ಸ್ಪೃಶ್ಯ ಸಮಾಜದಲ್ಲಿ ಜಾಗೃತಿ ಮೂಡಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ: ಎನ್. ಮಹೇಶ

KannadaprabhaNewsNetwork | Published : Apr 20, 2025 1:47 AM

ಸಾರಾಂಶ

ಅಸ್ಪೃಶ್ಯತೆ ನಿವಾರಿಸಲು ಮಠಾಧೀಶರು, ಬುದ್ಧಿಜೀವಿಗಳು, ಸಾಹಿತಿಗಳೆಲ್ಲ ದಲಿತರ ಆಯೋಜಿಸುವ ಸಮಾರಂಭದಲ್ಲಿ ಘಂಟಾಗೋಷವಾಗಿ ಮಾತನಾಡುತ್ತಾರೆ. ಅಸಲಿಗೆ ಅವರು ಮಾತನಾಡಿ ತಿಳಿವಳಿಕೆ ಹೇಳಬೇಕಿರುವುದು ಸ್ಪೃಶ್ಯ ಸಮಾಜದಲ್ಲಿ. ಸವರ್ಣೀಯರಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸಬೇಕಿದೆ.

ಹುಬ್ಬಳ್ಳಿ:

ಮಠಾಧೀಶರರು, ಬುದ್ಧಿಜೀವಿಗಳು, ಸಾಹಿತಿಗಳು, ಸಮಾಜ ಸುಧಾರಕರು, ರಾಜಕೀಯ ಮುಖಂಡರು ತಮ್ಮ ಸಮಾಜದ ಜನರ ಮನಸ್ಸಿನಲ್ಲಿ ಸಮಾನತೆ ಅಂಶ ಬಿತ್ತಿದಾಗ ಮಾತ್ರ ದೇಶದಲ್ಲಿಯ ಅಸ್ಪೃಶ್ಯತೆ ತೊಲಗಲು ಸಾಧ್ಯ ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು.

ನಗರದ ಕೇಶವಕುಂಜದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಸ್ಪೃಶ್ಯತೆ ನಿವಾರಿಸಲು ಮಠಾಧೀಶರು, ಬುದ್ಧಿಜೀವಿಗಳು, ಸಾಹಿತಿಗಳೆಲ್ಲ ದಲಿತರ ಆಯೋಜಿಸುವ ಸಮಾರಂಭದಲ್ಲಿ ಘಂಟಾಗೋಷವಾಗಿ ಮಾತನಾಡುತ್ತಾರೆ. ಅಸಲಿಗೆ ಅವರು ಮಾತನಾಡಿ ತಿಳಿವಳಿಕೆ ಹೇಳಬೇಕಿರುವುದು ಸ್ಪೃಶ್ಯ ಸಮಾಜದಲ್ಲಿ. ಸವರ್ಣೀಯರಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ದೇಶದಲ್ಲಿ ಸ್ಪೃಶ್ಯ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು,

ಹಿಂದೂಗಳು ಒಂದೇ ದೇವರ ಪೂಜಿಸುವ, ಆರಾಧಿಸುವ ನಮ್ಮಲ್ಲಿ ಜಾತಿ ಕಂದಕ ಯಾಕೆ? ಜಾತಿಯತೆ ಎನ್ನುವುದು ಇದೊಂದು ಮಾನಸಿಕ ಕಾಯಿಲೆ. ಇಲ್ಲಿ ದಲಿತರಿಗೆ ಚಿಕಿತ್ಸೆ ಬೇಕಿಲ್ಲ. ಅಸ್ಪೃಶ್ಯತೆ ಆಚರಿಸುವ ಸವರ್ಣೀಯರಿಗೆ ನಿಜವಾಗಿ ಚಿಕಿತ್ಸೆ ನೀಡಬೇಕಿದೆ ಎಂದು ಪ್ರತಿಪಾದಿಸಿದರು,

ಸಮಾಜದಲ್ಲಿ ಜಾತಿ ಪದ್ಧತಿ ಎಲ್ಲರಿಂದಲೂ ಆಚರಣೆಯಾಗುತ್ತಿಲ್ಲ. ಕೆಲ ವ್ಯವಸ್ಥಿತ ಶಕ್ತಿಗಳಿಂದ ಸಮಾಜ ಇಬ್ಭಾಗವಾಗಿದೆ. ನಾವೆಲ್ಲ ಒಂದೇ ಎನ್ನುವ ಭಾವವನ್ನು ಈ ಶಕ್ತಿ ವ್ಯವಸ್ಥಿತವಾಗಿ ತಡೆಯುವ ಕೆಲಸ ಮಾಡುತ್ತಿದೆ. ಸರ್ಕಾರ ಆರ್‌ಎಸ್ಎಸ್‌ ಮನುಸ್ಮೃತಿ, ಮನುವಾದ ಆಚರಿಸುತ್ತಿದೆ ಎಂದು ಎಲ್ಲರೂ ಆರೋಪಿಸುತ್ತಾರೆ. ಆದರೆ, ಆರ್‌ಎಸ್‌ಎಸ್‌ ನಿಜವಾಗಿ ಸಂವಿಧಾನ ರಚಿಸಿದ ಅಂಬೇಡ್ಕರ ಅವರ ತತ್ವವನ್ನು, ಸಂವಿಧಾನಗಳ ಆಶಯದಂತೆ ನಡೆಯುತ್ತಿದೆ ಎಂದರು.

ಸಿಎಂ, ತಮಗೆ ಕೇಶವ ಕೃಪಾ ಗರ್ಭಗುಡಿಗೆ ಪ್ರವೇಶ ನೀಡುತ್ತಾರಾ ಎಂದು ಪ್ರತಿಸಲ ಪ್ರಶ್ನಿಸುತ್ತಾರೆ. ನಾನು, ಕೇಶವಕೃಪಾ, ಕೇಶವ ಕುಂಜ ಸೇರಿದಂತೆ ಎಲ್ಲೆಡೆ ಹೋಗಿ ಬಂದಿದ್ದೇನೆ. ಆರ್‌ಎಸ್‌ಎಸ್‌ನಲ್ಲಿ ಜಾತೀಯತೆ ಇಲ್ಲ. ಆದರೆ, ಇಷ್ಟು ವರ್ಷ ಆಡಳಿತ ನಡೆಸುತ್ತಿರುವ ನಿಮ್ಮ ಸ್ವಗ್ರಾಮದಲ್ಲೇ ದಲಿತರಿಗೆ ದೇವಸ್ಥಾನ ಪ್ರವೇಶವಿಲ್ಲ. ಆಡಳಿತ ಮಾಡುತ್ತಿರುವ ನಿಮಗೆ ಸಂವಿಧಾನದ ಆಶಯ ಜಾರಿ ಮಾಡಲು ಆಗುತ್ತಿಲ್ಲ. ಪ್ರತಿಯಾಗಿ ಆರ್‌ಎಸ್‌ಎಸ್‌ ದೋಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾತಿನುದ್ದಕ್ಕೂ ದಲಿತರ ಮೇಲಾದ ದೌರ್ಜನ್ಯ ಪ್ರಕರಣಗಳ ಕುರಿತು ಉಲ್ಲೇಖಿಸಿದ ಅವರು ಕೆಲವರು ಆಚರಿಸುತ್ತಿರುವ ಅಸ್ಪೃಶ್ಯತೆಯಿಂದ ಇಡೀ ಸಮಾಜಕ್ಕೆ ಕಳಂಕ ಬರುತ್ತಿದೆ. ಹೀಗಾಗಿ, ಸಮಾಜದಲ್ಲಿ ಶ್ರೇಣಿಕೃತ ಜಾತಿ ಪದ್ಧತಿ ಹೋಗಲಾಡಿಸಲು ನಾವೆಲ್ಲ ಪಣತೊಡಬೇಕು. ಜಾತೀಯತೆ ಹೀಗೆ ಮುಂದುವರಿದು ನಮ್ಮಲ್ಲೇ ಸಂಘರ್ಷಗಳಾಗಿ ಮತ್ತೆ ಸ್ವಾತಂತ್ರ್ಯ ಕಳೆದುಕೊಳ್ಳುವ ಕಾಲ ದೂರವಿಲ್ಲ ಎಂದೂ ಅವರು ಎಚ್ಚರಿಸಿದರು.

ಆರ್‌ಎಸ್‌ಎಸ್‌ನ ವಿವೇಕ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಜಾತಿ, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಹೊಂದಿದ ದೇಶಕ್ಕೆ ಸಂವಿಧಾನ ರಚಿಸಿದ ಮಹಾನ್‌ ನಾಯಕ ಡಾ. ಬಿ,ಆರ್‌. ಅಂಬೇಡ್ಕರ್‌. ಅವರು ದಲಿತರ ಉದ್ಧಾರಕ್ಕೆ ಶ್ರಮಿಸಿದ ಮೇಧಾವಿ ಎಂದರು.

ಇಂದಿನ ಸಂದರ್ಭದಲ್ಲಿ ಒಳಮೀಸಲಾತಿ, ಜಾತಿಗಣತಿ ಮಾಡುವಾಗ ಡಾ. ಅಂಬೇಡ್ಕರ್‌ ಬಗೆಗೆ ಮಾತನಾಡುವ ಆಡಳಿತಾರೂಢರು ನೈಜವಾಗಿ ಅವರ ಆದರ್ಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಕೆಟ್ಟ ಕೆಲಸ ಮಾಡುತ್ತಿರುವವರು ಅಂಬೇಡ್ಕರ್ ಹೆಸರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಆರ್‌ಎಸ್‌ಎಸ್‌ ತೆಗೆಳೋದು ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ. ಅಂಬೇಡ್ಕರ್‌ ಅವರ ನಿನ್ನ ಜಾತಿ, ಭಾಷೆ ಬಗ್ಗೆ ಕೆಲಸ ಮಾಡುವಾಗ ಇತರ ಜಾತಿ, ಭಾಷೆ ದ್ವೇಷಿಸಬೇಡ ಎಂದಿದ್ದರು. ಅವರು ಎಂದಿಗೂ ಆರ್‌ಎಸ್‌ಎಸ್‌ ದ್ವೇಷಿಸಿರಲಿಲ್ಲ. ಆದರೆ, ಕೆಲವರು ಅಂಬೇಡ್ಕರ್‌ ಆರ್‌ಎಸ್‌ಎಸ್‌ ಅನ್ನು ದ್ವೇಷಿಸುತ್ತಿದ್ದರು ಎಂದು ಸುಳ್ಳು ಹರಡುತ್ತಿದ್ದಾರೆ. ಸ್ವತಃ ಅಂಬೇಡ್ಕರ್‌ ಅವರೇ ಪುಣೆಯಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಎಂದು ತಿಳಿಸಿದರು.

ಮಹಾನ್‌ ನಾಯಕರ ಜಯಂತಿಗ‍ಳನ್ನು ಆಯಾ ಜಾತಿ ಸಮಾಜಕ್ಕೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಆಚರಿಸಬೇಕು, ಎಲ್ಲರ ಮನೆಗಳಲ್ಲೂ ಎಲ್ಲ ಮಹಾನ್‌ ನಾಯಕರ ಭಾ‍ವಚಿತ್ರ ಹಾಕಿ ಅವರ ಆದರ್ಶ ಪಾಲನೆ ಮಾಡುವ ಸಂಕಲ್ಪ ಮಾಡಿದಾಗ ಜಾತೀಯತೆ ತೊಲಗಲು ಸಾಧ್ಯ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯರು ಮಾತನಾಡಿ, ಶರಣರ ವಚನಗಳಂತೆ ನಾವೆಲ್ಲರೂ ಸಮಾನರು ಎಂಬ ಭಾವ ಎಲ್ಲರಲ್ಲಿ ಬೆಳೆಯಬೇಕು ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಲೋಕಹಿತ ಟ್ರಸ್ಟ್‌ನ ಗೌಡಪ್ಪಗೋಳ, ಶ್ರೀಧರ ನಾಡಗೌಡ, ಈರಣ್ಣ ಸಿರಸಂಗಿ ಸೇರಿದಂತೆ ಹಲವರಿದ್ದರು. ಕೃಷ್ಣ ಕಂಬ‍ಳಿ ಪ್ರಾರ್ಥಿಸಿದರು. ಸುಭಾಷ್ ಸಿಂಗ್ ಜಮಾದಾರ ಪರಿಚಯಿಸಿದರು.

Share this article