ಡಾ.ಗುರುರಾಜ ಹೆಬ್ಬಾರ್ ಪುತ್ಥಳಿ ಅನಾವರಣ

KannadaprabhaNewsNetwork | Published : Jun 10, 2024 12:51 AM

ಸಾರಾಂಶ

ಹಾಸನದ ಹೊರ ವಲಯದ ಗವೇನಹಳ್ಳಿ ಬೈ ಪಾಸ್ ರಸ್ತೆ ಬಳಿ ಇರುವ ಕಾಮಧೇನು ಸಹಕಾರಿ ವೃದ್ಧಾಶ್ರಮದ ಆವರಣದಲ್ಲಿ ನಿರ್ಮಿಸಿರುವ ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದಿ.ಗುರುರಾಜ ಹೆಬ್ಬಾರ್ ಅವರ ಪುತ್ಥಳಿ ಅನಾವರಣವನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ನೆರವೇರಿಸಿದರು.

ಕಾಮಧೇನು ವೃದ್ಧಾಶ್ರಮದಲ್ಲಿ ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ । ಜಿಲ್ಲಾ ಒಕ್ಕಲಿಗರ ಸಂಘದ ಮುದ್ದೇಗೌಡ ಉಪಸ್ಥಿತಿ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೊರ ವಲಯದ ಗವೇನಹಳ್ಳಿ ಬೈ ಪಾಸ್ ರಸ್ತೆ ಬಳಿ ಇರುವ ಕಾಮಧೇನು ಸಹಕಾರಿ ವೃದ್ಧಾಶ್ರಮದ ಆವರಣದಲ್ಲಿ ನಿರ್ಮಿಸಿರುವ ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದಿ.ಗುರುರಾಜ ಹೆಬ್ಬಾರ್ ಅವರ ಪುತ್ಥಳಿ ಅನಾವರಣವನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ನೆರವೇರಿಸಿದರು.

ನಂತರ ಜಿ.ಎಲ್.ಮುದ್ದೇಗೌಡ ಮಾತನಾಡಿ, ‘ಡಾ.ಗುರುರಾಜ ಹೆಬ್ಬಾರ್ ತಂದೆಯವರು ಪರಿಚಯವಿದ್ದು, ಲಕ್ವ ಹೊಡೆದವರಿಗೆ ಔಷಧಿ ಕೊಡುವ ಒಂದು ಪದ್ಧತಿ ಇತ್ತು. ಅನೇಕ ಜನರು ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಅದೇ ರೀತಿ ಹೆಬ್ಬಾರ್ ಡಾಕ್ಟರ್ ಕೂಡ ಹಾಸನಕ್ಕೆ ಬಂದು ತಮ್ಮ ಅವಧಿಯಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಇಂತಹ ಸೇವೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಎಲ್ಲರಿಂದ ದೇಣಿಗೆ ಪಡೆದು ಹಿರಿಯ ನಾಗರಿಕರಿಗೆ ಆಶ್ರಯವನ್ನು ಇಲ್ಲಿ ಕೊಟ್ಟು ಜೀವನ ಉತ್ತಮವಾಗಿರಲೆಂದು ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕೆ ಬಹಳಷ್ಟು ಜನ ಹಾಸನದ ಜನತೆ ಸಹಾಯವನ್ನು ಮಾಡಿದ್ದಾರೆ’ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ಮತ್ತು ಗೊರೂರು ರಾಜು ಮಾತನಾಡಿ, ‘ಕಾಮಧೇನು ಸಹಕಾರಿ ವೃದ್ಧಾಶ್ರಮ ಚೈತನ್ಯ ಮಂದಿರ, ಗೋಪಾಲನ ಘಟಕ ಮತ್ತು ಶಿಶುಕೇಂದ್ರ ಅಮೂಲ್ಯ, ವಿಶೇಷ ದತ್ತು ಕೇಂದ್ರವು ಹಾಸನದ ಹೊರ ವಲಯದಲ್ಲಿದ್ದು, ಈ ಸಂಸ್ಥೆಯು ಸಮಾಜಮುಖಿ ಕೆಲಸ ಮಾಡಿಕೊಂಡು ರಾಜ್ಯದ್ಯಾಂತ ಜಯಪ್ರಿಯತೆಯನ್ನು ಗಳಿಸಿದೆ. ಡಾ ಗುರುರಾಜ ಹೆಬ್ಬಾರ್‌ರವರು ೧೦೦ ಜನ ಸದಸ್ಯರಿಂದ ಸ್ಥಾಪಿತವಾದ ಸಂಸ್ಥೆ ಇಂದು ೩೧೮ ಷೇರುದಾರರನ್ನು ಹೊಂದಿದೆ. ಈ ಹಣವನ್ನು ೫೦ ಷೇರುಗಳನ್ನು ಒಟ್ಟು ಎಚ್‌ಡಿಸಿಸಿ ಬ್ಯಾಂಕ್ ತಾಲೂಕು ಶಾಖೆಯಲ್ಲಿ ಒಟ್ಟು ೫,೧೦,೦೦೦ ರು. ಠೇವಣಿ ಮಾಡಿ ಉಪ ನಿಬಂಧಕ ಜೆ. ಕೋಟ್ರೇಶ್‌ರವರಿಗೆ ಅರ್ಜಿ ನೀಡಿ ನೋಂದಾಣಿ ಮಾಡಿಸಲಾಯಿತು’ ಎಂದು ಹೇಳಿದರು.

‘ಸಂಸ್ಥೆಯ ಹೆಸರಿನಲ್ಲಿ ಗವೇನಹಳ್ಳಿ ಗುಂಡೇಗೌಡರಿಂದ ಕೋಳಿ ಫಾರಂ ಇದ್ದ ೩ ಎಕರೆ ಜಮೀನನ್ನು ಖರೀದಿಸಲಾಯಿತು. ಇದರ ರಿಜಿಸ್ಟ್ರೇಷನ್ ಅನ್ನು ಸರ್ಕಾರದಿಂದ ಅನುಮತಿ ಪಡೆಯಲು ಡಾ.ರಾಜಶೇಖರ್ ರವರ ಒಂದು ವರ್ಷದ ಶ್ರಮದಿಂದ ಅನುಮತಿ ದೊರೆಯಿತು. ವಾರ್ಡ್‌ಗಳು ಮತ್ತು ಅಡುಗೆ ಮನೆಯನ್ನು ನವೀಕರಣ ಮಾಡಿ ೨೦೦೩ನೇ ಇಸವಿಯಲ್ಲಿ ೧೦ ಜನ ವೃದ್ಧರಿಂದ ಉಚಿತ ವೃದ್ಧಾಶ್ರಮ ಪ್ರಾರಂಭಿಸಲಾಯಿತು. ಇದೀಗ ಒಟ್ಟು ೩೩೨ ವೃದ್ಧರು ದಾಖಲಾಗಿದ್ದು, ಪ್ರಸ್ತುತ ೪೩ ವೃದ್ಧರಿದ್ದು, ಅದರಲ್ಲಿ ೧೫ ಜನ ಗಂಡಸರು ಮತ್ತು ೨೮ ಜನ ಹೆಂಗಸರು ವಾಸವಿರುತ್ತಾರೆ. ನಂತರ ವೃದ್ದಾಶ್ರಮದ ಜೊತೆಗೆ ಸ್ವರ್ಣಲತಾರವರ ಆಶಯದಂತೆ ಅವರ ಮುಂದಾಳತ್ವದಲ್ಲಿ ಮಕ್ಕಳ ಪಾಲನೆಗಾಗಿ ನಂದಗೋಕುಲವನ್ನು ಪ್ರಾರಂಭಿಸಿ ಎಚ್.ಎಸ್.ಪ್ರಕಾಶ್‌ರವರಿಂದ ಉದ್ಘಾಟಿಸಲಾಯಿತು’ ಎಂದು ಸಂಸ್ಥೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.

ಕಾಮಧೇನು ಸಹಕಾರಿ ವೃದ್ಧಾಶ್ರಮದ ಅಧ್ಯಕ್ಷ ಎಂ.ಮಾಧವ ಶೆಣೈ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್.ಅನುಪಮಾ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಎಚ್.ಪಿ.ಮೋಹನ್, ಡಾ.ಅಬ್ದುಲ್ ಬಶೀರ್, ಕೆ.ಪಿ.ಪುಟ್ಟಸ್ವಾಮಿ, ವಿದ್ಯಾಶ್ರಮದ ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಖಜಾಂಚಿ ಎಚ್.ಡಿ. ಶಾಂತಿಪ್ರಸಾದ್, ನಿರ್ದೇಶಕರಾದ ಎಚ್.ಸಿ.ಆನಂದ್, ಬಿ.ಸಿ.ರವಿಕುಮಾರ್, ಕೆ.ಚಂದ್ರಶೇಖರ್, ಪಿ. ಜಯರಾಂ, ಜಿ.ಪ್ರತಿಭಾ, ಇಂದಿರಾ ಮೂರ್ತಿ, ಜಯಲಕ್ಷ್ಮಿ ರಾಜಣ್ಣ, ರಾಜು ಗೊರೂರು, ಎಚ್.ಗುರುಪ್ರಸಾದ್ ಗೌಡ, ಎನ್.ಎಸ್.ಕೃಷ್ಣಯ್ಯಂಗಾರ್, ಜಿ.ಚಂದ್ರಶೇಖರ್, ಕೆ.ಎಚ್.ಪರಮೇಶ್, ಎಂ.ಆರ್.ಅಮೃತ, ವೆಂಕಟರಾಮು, ಆಲೂರು ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜೇಗೌಡ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ಹಿರಿಯ ನಾಗರಿಕ ವೇದಿಕೆಯ ಜಯಲಕ್ಷ್ಮಿ ರಾಜಣ್ಣ, ಮಹಾಲಕ್ಷ್ಮಿ ಇದ್ದರು.

Share this article