ಗ್ರಾಪಂ ಸದಸ್ಯ-ಸಚಿವ ತಂಗಡಗಿ ನಡುವೆ ಅವಾಚ್ಯ ಬೈಗುಳ

KannadaprabhaNewsNetwork |  
Published : Aug 26, 2024 1:38 AM IST
೨೫ಕೆಎನ್‌ಕೆ-೨                                    ಕನಕಗಿರಿ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಸಚಿವ ತಂಗಡಗಿ ಹಾಗೂ ಗ್ರಾ.ಪಂ ಸದಸ್ಯನೊಬ್ಬನ ನಡುವೆ ವಾಗ್ವಾದ ನಡೆಯಿತು.  | Kannada Prabha

ಸಾರಾಂಶ

ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲು ತೆರಳಿದ್ದ ಸಚಿವ ಶಿವರಾಜ ತಂಗಡಗಿ ಹಾಗೂ ಸ್ಥಳೀಯ ಗ್ರಾಪಂ ಸದಸ್ಯರೊಬ್ಬರ ನಡುವೆ ಅಭಿವೃದ್ಧಿ ವಿಚಾರವಾಗಿ ವಾಗ್ವಾದ ಉಂಟಾಗಿದ್ದು, ಅವಾಚ್ಯ ಶಬ್ದಗಳ ಬಳಕೆಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲು ತೆರಳಿದ್ದ ಸಚಿವ ಶಿವರಾಜ ತಂಗಡಗಿ ಹಾಗೂ ಸ್ಥಳೀಯ ಗ್ರಾಪಂ ಸದಸ್ಯರೊಬ್ಬರ ನಡುವೆ ಅಭಿವೃದ್ಧಿ ವಿಚಾರವಾಗಿ ವಾಗ್ವಾದ ಉಂಟಾಗಿದ್ದು, ಅವಾಚ್ಯ ಶಬ್ದಗಳ ಬಳಕೆಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಸುತ್ತಲೂ ಸಾರ್ವಜನಿಕರು ಓಡಾಡಲು ದುಸ್ತರವಾಗಿದೆ. ರಸ್ತೆ ಪಕ್ಕದಲ್ಲಿನ ಚರಂಡಿಗಳಲ್ಲಿ ನೀರು ಮುಂದಕ್ಕೆ ಹೋಗುತ್ತಿಲ್ಲ. ಸಾರ್ವಜನಿಕರಿಗೆ ದಾರಿ ಮಾಡಿಕೊಡಿ ಎಂದು ಸಚಿವರಲ್ಲಿ ಗ್ರಾಪಂ ಸದಸ್ಯ ಕೇಳಿದ್ದಾರೆ. ಇದಕ್ಕೆ ಶಿವರಾಜ ತಂಗಡಗಿ ಮಾತಿನ ಭರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೂ ಮೊದಲು ಗ್ರಾಪಂ ಸದಸ್ಯ ಕಳೆದ ವರ್ಷ ಗ್ರಾಮಕ್ಕೆ ಬಂದವರು, ಈ ವರ್ಷ ಬಂದಿದ್ದೀರಿ ಎಂದಿದ್ದಾನೆ. ಜತೆಗೆ ಸಚಿವರಿಗೆ ಅವಾಚ್ಯ ಶಬ್ದ ಬಳಸಿದ್ದರಿಂದ ಸಚಿವರು ರೊಚ್ಚಿಗೇಳುವಂತೆ ಮಾಡಿತು.

ಸಚಿವ ತಂಗಡಗಿ ಕಾರು ಹತ್ತಿ ಕುಳಿತಿದ್ದ ವೇಳೆ ಗ್ರಾಪಂ ಸದಸ್ಯ ಮತ್ತೆ ಸಚಿವರ ಬಳಿ ಬಂದು ದಾರಿ ಮಾಡಿಕೊಡಿ ಎಂದು ಆಗ್ರಹಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಸಾರ್ವಜನಿಕವಾಗಿಯೇ ತಂಗಡಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಗ್ರಾಪಂ ಸದಸ್ಯ ಹಾಗೂ ಸಚಿವರ ನಡುವೆ ವಾಗ್ವಾದ ನಡೆದಾಗಲೂ ಸ್ಥಳದಲ್ಲಿದ್ದ ಪೊಲೀಸರು ಮಧ್ಯಸ್ಥಿಕೆ ವಹಿಸಲಿಲ್ಲ. ಗ್ರಾಮಸ್ಥರು, ಮುಖಂಡರು ಸಚಿವರನ್ನು ಸಮಾಧಾನಪಡಿಸಿದರು. ಬಳಿಕ ಪೊಲೀಸರು ಗ್ರಾಪಂ ಸದಸ್ಯನನ್ನು ವಿಚಾರಣೆ ನಡೆಸಿದರು.

ಮೊದಲು ಆತ ಅವಾಚ್ಯವಾಗಿ ಮಾತನಾಡಿದಾಗ ನಾನು ಸುಮ್ಮನಿದ್ದೆ. ಹೀಗೆ ಕಾರಿನ ಒಳಗೆ ಹೋಗಿ ಕುಳಿತರೂ ಏರುಧ್ವನಿಯಲ್ಲಿ ಗದರಿಸಿದ ಕಾರಣಕ್ಕೆ ಅವಾಚ್ಯವಾಗಿ ಬೈದಿರುವೆ. ಆತ ಹಕ್ಕುಪತ್ರ ಹಂಚಿಕೆಯಲ್ಲಿ ಹಣ ವಸೂಲಿ ಮಾಡಿದ್ದಾನೆಂಬ ಆರೋಪವಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

PREV