ಸಕಾಲಕ್ಕೆ ಬಾರದ ವೇತನ, ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಂಕಷ್ಟ

KannadaprabhaNewsNetwork |  
Published : Dec 23, 2023, 01:45 AM IST
ಕುರುಗೋಡು ಸಮೀಪದ ಕುಡತಿನಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿರುವ ಅಗ್ನಿಶಾಮಕ ಕೇಂದ್ರ | Kannada Prabha

ಸಾರಾಂಶ

ಕುರುಗೋಡು ಸಮೀಪದ ಕುಡತಿನಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿ ಇರುವ ಅಗ್ನಿಶಾಮಕ ದಳದ ಗುತ್ತಿಗೆ ಆಧಾರಿತ ನೌಕರರಿಗೆ ಕೆಲವು ತಿಂಗಳಿಂದ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಬಿಟಿಪಿಎಸ್ ಆಡಳಿತ ಮಂಡಳಿ, ಟೆಂಡರ್‌ ಪಡೆದ ಏಜೆನ್ಸಿಯ ತಾಂತ್ರಿಕ ಸಮಸ್ಯೆಯಿಂದ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಿಂದ ಗುತ್ತಿಗೆ ಆಧಾರದ ನೌಕರರು ಸಮಸ್ಯೆ ಎದುರಿಸುವಂತಾಗಿದೆ.

ಕುರುಗೋಡು: ಸಮೀಪದ ಕುಡತಿನಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿ ಇರುವ ಅಗ್ನಿಶಾಮಕ ದಳದ ಗುತ್ತಿಗೆ ಆಧಾರಿತ ನೌಕರರಿಗೆ ಏಜೆನ್ಸಿಯಿಂದ ಹಲವು ತಿಂಗಳಿಂದ ವೇತನ ಸರಿಯಾಗಿ ಸಿಗದೆ ಪರದಾಡುತ್ತಿದ್ದಾರೆ.

ಬಿಟಿಪಿಎಸ್‌ನ ಅಗ್ನಿಶಾಮಕ ದಳದ ಕೇಂದ್ರದಲ್ಲಿ ಕುಡತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳ ಒಟ್ಟು 41 ಗುತ್ತಿಗೆ ನೌಕರರು ಹಲವಾರು ವರ್ಷಗಳಿಂದ ₹12 ಸಾವಿರ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಬಿಟಿಪಿಎಸ್ ಆಡಳಿತ ಮಂಡಳಿ, ಟೆಂಡರ್‌ ಪಡೆದ ಏಜೆನ್ಸಿಯ ತಾಂತ್ರಿಕ ಸಮಸ್ಯೆಯಿಂದ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಿಂದ ಗುತ್ತಿಗೆ ಆಧಾರದ ನೌಕರರು ಸಮಸ್ಯೆ ಎದುರಿಸುವಂತಾಗಿದೆ.

ಬಿಟಿಪಿಎಸ್‌ನಿಂದ 2021ರ ಕನಿಷ್ಠ ವೇತನದ ಅನುಸಾರ ಏಜೆನ್ಸಿಗೆ ಹಣ ಪಾವತಿ ಮಾಡಿದರೂ ಏಜೆನ್ಸಿಯವರು ಪ್ರಸ್ತುತ ಮೂರು ತಿಂಗಳಿಂದ ನಮಗೆ ವೇತನ ನೀಡಿಲ್ಲ. ಈ ವೇತನಕ್ಕಾಗಿ ಪ್ರತಿ ತಿಂಗಳು ಅಧಿಕಾರಿಗಳ ಕಚೇರಿಗೆ ಅಲೆದು, ದುಂಬಾಲು ಬಿದ್ದು ವೇತನವನ್ನು ನಾವೇ ಮಾಡಿಸಿಕೊಳ್ಳುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಗ್ನಿಶಾಮಕ ದಳದ ಗುತ್ತಿಗೆ ನೌಕರರು ಆರೋಪಿಸಿದ್ದಾರೆ.

ಬಿಟಿಪಿಎಸ್‌ನ ಆಡಳಿತವು 2023ರ ನೂತನ ಕನಿಷ್ಠ ವೇತನ ಪ್ರಕಾರ ಖಾಸಗಿ ಏಜೆನ್ಸಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಆದರೆ 2021ರ ಹಳೆಯ ವೇತನದ ಅನುಸಾರ ಕಡಿಮೆ ಹಣವನ್ನು ಏಜೆನ್ಸಿಗೆ ಬಿಡುಗಡೆ ಮಾಡುವುದರಿಂದ ಗುತ್ತಿಗೆ ನೌಕರರಿಗೆ ಸಕಾಲಕ್ಕೆ ವೇತನ ನೀಡಲು ಆಗುತ್ತಿಲ್ಲ ಎನ್ನುವುದು ಏಜೆನ್ಸಿ ವಾದವಾಗಿದೆ.

ಕಡ್ಡಾಯವಾಗಿ ಪ್ರತಿ ತಿಂಗಳ ವೇತನ ನೀಡಬೇಕು, ಇಎಸ್ಐ ಕಾರ್ಡ್ ಹಾಗೂ ಕನಿಷ್ಠ ವೇತನ ಕಾಯ್ದೆಯ ಅನುಸಾರ ಸಕಾಲಕ್ಕೆ ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಗುತ್ತಿಗೆ ನೌಕರರ ಬೇಡಿಕೆಗಳಾಗಿವೆ.

ಗುತ್ತಿಗೆ ನೌಕರರಿಗೆ ಕನಿಷ್ಠ ವೇತನದ ಅನುಸಾರ ಸಕಾಲಕ್ಕೆ ವೇತನ ಪಾವತಿ ಮಾಡುವಂತೆ ಹಲವಾರು ಬಾರಿ ಬಿಟಿಪಿಎಸ್‌ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಡ ನೌಕರರ ಕುಟುಂಬದವರ ಜೀವನವು ಬಹಳ ಕಷ್ಟಕರವಾಗಿದೆ. ಶೀಘ್ರವಾಗಿ ವೇತನ ಪಾವತಿ ಮಾಡಬೇಕು ಎಂದು ಬಿಟಿಪಿಎಸ್ ಗುತ್ತಿಗೆ ಆಧಾರಿದ ನೌಕರರ ಸಂಘದ ಅಧ್ಯಕ್ಷ ಎಂ. ತಿಪ್ಪೇಸ್ವಾಮಿ ಹೇಳುತ್ತಾರೆ.ಬಿಟಿಪಿಎಸ್ ಅಧಿಕಾರಿಗಳು ನೂತನ ಕನಿಷ್ಠ ವೇತನ ಪ್ರಕಾರ ನಮ್ಮ ಏಜೆನ್ಸಿಗೆ ಹೆಚ್ಚಿನ ಹಣ ಬಿಡುಗಡೆ ಮಾಡದೇ ಹಳೆಯ ವೇತನದ ಅನುಸಾರ ಕಡಿಮೆ ಹಣ ನೀಡುವುದರಿಂದ ನಮಗೆ ಬಹಳ ನಷ್ಟವಾಗುತ್ತಿದೆ. ಗುತ್ತಿಗೆ ನೌಕರರಿಗೆ ವೇತನ ನೀಡಲು ಆಗುತ್ತಿಲ್ಲ ಎಂದು ಪ್ರೊಫೆಷನಲ್ ಸೆಕ್ಯೂರಿಟಿ ಸರ್ವೀಸ್‌ನ ಮೇಲ್ವಿಚಾರಕ ಸಂತೋಷ ಹೇಳುತ್ತಾರೆ.ಬಿಟಿಪಿಎಸ್‌ ವತಿಯಿಂದ ಕನಿಷ್ಠ ವೇತನ ಕಾಯ್ದೆಯ ಅನುಸಾರ ಗುತ್ತಿಗೆ ಪಡೆದ ಏಜೆನ್ಸಿಗೆ ಸಕಾಲಕ್ಕೆ ಹಣ ಪಾವತಿಸಲಾಗಿದೆ. ಏಜೆನ್ಸಿಯು ವಿನಾಕಾರಣ ಬಡ ನೌಕರರಿಗೆ ವೇತನ ಪಾವತಿ ಮಾಡದಿರುವುದು ಸರಿಯಲ್ಲ. ತ್ವರಿತವಾಗಿ ವೇತನ ಪಾವತಿಸಲು ಸಂಬಂಧಪಟ್ಟ ಏಜೆನ್ಸಿಗೆ ಸೂಚಿಸಲಾಗುವುದು ಎಂದು ಬಿಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಚಲಪತಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ