾಗಿದೆ. ಹಾಗಾಗಿ ಮಹಿಳಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಕೆಳ ಸೇತುವೆಯಿಂದ ಸುರಕ್ಷಿತವಾಗಿ ಹೊರ ಬಂದ ಜನರಿಗೆ, ವಾಹನ ಚಾಲಕರು, ಸವಾರರಿಗೆ ಜಿಲೇಬಿ ನೀಡುತ್ತಿದ್ದಾರೆ. ಸಂಸದ ಸಿದ್ದೇಶ್ವರ ಅಣತಿಯಂತೆ ಇಂತಹ ಕಾಮಗಾರಿ ನಡೆದಿದ್ದು, ಇದೇ ಸಿದ್ದೇಶ್ವರರ ಸಾಧನೆ ಎಂದು ವ್ಯಂಗ್ಯವಾಡಿದರು.