ಮುಂಡಗೋಡದಲ್ಲಿ ಅವೈಜ್ಞಾನಿಕ ಗಟಾರ ನಿರ್ಮಾಣ: ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : May 11, 2025, 11:50 PM IST
ಮುಂಡಗೋಡ: ಪಟ್ಟಣದ ಕೆಲ ಬಡಾವಣೆಗಳಲ್ಲಿ ದೂರದೃಷ್ಟಿ ಇಲ್ಲದೆ ಅವೈಜ್ಞಾನಿಕವಾಗಿ ಗಟಾರಗಳನ್ನು ನಿರ್ಮಿಸಲಾಗಿದ್ದು, ಕೊಳಚೆ ನೀರು ಹರಿದು ಮುಂದೆ ಹೋಗಲಾಗದೆ ಅಲ್ಲಿಯೇ ನಿಲ್ಲುತ್ತಿರುವುದರಿಂದ ಕೊಳಚೆ ಪ್ರದೇಶವೆಂಬಂತೆ ಬಾಸವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. | Kannada Prabha

ಸಾರಾಂಶ

ರಸ್ತೆಗಿಂತ ಎತ್ತರವಾಗಿ ಅವೈಜ್ಞಾನಿಕವಾಗಿ ಪಕ್ಕಾ ಗಟಾರ್ ನಿರ್ಮಾಣ ಮಾಡಲಾಗಿದೆ.

ಮುಂಡಗೋಡ: ಪಟ್ಟಣದ ಕೆಲ ಬಡಾವಣೆಗಳಲ್ಲಿ ದೂರದೃಷ್ಟಿ ಇಲ್ಲದೇ ಅವೈಜ್ಞಾನಿಕವಾಗಿ ಗಟಾರಗಳನ್ನು ನಿರ್ಮಿಸಲಾಗಿದ್ದು, ಕೊಳಚೆ ನೀರು ಹರಿದು ಮುಂದೆ ಹೋಗಲಾಗದೇ ಅಲ್ಲಿಯೇ ನಿಲ್ಲುತ್ತಿದೆ. ಇದರಿಂದ ಕೊಳಚೆ ಪ್ರದೇಶವೆಂಬಂತೆ ಭಾಸವಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿಯ ಹೊಸ ಓಣಿ ಬಸವೇಶ್ವರ ನಗರ ಬಡಾವಣೆ ಸೇರಿದಂತೆ ಕೆಲವೆಡೆ ರಸ್ತೆಗಿಂತ ಎತ್ತರವಾಗಿ ಅವೈಜ್ಞಾನಿಕವಾಗಿ ಪಕ್ಕಾ ಗಟಾರ್ ನಿರ್ಮಾಣ ಮಾಡಲಾಗಿದೆ. ಕೊಳಚೆನೀರು ಹರಿದು ಹೋಗದೇ ಅಲ್ಲಲ್ಲಿಯೇ ನಿಂತು ಗಬ್ಬು ನಾರುತ್ತಿದೆ. ಸೊಳ್ಳೆ ಕೀಟಗಳ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದರಿಂದ ಸ್ಥಳೀಯರು ಪರದಾಡುವಂತಾಗಿದೆ.

ಪಟ್ಟಣ ಪಂಚಾಯತ ಎಂಜಿನಿಯರ್ ಗಳು ಕನಿಷ್ಠ ಜ್ಞಾನವಿಲ್ಲದವರಂತೆ ಹೇಗೆ ಯೋಜನೆ ರೂಪಿಸಿ ಗಟಾರ ನಿರ್ಮಾಣ ಮಾಡುತ್ತಾರೆ? ಹೀಗಿದ್ದರೆ ಗಟಾರ ನಿರ್ಮಾಣ ಮಾಡುವ ಅವಶ್ಯಕತೆ ಏನಿತ್ತು? ಗಟಾರ ನಿರ್ಮಾಣ ಮಾಡದಿದ್ದರೆ ಕೊಳಚೆ ನೀರು ಭೂಮಿಯಲ್ಲಿಯೇ ಇಂಗಿ ಕನಿಷ್ಠ ಸೊಳ್ಳೆ ಕಾಟವಾದರೂ ಇರುತ್ತಿರಲಿಲ್ಲ. ಅವೈಜ್ಞಾನಿಕವಾಗಿ ಅರ್ಧಂಬರ್ಧ ಗಟಾರ ನಿರ್ಮಾಣ ಮಾಡಿ ಬಿಡಲಾಗಿರುವುದರಿಂದ ಅಸ್ವಚ್ಛತೆಯಿಂದ ತೊಂದರೆ ಅನುಭವಿಸುವಂತಾಗಿದೆ. ಮಳೆ ಪ್ರಾಂಭವಾದರೆ ಕೊಳಚೆ ನೀರು ಸಂಪೂರ್ಣ ರಸ್ತೆಯ ಮೇಲೆ ಹರಿಯುತ್ತದೆ ಎಂದು ದೂರಿರುವ ಜನತೆ, ಪಟ್ಟಣ ಪಂಚಾಯತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಪಟ್ಟ ಪಟ್ಟಣ ಪಂಚಾಯತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಇಂತಹ ಅವೈಜ್ಞಾನಿಕ ಗಟಾರಗಳನ್ನು ಗುರುತಿಸಿ ಸರಾಗವಾಗಿ ಕೊಳಚೆ ನೀರು ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕೆಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಪಪಂ ಅಧಿಕಾರಿಗಳ ಹಾಗೂ ಸದಸ್ಯರ ಇಚ್ಛಾಶಕ್ತಿ ಕೊರತೆ ಹಾಗೂ ಅವೈಜ್ಞಾನಿಕವಾಗಿ ಯೋಜನೆ ರೂಪಿಸಿರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಈ ಬಗ್ಗೆ ಪರಿಶೀಲಿಸಿ ಸ್ಥಳೀಯ ಆಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌