ಮಾಗಳ ರಂಗಾಪುರ ರಸ್ತೆ ಡಾಂಬರು ನಾಪತ್ತೆ

KannadaprabhaNewsNetwork |  
Published : Aug 20, 2024, 12:50 AM IST
ಹೂವಿನಹಡಗಲಿ ತಾಲೂಕಿನ ಮಾಗಳ-ರಂಗಾಪುರ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದು | Kannada Prabha

ಸಾರಾಂಶ

ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ತುಂಗಭದ್ರಾ ನದಿ ತೀರದ, ಐತಿಹಾಸಿಕ ಸುಪ್ರಸಿದ್ಧ ರಂಗಾಪುರದ ಉಗ್ರ ನರಸಿಂಹ ದೇವಸ್ಥಾನಕ್ಕೆ ಹೋಗುವ ಮಾರ್ಗ ತೀರಾ ಹದಗೆಟ್ಟಿದ್ದು, ಡಾಂಬರು ಕಾಣುತ್ತಿಲ್ಲ.

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ತುಂಗಭದ್ರಾ ನದಿ ತೀರದ, ಐತಿಹಾಸಿಕ ಸುಪ್ರಸಿದ್ಧ ರಂಗಾಪುರದ ಉಗ್ರ ನರಸಿಂಹ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ.

ಈ ದೇವಸ್ಥಾನ ಪುರಾತತ್ವ ಇಲಾಖೆಗೆ ಸೇರಿದೆ. ಈ ದೇವಸ್ಥಾನಕ್ಕೆ ಹೋಗುವ ದಾರಿಗೆ 15 ವರ್ಷಗಳ ಹಿಂದೆ ಡಾಂಬರ್‌ ರಸ್ತೆ ಮಾಡಲಾಗಿತ್ತು. ಈಗ ಮಳೆಯ ಹೊಡೆತಕ್ಕೆ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಈ ದೇವಸ್ಥಾನಕ್ಕೆ ಹೋಗುವ ಭಕ್ತರ ಮೈಯೆಲ್ಲ ಕೆಸರು ಮಾಡಿಕೊಂಡೇ ಹೋಗಬೇಕಿದೆ. ದ್ವಿಚಕ್ರ ವಾಹನವು ಹೋಗಲಾಗದಷ್ಟು ಕೆಟ್ಟು ಹೋಗಿದೆ. ಭಕ್ತರು ವಿಧಿ ಇಲ್ಲದೇ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ, ಕೆಸರಿನಲ್ಲೇ ದೇವರ ದರ್ಶನಕ್ಕೆ ಹೋಗುತ್ತಿದ್ದಾರೆ.

ಕಾರ್ಯರೂಪಕ್ಕೆ ಬಾರದ ಯೋಜನೆ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರು ಉಗ್ರನರಸಿಂಹ ಸ್ವಾಮಿ ದೇವಸ್ಥಾನವನ್ನು ಸುತ್ತುವರಿಯುತ್ತದೆ. ಆದರೆ ರಸ್ತೆ ಸಂಪೂರ್ಣ ಮುಳುಗಡೆ ವ್ಯಾಪ್ತಿಗೆ ಒಳಪಟ್ಟಿದೆ. ದೇವಸ್ಥಾನಕ್ಕೆ ರಕ್ಷಣಾ ಗೋಡೆ ಹಾಗೂ ರಸ್ತೆ ಅಭಿವೃದ್ಧಿಗಾಗಿ ಕಳೆದ 6 ವರ್ಷಗಳ ಹಿಂದೆಯೇ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಆ ಕ್ರಿಯಾಯೋಜನೆ ಈ ವರೆಗೂ ಮೇಲಧಿಕಾರಿಗಳ ಬಳಿಯ ಟೇಬಲ್ ಮೇಲೆ ಧೂಳು ತಿನ್ನುತ್ತಿದೆ. ಈ ಕುರಿತು ಯಾವ ಜನಪ್ರನಿತಿಧಿಗಳಾಗಲಿ, ಸಂಬಂಧಪಟ್ಟ ಪುರಾತತ್ವ ಇಲಾಖೆ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ. ಇದರಿಂದ ದೇವಸ್ಥಾನ, ರಂಗಾಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಅನುದಾನ ಇಲ್ಲದೇ ಅನಾಥವಾಗಿದೆ.

ರಂಗಾಪುರ ರಸ್ತೆ ಪಕ್ಕದಲ್ಲೇ ಮಾಗಳ ಹಿರೇಹಡಗಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್‌ಲೈನ್‌ ಮಾಡಲಾಗಿದೆ. ಮಳೆಗಾಲದಲ್ಲಿ ಪೈಪ್‌ಲೈನ್‌ ಮಾಡಿದ್ದರಿಂದ ಎಲ್ಲೆಂದರಲ್ಲಿ ರಸ್ತೆ ಅಗೆದು ಸಂಪೂರ್ಣ ಹಾಳು ಮಾಡಿದ್ದಾರೆ. ಅಲ್ಪ ಸ್ವಲ್ಪ ಚೆನ್ನಾಗಿದ್ದ ರಸ್ತೆಯೂ ಹಾಳಾಗಿದೆ. ರಸ್ತೆಯಲ್ಲಿರುವ ತಗ್ಗು-ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕೂಡ ಮಾಡುತ್ತಿಲ್ಲ. ರಂಗಾಪುರದ ದತ್ತಾತ್ರೇಯ ಆಶ್ರಮಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಅವರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಈ ರಸ್ತೆ ಕಿತ್ತು ಹಾಕಿರುವ ಗುತ್ತಿಗೆದಾರರು ಕೂಡಲೇ ರಸ್ತೆ ದುರಸ್ತಿ ಮಾಡದಿದ್ದರೆ ಗ್ರಾಮದಲ್ಲಿ ನಡೆಯುತ್ತಿರುವ ಪೈಪ್‌ಲೈನ್‌ ಕಾಮಗಾರಿಯನ್ನು ಬಂದ್‌ ಮಾಡಿ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ರಸ್ತೆ ಅಭಿವೃದ್ಧಿ ಕುರಿತು ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ, ಈ ಗ್ಯಾರಂಟಿ ಯೋಜನೆಯಲ್ಲಿ ಸರ್ಕಾರ ಶಾಸಕರಿಗೆ ಅನುದಾನವೇ ನೀಡುತ್ತಿಲ್ಲ, ಸಣ್ಣ ಪುಟ್ಟ ರಸ್ತೆ ದುರಸ್ತಿ ಮಾಡಲು ಆಗುತ್ತಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆಂದು ಗ್ರಾಮಸ್ಥರು ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?