ಕನ್ನಡಪ್ರಭ ವಾರ್ತೆ ಶಹಾಪುರ/ಹುಣಸಗಿ
ಜಿಲ್ಲೆಯ ವಿವಿಧೆಡೆ ಕಳೆದೆರಡು ದಿನಗಳ ಹಿಂದೆ ಬೀಸಿದ ಬಿರುಗಾಳಿ ಹಾಗೂ ಅಕಾಲಿಕ ಮಳೆ ಅಪಾರ ಪ್ರಮಾಣದ ಬೆಳೆಹಾನಿ ಜೊತೆಗೆ ಸಿಡಿಲು ಬಡಿದು 14 ಕುರಿಗಳು ಸಾವನ್ನಪ್ಪಿದ ಘಟನೆ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನಡೆದಿದೆ.ಆಲೀಕಲ್ಲು ಮಳೆಯಿಂದಾಗಿ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಬುಧವಾರ ಸಂಚಾರಿ ಕುರಿಗಾಹಿಗಳಾದ ಹನುಮಂತಪ್ಪ ದೇವಿಕೇರಿ, ಲಕ್ಷ್ಮೀ ಯೆಂಕಪ್ಪ ದೇವಿಕೇರಿ ಅವರಿಗೆ ಸೇರಿರುವ 14 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಮರಗಳು ಬಿದ್ದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
150ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ. 20ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳು ಸುಟ್ಟು ಭಸ್ಮವಾಗಿವೆ ಎಂಬುದಾಗಿ ಜೆಸ್ಕಾಂ ಎಇಇ ಕಡೆಕಾರ್ ಮಾಹಿತಿ ನೀಡಿದ್ದಾರೆ.ಹುಣಸಗಿ ತಾಲೂಕಿನ ಬಪ್ಪರಗಿಯಲ್ಲಿ ಮಳೆಯ ರಕ್ಷಣೆಗೆಂದು ಹುಣಸೆ ಮರದ ಕೆಳಗಿದ್ದ ಹಳೆಯ ಚಿಕ್ಕ ದೇಗುಲದೊಳಗೆ ವ್ಯಕ್ತಿಯೊಬ್ಬ ತೆರಳಿದ್ದ ವೇಳೆ, ಬಾ ಮರ ಬಿದ್ದು ಕರಿಕಲ್ಲಪ್ಪ ತುಂಬಿಗಿ ಎಂಬ ಮೃತ ವ್ಯಕ್ತಿ ಮೃತಪಟ್ಟಿದ್ದಾನೆ. ಮಳೆ ಹಾಗೂ ಗಾಳಿಯಿಂದ ರಕ್ಷಿಸಿಕೊಳ್ಳಲು ಬೃಹತ್ ಹುಣಸೆಮರದ ಕೆಳಗೆ ಇರುವ ಗುಡಿಯೊಳಗೆ ಹೋಗಿ ರಕ್ಷಣೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಧಾರಾಕಾರ ಮಳೆ ಗಾಳಿಗೆ ಹುಣಸೆಮರ ಕೆಳಗಿರುವ ಹಳೆಯ ಗುಡಿಯ ಮೇಲೆ ಬಿದ್ದಿದೆ ಒಳಗಡೆ ರಕ್ಷಣೆ ಪಡೆಯುವ ವ್ಯಕ್ತಿ ಮೇಲೆ ಕಲ್ಲು, ಮಣ್ಣು ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಘಟನೆ ಸ್ಥಳಕೆ ತಹಸೀಲ್ದಾರ ಬಸವಲಿಂಗ ನೈಕೊಡಿ, ಕಂದಾಯ ನಿರೀಕ್ಷಕ ಶಾಂತಗೌಡ ಭೇಟಿ ನೀಡಿದ್ದಾರೆ.
ಶಹಾಪುರ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಆಲೀಕಲ್ಲು ಸಹಿತ ಭಾರೀ ಮಳೆಗೆ ಅಪಾರ ಪ್ರಮಾಣದ ಭತ್ತ, ಸಜ್ಜೆ, ಜೋಳ ಹಾನಿಯಾಗಿದೆ. ಸುಮಾರು 18 ಕುರಿಗಳು ಹಾಗೂ 20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಮರಗಳು, 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 20ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಮಂಡ್ಗಳ್ಳಿ, ಶಾರದಳ್ಳಿ, ಕೊಂಗಂಡಿ ಗ್ರಾಮಗಳಲ್ಲಿ ಸಂಭವಿಸಿದೆ. ಶೀಘ್ರದಲ್ಲೇ ನಷ್ಟ ಸರ್ವೇ ನಡೆಸಲಾಗುವುದು ಎಂದು ತಹಸೀಲ್ದಾರ್ ಉಮಕಾಂತ ಹಳ್ಳೆ ತಿಳಿಸಿದ್ದಾರೆ.ಕುರಿಗಳು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿರ್ದೇಶಕ ಶಾಂತಗೌಡ ನಾಗನಟಗಿ ಮಾತನಾಡಿ, ಕುರಿ ಅಭಿವೃದ್ಧಿ ನಿಗಮದಿಂದ ಅನುಗ್ರಹ ಯೋಜನೆಯಡಿ ಪ್ರತಿ ಕುರಿಗೆ 5 ಸಾವಿರ ರು.ಗಳ ಪರಿಹಾರ ಒದಗಿಸಿಕೊಡಲಾಗುವುದು ಎಂದರು.