ಕಾಫಿ ನಾಡಲ್ಲಿ ಬೆಂಬಿಡದ ವರುಣ: ಈ ವರ್ಷದಲ್ಲಿ ಶೇ. 12 ರಷ್ಟು ಹೆಚ್ಚುವರಿ ಮಳೆ

KannadaprabhaNewsNetwork |  
Published : Oct 27, 2025, 12:00 AM IST

ಸಾರಾಂಶ

ಚಿಕ್ಕಮಗಳೂರು, ಕಾಫಿಯ ನಾಡು ಪೂರ್ಣ ಪ್ರಮಾಣದಲ್ಲಿ ಈ ಬಾರಿ ಮಳೆ ನಾಡಾಗಿದೆ. ಈವರೆಗೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿಲ್ಲ, ಭಾನುವಾರವೂ ಕೂಡ ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದೆ. ಹೀಗಾಗಿ ರೈತರು ಸೇರಿದಂತೆ ಎಲ್ಲಾ ವರ್ಗದವರ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ.

- ಜಿಲ್ಲೆಯ 9 ತಾಲೂಕುಗಳ ಪೈಕಿ ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಮಳೆ, 281 ಮನೆಗಳಿಗೆ ಹಾನಿ

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿಯ ನಾಡು ಪೂರ್ಣ ಪ್ರಮಾಣದಲ್ಲಿ ಈ ಬಾರಿ ಮಳೆ ನಾಡಾಗಿದೆ. ಈವರೆಗೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿಲ್ಲ, ಭಾನುವಾರವೂ ಕೂಡ ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಮುಂದುವರಿದಿದೆ. ಹೀಗಾಗಿ ರೈತರು ಸೇರಿದಂತೆ ಎಲ್ಲಾ ವರ್ಗದವರ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ.

ಜಿಲ್ಲೆಯಲ್ಲಿ ಜನವರಿ 1 ರಿಂದ ಅಕ್ಟೋಬರ್‌ 24 ರವರೆಗೆ ಸರಾಸರಿ ವಾಡಿಕೆ ಮಳೆ 1738 ಮೀ.ಮೀ. ಆದರೆ, ಈ ವರ್ಷದಲ್ಲಿ ಇದೇ ಅವಧಿಯಲ್ಲಿ ಬಂದಿರುವ ಮಳೆ 1950 ಮಿ.ಮೀ. ಅಂದರೆ, ಒಟ್ಟಾರೆ ಶೇ. 12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯ 9 ತಾಲೂಕುಗಳ ಪೈಕಿ ಅತಿ ಹೆಚ್ಚು ಅಂದರೆ ಶೇ. 115 ರಷ್ಟು ಮಳೆ ಚಿಕ್ಕಮಗಳೂರು ತಾಲೂಕಿನಲ್ಲಿ ಬಂದಿದೆ.

ಜನವರಿ ಮಾಹೆಯಲ್ಲಿ ಕಾಫಿ ನಾಡಿನಲ್ಲಿ ಆರಂಭವಾದ ಮಳೆ ಜನ ಜೀವನದ ಮೇಲೆ ಮಾತ್ರವಲ್ಲ, ಕಾಫಿ, ಅಡಕೆ, ರಬ್ಬರ್‌, ಮೆಣಸು ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬುವುದು ಜನರಿಗೆ ಮರೆತು ಹೋಗಿದೆ. ಅಂದರೆ, ಎಲ್ಲಾ ಕಾಲದಲ್ಲೂ ಮಳೆ ಬರುತ್ತಿದೆ. ಹಾಗಾಗಿ ಅಡಕೆಗೆ ಎಲೆ ಚುಕ್ಕಿ ರೋಗ, ಕಾಫಿಗೆ ಬೋರರ್‌ ಹೀಗೆ ಎಲ್ಲಾ ಬೆಳೆಗಳಲ್ಲಿ ರೋಗ ಬಾಧೆ ಕಾಣಿಸಿಕೊಂಡಿದೆ.

ಮಳೆಯಿಂದಾಗಿ ಅಜ್ಜಂಪುರ, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಈರುಳ್ಳಿ ಬೆಳೆ ಹಾಳಾಯಿತು. ಸದ್ಯ ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಅಡಕೆ ಕೊಯ್ಲು ಆರಂಭವಾಗಬೇಕಿತ್ತು. ಮಳೆಯಿಂದ ಕೊಯ್ಲು ಮುಂದೂಡುವ ಪರಿಸ್ಥಿತಿ ಬಂದಿದೆ. ಇದು, ಅನಿವಾರ್ಯತೆಯಾದರೂ ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ.ಮನೆಗಳಿಗೆ ಹಾನಿ: ನಿರಂತರ ಮಳೆ, ಗಾಳಿಗೆ ಹಲವೆಡೆ ಭೂ ಕುಸಿತ, ಮನೆಗಳಿಗೆ ಹಾನಿ ಉಂಟಾಗಿದೆ. ಈವರೆಗೆ 281 ಮನೆ ಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಐದು ಮಂದಿ ಮೃತಪಟ್ಟಿದ್ದಾರೆ. 11 ಜಾನುವಾರುಗಳು ಮೃತಪಟ್ಟಿವೆ.

ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿದು, ಹಲವು ದಿನಗಳ ಕಾಲ ನದಿ ಪಾತ್ರ ಗಳಲ್ಲಿನ ತೋಟಗಳು, ಹೊಲ ಗದ್ದೆಗಳು ಜಲಾವೃತವಾಗಿದ್ದವು. ಈ ಬಾರಿ ಹಳ್ಳಗಳು ತುಂಬಿ ಕೆರೆಗಳು ಕೋಡಿ ಬಿದ್ದ ಪರಿಣಾಮ ಬಯಲುಸೀಮೆಯಲ್ಲೂ ಹೊಲಗದ್ದೆಗಳು, ತೋಟಗಳು ಜಲಾವೃತವಾಗಿದ್ದವು. ಈವರೆಗೆ 8.29 ಹೆಕ್ಟೇರ್‌ ಕೃಷಿ ಮತ್ತು 3.30 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಕಡೂರು, ಅಜ್ಜಂಪುರ ತಾಲೂಕುಗಳ ಹೊರತುಪಡಿಸಿ ಇನ್ನುಳಿದ 7 ತಾಲೂಕುಗಳಲ್ಲಿ ಮಳೆಯಿಂದಾಗಿ ರಸ್ತೆಗಳಿಗೆ ಹಾನಿ ಸಂಭವಿಸಿದೆ. 496.15 ಕಿ.ಮೀ. ರಸ್ತೆಗಳು ಹಾಗೂ 66 ಸೇತುವೆಗಳಿಗೆ ಹಾನಿ ಸಂಭವಿಸಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ, ಎನ್‌.ಆರ್‌.ಪುರ ತಾಲೂಕುಗಳಲ್ಲಿ ರಸ್ತೆಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ.

ಈ ಬಾರಿ ಕೊಪ್ಪ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಬಲವಾಗಿ ಬೀಸಿದ ಗಾಳಿಗೆ ಹಲವೆಡೆ ಮರಗಳು ಬಿದ್ದಿದ್ದರೆ, ಕಡೂರು ತಾಲೂಕಿನಲ್ಲಿ ಮಿಂಚು ಸಡಿಲಿನ ಅಬ್ಬರ ಜೋರಾಗಿತ್ತು. ಒಟ್ಟಾರೆ, ಈ ವರ್ಷದಲ್ಲಿ ಕಾಫಿ ನಾಡು ಪೂರ್ಣ ಪ್ರಮಾಣದಲ್ಲಿ ಮಳೆ ನಾಡಾಗಿದೆ. ಕಾಲಗಳು ಮರೆತು ಹೋಗಿದೆ.---- ಬಾಕ್ಸ್‌----ತಾಲೂಕು - ಹೆಚ್ಚುವರಿ ಮಳೆ (ಶೇಕಡವಾರು)

-- --ಚಿಕ್ಕಮಗಳೂರು115

-- --

ಕಡೂರು29

-- --

ತರೀಕೆರೆ29

--

ಅಜ್ಜಂಪುರ17

-- --

ಕೊಪ್ಪ 22

-- --

ಶೃಂಗೇರಿ37

-- --

ಮೂಡಿಗೆರೆ29

-- --

ಕಳಸ 19

-- --

ಎನ್‌.ಆರ್‌.ಪುರ37

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ