ಬೇಡದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ

KannadaprabhaNewsNetwork |  
Published : Jun 17, 2026, 02:45 AM IST
ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತಾದ ಜಾಗೃತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಬೇಡದ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬಹುದು. ಸಮಿತಿಯು ಮುಂದಿನ ಪುನರ್ವಸತಿಗಾಗಿ ದತ್ತು ನೀಡುವ ಮೂಲಕ ಮಗುವಿಗೆ ಸುಭದ್ರ ಬದುಕನ್ನು ಕಟ್ಟಿಕೊಡುತ್ತದೆ

ಕೊಪ್ಪಳ:ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಗ್ರಾಪಂ ಸಹಯೋಗದಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತಾದ ಜಾಗೃತಿ (ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ) ಕಾರ್ಯಕ್ರಮ ನಡೆಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ ರಡ್ಡಿ ಮಾತನಾಡಿ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಯಾರೇ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098ಗೆ ಕರೆ ಮಾಡಿ, ಮಾಹಿತಿಯನ್ನು ನೀಡಿದಲ್ಲಿ ತಂಡವು ಆಗಮಿಸಿ, ಮಗುವನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಪಡಿಸಲಾಗುವುದು. ಬೇಡವಾದ ಮಗುವನ್ನು ಕಸದ ತೊಟ್ಟಿ, ಮೋರಿ, ದೇವಸ್ಥಾನ, ರಸ್ತೆಬದಿಗಳಲ್ಲಿ ಬಿಸಾಡುವುದು ಕಾನೂನುಬಾಹಿರ, ಅಮಾನವೀಯ ಮತ್ತು ಅಪಾಯಕಾರಿ ಕೃತ್ಯವಾಗಿದೆ ಎಂದರು.

ಬೇಡದ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬಹುದು. ಸಮಿತಿಯು ಮುಂದಿನ ಪುನರ್ವಸತಿಗಾಗಿ ದತ್ತು ನೀಡುವ ಮೂಲಕ ಮಗುವಿಗೆ ಸುಭದ್ರ ಬದುಕನ್ನು ಕಟ್ಟಿಕೊಡುತ್ತದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಭಾ ಕಾಶಿಮಠ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ವಿವಿಧ ಕಾನೂನುಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು. ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಭೇದಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ದಿಕ, ಅಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟುಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆ ವಿಧಿಸಬಹುದಾಗಿದೆ ಎಂದರು.

18 ವರ್ಷದೊಳಗಿನ ಹೆಣ್ಣು ಮಗುವಿಗೆ ಮತ್ತು 21 ವರ್ಷದೊಳಗಿನ ಗಂಡು ಮಗುವಿಗೆ ವಿವಾಹವನ್ನು ಮಾಡುವುದನ್ನು ನಿಷೇಧಿಸಿದೆ. ಬಾಲ್ಯವಿವಾಹವನ್ನು ಮಾಡುವವರು, ಭಾಗವಹಿಸುವವರು, ಆಯೋಜಿಸುವವರು ಎಲ್ಲರಿಗೂ ಕನಿಷ್ಠ 1 ವರ್ಷದಿಂದ 2 ವರ್ಷಗಳ ವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಬಾಲ್ಯವಿವಾಹಗಳನ್ನು ಮಾಡಬೇಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ ಎಂದು ಹೇಳಿದರು.

ಮಾಲಗಿತ್ತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಡಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ದೊಡ್ಡನಗೌಡ, ಹನುಮಂತ ಲಮಾಣಿ, ಹನುಮಸಾಗರ ಪೊಲೀಸ್ ಠಾಣೆಯ ಎಎಸ್‌ಐ ಶಂಕರ್ ಮೇಟಿ ಉಪಸ್ಥಿತರಿದ್ದರು. ಮುತ್ತಣ್ಣನವರು ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ತಿಲಗಾರ್ ಅವರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವವರೇ ಸಾಧಕರು: ಸ್ವಾಮೀಜಿ
ಮರಾಠ ಸಮಾಜ ಸೇವಾ ಸಂಘ ೩೦ನೇ ವಾರ್ಷಿಕೋತ್ಸವ