ಬಗೆಹರಿಯದ ಗದಗ -ಬೆಟಗೇರಿ ಕುಡಿವ ನೀರಿನ ಸಮಸ್ಯೆ !

KannadaprabhaNewsNetwork | Published : May 16, 2024 12:49 AM

ಸಾರಾಂಶ

ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಹಮ್ಮಗಿ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಡೆಡ್ ಸ್ಟೋರೇಜ್ ನೀರನ್ನು ಜೆಸಿಬಿಗಳ ಮೂಲಕ ಜಾಕ್‌ವೆಲ್‌ ಕಡೆಗೆ ಹರಿಯುವಂತೆ ಮಾಡಿ ಆ ನೀರನ್ನು ಸಂಗ್ರಹಿಸಿ ಅವಳಿ ನಗರಕ್ಕೆ ಪೂರೈಕೆ ಮಾಡುವ ಕಾರ್ಯಕ್ಕೆ ನಗರಸಭೆ, ಜಿಲ್ಲಾಡಳಿತ ಮುಂದಾಗಿದೆ

ಶಿವಕುಮಾರ ಕುಷ್ಟಗಿ ಗದಗ

ಗದಗ- ಬೆಟಗೇರಿ ಅವಳಿ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣಗೊಂಡಿದ್ದು, ನೀರಿಗೆ ಆಸರೆಯಾಗಿರುವ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಹಮ್ಮಗಿ ಬ್ಯಾರೇಜ್ ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕನಿಷ್ಠ ಪ್ರಮಾಣದ ಮಳೆ ಸುರಿಯದ ಹಿನ್ನೆಲೆಯಲ್ಲಿ ಸಂಪೂರ್ಣ ಬರಿದಾಗಿದೆ.

ಹಲವಾರು ದಶಕಗಳಿಂದಲೂ ಗದಗ ಬೆಟಗೇರಿ ಅವಳಿ ನಗರ ಕುಡಿವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, 2ನೇ ಹಂತದ ಕುಡಿವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದರೂ ಅನುಷ್ಠಾನದ ಹಂತದಲ್ಲಾಗಿರುವ ಕೆಲ ಲೋಪ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಬ್ಯಾರೇಜ್ ಸಂಪೂರ್ಣ ಖಾಲಿ: ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಹಮ್ಮಗಿ ಬ್ಯಾರೇಜ್ ಸಂಪೂರ್ಣ ಖಾಲಿಯಾಗಿದ್ದು, ಡೆಡ್ ಸ್ಟೋರೇಜ್ ನೀರನ್ನು ಜೆಸಿಬಿಗಳ ಮೂಲಕ ಜಾಕ್‌ವೆಲ್‌ ಕಡೆಗೆ ಹರಿಯುವಂತೆ ಮಾಡಿ ಆ ನೀರನ್ನು ಸಂಗ್ರಹಿಸಿ ಅವಳಿ ನಗರಕ್ಕೆ ಪೂರೈಕೆ ಮಾಡುವ ಕಾರ್ಯಕ್ಕೆ ನಗರಸಭೆ, ಜಿಲ್ಲಾಡಳಿತ ಮುಂದಾಗಿದೆ. ಆದರೆ ಆ ನೀರು ಅವಳಿ ನಗರದ ಜನಸಂಖ್ಯೆಗೆ ಒಂದು ವಾರವೂ ಸಾಕಾಗುವುದಿಲ್ಲ ಎನ್ನುವುದು ವಾಸ್ತವ ಅಂಶವಾಗಿದೆ.

ಜೋರಾದ ಟ್ಯಾಂಕರ್ ಮಾಫಿಯಾ: ತುಂಗಭದ್ರಾ ನದಿ ಪಾತ್ರದಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಅವಳಿ ನಗರದ ನಳಗಳಲ್ಲಿ ನೀರು ಬರದೇ ತಿಂಗಳುಗಳೇ ಗತಿಸಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಟ್ಯಾಂಕರ್ ಮಾಲೀಕರು ಖಾಸಗಿಯಾಗಿ ನೀರು ಸಪ್ಲೈ ಮಾಡುವ ವೇಳೆಯಲ್ಲಿ ಬಾಯಿಗೆ ಬಂದಂತೆ ದರ ನಿಗದಿ ಮಾಡುತ್ತಿದ್ದು, ಇದು ಮಧ್ಯಮ ವರ್ಗ ಹಾಗೂ ನೌಕರರಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇನ್ನು ಬಡವರೇ ಹೆಚ್ಚಾಗಿ ವಾಸಿಸುವ ಏರಿಯಾಗಳಲ್ಲಿ ನಗರಸಭೆಯವರೇ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದಾರೆ. ಅಲ್ಲಿಯೂ ದರ್ಪ, ದೌರ್ಜನ್ಯ ನಡೆಯುತ್ತಿದ್ದು, ತಾವಾಯಿತು, ತಮ್ಮ ಕುಟುಂಬವಾಯ್ತು ಅಂತಿರುವ ಜನರಿಗೆ ನೀರೇ ಸಿಗುತ್ತಿಲ್ಲ.

ಬಾಟಲ್ ಗಳಲ್ಲಿ ನೀರು ಸಂಗ್ರಹ: ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವೇಳೆಯಲ್ಲಿ ಕೊಡಗಳಲ್ಲಿ ನೀರು ತುಂಬಿಕೊಂಡು ಮನೆಯಲ್ಲಿ ಸಂಗ್ರಹಿಸುವುದು ವಾಡಿಕೆ, ಆದರೆ ಗದಗ ಬೆಟಗೇರಿ ಅ‍ವಳಿ ನಗರದಲ್ಲಿ ನೀರಿನ ಕೊರತೆ ಎಷ್ಟಿದೆ ಎಂದರೆ ಒಮ್ಮೆ ಟ್ಯಾಂಕರ್ ಬಂದರೆ ಎಲ್ಲರಿಗೂ ನೀರು ಸಿಗುತ್ತಿಲ್ಲ ಹಾಗಾಗಿ ಟ್ಯಾಂಕರ್ ಕೊನೆಯಲ್ಲಿ ಉಳಿಯುವ ಅಲ್ಪ ನೀರನ್ನು ಸಹಿತ ಮಕ್ಕಳು, ಮಹಿಳೆಯರು ಬಾಟಲ್ ಗಳಲ್ಲಿಯೂ ಸಹ ಸಂಗ್ರಹಿಸುವಂತಾಗಿದೆ.

ಅವಳಿ ನಗರದ 35 ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಆಡಳಿತ, ವಿರೋಧ ಪಕ್ಷದ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಿಗೆ ಟ್ಯಾಂಕರ್ ತೆಗೆದುಕೊಂಡು ಹೋಗಲು ಬೆಳಗ್ಗೆಯೇ ಆಗಮಿಸಿ ಪ್ರಯತ್ನಿಸಿದರೂ ಒಂದು ವಾರ್ಡ್‌ಗೆ ಗರಿಷ್ಠ 2 ಟ್ಯಾಂಕರ್ ನೀರು ಮಾತ್ರ ಪೂರೈಕೆಯಾಗುತ್ತಿದೆ. ದೊಡ್ಡ ದೊಡ್ಡ ವಾರ್ಡ್‌ಗಳ ಸದಸ್ಯರು ಕೂಡಾ ಹಗಲು ರಾತ್ರಿ ಎನ್ನದೇ ಟ್ಯಾಂಕರ್ ಗಳಿಗಾಗಿ ಕಾಯುತ್ತಾ ನಿಲ್ಲುವಂತಾ ಪರಿಸ್ಥಿತಿ ಗದಗ ಬೆಟಗೇರಿ ಅವಳಿ ನಗರದಲ್ಲಿ ನಿರ್ಮಾಣವಾಗಿದೆ.

ಹಮ್ಮಿಗಿ ಡ್ಯಾಮ್‌ನಲ್ಲಿ ನೀರಿನ ಮಟ್ಟ ಬಹಳಷ್ಟು ಕುಸಿದಿದ್ದರಿಂದ ನೀರು ಸರಬರಾಜು ಮಾಡುವ ಕಾಲುವೆ ಸ್ವಚ್ಛಗೊಳಿಸುತ್ತಿದ್ದೇವೆ. ಇನ್ನು 4-5 ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜು ಪ್ರಾರಂಭವಾಗುವವರೆಗೂ ಟ್ಯಾಂಕರ್ ಮೂಲಕ ಪ್ರತಿ ವಾರ್ಡ್‌ಗೆ ಪೂರೈಕೆಯನ್ನು ನಗರಸಭೆಯ ವತಿಯಿಂದ ಮಾಡುತ್ತಿದ್ದೇವೆ. ಗದಗ-ಬೆಟಗೇರಿಯ ಮಹಾಜನತೆ ನಗರಸಭೆಯೊಂದಿಗೆ ಸಹಕರಿಸಬೇಕು, ನೀರನ್ನು ಪೋಲು ಮಾಡಬಾರದು ಹಾಗೂ ಟ್ಯಾಂಕರ್ ಬಂದಾಗ ತಾಳ್ಮೆಯಿಂದ ನೀರು ಪಡೆದುಕೊಳ್ಳಬೇಕು ಎಂದು

ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಹೇಳಿದರು.

Share this article