ಹುಬ್ಬಳ್ಳಿ:
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಿಐಡಿ ಡಿಜಿಪಿ ಅವರನ್ನು ಭೇಟಿಯಾದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದರು. ಅಂಜಲಿ ಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳು ಕೂಡಿಕೊಂಡು ಯಾರನ್ನೋ ಉಳಿಸುವ ಪ್ರಯತ್ನ ಮಾಡುತ್ತಿವೆ. ದಿನಕ್ಕೊಂದು ಹೇಳಿಕೆ ನೀಡಿ ತನಿಖೆ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ವೀರಾಪುರ ಓಣಿಯಲ್ಲಿ ಆರೋಪಿ ಗಿರೀಶನನ್ನು ಮುಂದಿಟ್ಟುಕೊಂಡು ಅಂಜಲಿ ಕೊಲೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಡಿಜಿಪಿ ಸಲೀಂ ಅವರು, ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು.
ಮನವಿ ಸಲ್ಲಿಕೆ ವೇಳೆ ಮಹಾಮಂಡಳದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮಂಜುನಾಥ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ಇಮ್ತಿಯಾಜ್ ಬಿಜಾಪುರ, ಕವಿತಾ ನಾಯ್ಕರ್, ರವಿ ಕದಂ, ರಮೇಶ ಪವಾರ, ಫಾರೂಕ್ ಬೇಪಾರಿ ಸೇರಿದಂತೆ ಇತರರು ಇದ್ದರು.ಸಮಗ್ರ ತನಿಖೆ ನಡೆಸಿ:ಮನವಿ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗುರುನಾಥ ಉಳ್ಳಿಕಾಶಿ, ಅಂಜಲಿ ಕೊಲೆ ಹಿಂದೆ ಯಾರ್‍ಯಾರು ಇದ್ದಾರೆ ಎಂದು ಸಂಪೂರ್ಣ ತನಿಖೆ ನಡೆಸಬೇಕು. ಕೆಲವರು ತನಿಖೆಯ ದಿಕ್ಕು ತಪ್ಪಿಸುತ್ತಿರುವ ಪರಿಣಾಮ ಸರ್ಕಾರ ದಲಿತ ವಿರೋಧಿಯಂತೆ ದಕ್ಷ ಮತ್ತು ದಲಿತ ಸಮುದಾಯದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದೆ ಎಂದು ದೂರಿದರು.
ಈ ನಿಟ್ಟಿನಲ್ಲಿ ತನಿಖೆ ನಡೆದರೆ ಮತ್ತಷ್ಟು ಸತ್ಯಾಸತ್ಯತೆ ಹೊರಬೀಳಲಿದೆ. ಹಾಗಾಗಿ ಪ್ರಕರಣ ದಾಖಲಾದಾಗ ಆರೋಪಿಯನ್ನು ಯಾರು ರಕ್ಷಿಸಿದರು? ಆತನಿಗೆ ಯಾರು ಆಶ್ರಯ ನೀಡಿದ್ದರು? ಆತನ ಜತೆ ಯಾರ್‍ಯಾರು ಸಂಪರ್ಕದಲ್ಲಿದ್ದರು? ಎಂದು ತಿಳಿಯಲಿದೆ. ಈರಣ್ಣ ವಿರುದ್ಧ ಪ್ರಕರಣ ದಾಖಲಾದಾಗ ಜಾಮೀನು ಕೊಡಿಸಿದ್ಯಾರು? ಅಂಜಲಿ ಕೊಲೆ ನಂತರ ಆತ ಏಕೆ ತಲೆಮರೆಸಿಕೊಂಡಿದ್ದಾನೆ? ಎಂಬುದರ ಕುರಿತು ಕೂಲಂಕುಷ ತನಿಖೆಯಾದರೆ ಸತ್ಯಾಂಶ ಬಹಿರಂಗವಾಗಲಿದೆ ಎಂದು ತಿಳಿಸಿದರು.
ಅಂಜಲಿ ವಿಚಾರವಾಗಿ 2021ರಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೆ ನಗರದ ಪ್ರವಾಸಿ ಮಂದಿರದಲ್ಲಿ ಹು-ಧಾ ಮಹಾನಗರ ಕಮಿಷನರ್ ರೇಣುಕಾ ಸುಕುಮಾರ್, ಡಿಸಿಪಿಗಳಾದ ಕುಶಾಲ ಚೌಕ್ಸೆ ಮತ್ತು ರವೀಶ್ ಸಿ.ಆರ್, ಎಸಿಪಿ ಶಿವಪ್ರಕಾಶ ನಾಯ್ಕ ಜತೆ ದಿಢೀರ್ ಸಭೆ ನಡೆಸಿದರು.